ಕಪಿಲಾ ನದಿಯಲ್ಲಿ ಸಂಭ್ರಮದ ತೆಪ್ಪೋತ್ಸವ

7
ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರೆ ಪ್ರಯುಕ್ತ ವಿಜೃಂಭಣೆಯಿಂದ ಆಚರಣೆ

ಕಪಿಲಾ ನದಿಯಲ್ಲಿ ಸಂಭ್ರಮದ ತೆಪ್ಪೋತ್ಸವ

Published:
Updated:
ಕಪಿಲಾ ನದಿಯಲ್ಲಿ ಸಂಭ್ರಮದ ತೆಪ್ಪೋತ್ಸವ

ನಂಜನಗೂಡು: ದೊಡ್ಡಜಾತ್ರೆ ಪ್ರಯುಕ್ತ ಶುಕ್ರವಾರ ಸಂಜೆ ಇಲ್ಲಿನ ಕಪಿಲಾ ನದಿಯಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ಸಂಜೆ 6.30ಕ್ಕೆ ದೇವಾಲಯದ ಆಗಮಿಕ ನಾಗಚಂದ್ರ ದಿಕ್ಷೀತ್ ನೇತೃತ್ವದಲ್ಲಿ ಉತ್ಸವಮೂರ್ತಿಗೆ ಖುತ್ವಿಕರು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ ನೆರವೇರಿಸಿದರು. ನಂತರ ಕಪಿಲಾ ನದಿ ತಟಕ್ಕೆ ಮಂಗಳವಾದ್ಯ ಸಹಿತ ಮೆರವಣಿಗೆಯಲ್ಲಿ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಉತ್ಸವಮೂರ್ತಿ ಹೊತ್ತು ತಂದರು. ಬಳಿಕ ಚತುರ್ದಶಿ ಉತ್ತರಾ ನಕ್ಷತ್ರದಲ್ಲಿ ನದಿ ತಟದ ಮಂಟಪದಲ್ಲಿ ಇರಿಸಿ ಪೂಜಾ ವಿಧಿ ವಿಧಾನ ನಡೆಸಿದರು. ನಂತರ ಅಲಂಕೃತ ತೇಲುವ ದೇವಾಲಯದಲ್ಲಿ ಇರಿಸಿ ನದಿಯಲ್ಲಿ ಮೂರು ಪ್ರದಕ್ಷಿಣೆ ಹಾಕಿಸಲಾಯಿತು.

ನದಿಯ ಆಚೆ ದಡದಲ್ಲಿದ್ದ ಹೆಜ್ಜಿಗೆ ಗ್ರಾಮಸ್ಥರು ಹಾಗೂ ಕಪಿಲಾ ಸ್ನಾನಘಟ್ಟದಲ್ಲಿ ಸೇರಿದಿದ್ದ ಭಕ್ತರು ಹರ ಹರ ಮಹದೇವ, ಶ್ರೀಕಂಠೇಶ್ವರನಿಗೆ ಜಯವಾಗಲಿ ಎಂದು ಜಯ ಘೋಷ ಕೂಗಿ, ಚಪ್ಪಾಳೆ ತಟ್ಟುವ ಮೂಲಕ ತೆಪ್ಪೋತ್ಸವ ಕಣ್ತುಂಬಿಕೊಂಡರು.

ದೇವಾಲಯದ ಇಒ ಕುಮಾರಸ್ವಾಮಿ, ಎಇಒ ಗಂಗಯ್ಯ, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಇಂಧನ್ ಬಾಬು, ಎಂ.ಶ್ರೀಧರ್, ಗಿರೀಶ್, ಶಶಿರೇಖಾ, ಮಂಜುಳಾ ಮಧು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry