ಮಾಗಿದ ಲೇಖಕನ ಮನೋಜ್ಞ ಬರಹ

7

ಮಾಗಿದ ಲೇಖಕನ ಮನೋಜ್ಞ ಬರಹ

Published:
Updated:
ಮಾಗಿದ ಲೇಖಕನ ಮನೋಜ್ಞ ಬರಹ

ಕವಿ, ಸಾಹಿತಿಯಾಗಿ ಪ್ರಸಿದ್ಧಿ ಪಡೆದವರು ಕೌಂಟ್ ಲಿಯೊ ಟಾಲ್‌ಸ್ಟಾಯ್. ಅವರ ಬದುಕಿನ ಒಂದು ಹಂತದಲ್ಲಿ ತಮ್ಮ ಆವರೆಗಿನ ನಂಬಿಕೆಗಳು ಮತ್ತು ಎದುರು ನಿಂತ ವಾಸ್ತವಗಳ ಜೊತೆಗಿನ ಹೊಯ್ದಾಟದಲ್ಲಿ ಹೊರಬಂದ ಕೃತಿ ಕನ್‌ಫೆಶನ್. ಆತ್ಮಕಥನ ಮಾದರಿಯ ಈ ಬರಹಕ್ಕೆ ಕ್ರಿಶ್ಚಿಯನ್ ಧರ್ಮದಲ್ಲಿ ಪಾದ್ರಿಯ ಎದುರು ಭಕ್ತರು ಹೇಳಿಕೊಳ್ಳುವ ತಪ್ಪೊಪ್ಪಿಗೆ ಶೈಲಿಯ ಲೇಪನವೂ ಇದೆ. ಇಡೀ ಪುಸ್ತಕ ಓದಿ ಮುಗಿಸಿದ ಮೇಲೆ ನಮ್ಮ ಬದುಕಿನಲ್ಲಿ ನಾವು ನಂಬಿಕೊಂಡಿರುವ ಈವರೆಗಿನ ನಂಬಿಕೆಗಳು, ಪರಂಪರೆ ಹೆಸರಿನಲ್ಲಿ ನಡೆದು ಬಂದಿರುವ ಆಚರಣೆಗಳನ್ನು ನಮ್ಮ ಮನಸು ಪ್ರಶ್ನಿಸಲು ಆರಂಭಿಸುತ್ತೆ. ನಮ್ಮೊಳಗಿನ ವಿಚಾರವಾದಿ ಜಾಗೃತನಾಗುತ್ತಾನೆ.

ಕೃತಿಯನ್ನು ಕನ್ನಡಕ್ಕೆ ತಂದಿರುವ ಓ.ಎಲ್. ನಾಗಭೂಷಣಸ್ವಾಮಿ ಸಹ ಈ ಮಾತನ್ನು ಒಪ್ಪಿಕೊಳ್ಳುತ್ತಾರೆ.

‘ಈ ಪುಸ್ತಕದಲ್ಲಿ ಟಾಲ್‌ಸ್ಟಾಯ್ ಎತ್ತುವ ಪ್ರಶ್ನೆಗಳು ನಾನೂ, ಅಷ್ಟೇ ಅಲ್ಲ ಪ್ರತಿ ವ್ಯಕ್ತಿಯೂ ಒಮ್ಮೆಯಲ್ಲ ಒಮ್ಮೆ ಕೇಳಿಕೊಂಡಿರುವ ಪ್ರಶ್ನೆಗಳೇ ಆಗಿವೆ. ಬದುಕಿನ ಅರ್ಥವೇನು, ಉದ್ದೇಶವೇನು, ನನ್ನ ಬದುಕು ಯಾಕೆ ಅರ್ಥಹೀನ, ವಿಫಲ ಅನ್ನಿಸುತ್ತಿದೆ ಅನ್ನುವ ಪ್ರಶ್ನೆಗಳು ಅವು’ ಎಂದು ಮುನ್ನುಡಿಯಂತಿರುವ ಬರಹದಲ್ಲಿ ಓ.ಎಲ್‌.ಎನ್ ಪ್ರಸ್ತಾಪಿಸುತ್ತಾರೆ.

ಟಾಲ್‌ಸ್ಟಾಯ್ ‘ಕನ್‌ಫೆಶನ್’ ಬರೆದಿದ್ದು 1879–1882ರ ಅವಧಿಯಲ್ಲಿ. ಈ ಖ್ಯಾತ ಸಾಹಿತಿಗೆ ‘ತತ್ವಶಾಸ್ತ್ರದಂಥ ವಿಜ್ಞಾನ ತನ್ನ ಪ್ರಶ್ನೆಗಳನ್ನು ಗುರುತಿಸಿದರೂ ಉತ್ತರ ನೀಡಲಾರವು’ ಎನಿಸಿಬಿಡುತ್ತದೆ. ‘ಬದುಕಿಗೆ ಅರ್ಥವಿಲ್ಲ, ಸಾವು ಖಚಿತ ಅನ್ನುವುದಾದರೆ ಆತ್ಮಹತ್ಯೆಯೊಂದೇ ದಾರಿ’ ಎನ್ನುವ ಆಲೋಚನೆ ಕಾಡಿದಾಗ ಅನಕ್ಷರಸ್ಥ ರೈತಾಪಿ ಜನರ ಬದುಕು ಟಾಲ್‌ಸ್ಟಾಯ್‌ ಗಮನ ಸೆಳೆಯುತ್ತದೆ. ಇದು ಅವರ ಬದುಕಿನೊಂದಿಗೆ ಅವರು ಮಾಡಿಕೊಳ್ಳುವ ಬಗೆಬಗೆ ಪ್ರಯೋಗಗಳಿಗೂ ಕಾರಣವಾಗುತ್ತದೆ.

ಈ ಪುಸ್ತಕದಲ್ಲಿ ಹೆಚ್ಚು ಇಷ್ಟವಾಗುವ ಅಂಶ ಪ್ರಾಮಾಣಿಕತೆ. ‘ನಾನು ಏನು ಬೋಧಿಸುತ್ತಿದ್ದೇನೆ ಎಂದು ನನಗೇ ಸ್ವತಃ ಗೊತ್ತಿರದಿದ್ದರೂ ನಾನು ಕವಿ ಮತ್ತು ಕಲಾವಿದನಾದ್ದರಿಂದ ಎಲ್ಲರಿಗೂ ಬೋಧನೆ ಮಾಡಬಲ್ಲವನಾಗಿದ್ದೇನೆ ಎಂದು ಮುಗ್ಧವಾಗಿ ನಂಬಿಕೊಂಡಿದ್ದೆ. ಹಾಗೇ ವರ್ತಿಸುತ್ತಿದ್ದೆ’ ಎಂದು ಟಾಲ್‌ಸ್ಟಾಯ್ ನಿರುದ್ವಿಗ್ನರಾಗಿ ಹೇಳಿಕೊಳ್ಳುತ್ತಾರೆ.

ತತ್ವಶಾಸ್ತ್ರದಲ್ಲಿ, ಬರಹದಲ್ಲಿ, ಸಾಹಿತ್ಯದಲ್ಲಿ ವಿಜ್ಞಾನದಲ್ಲಿ ದೇವರನ್ನೂ– ನೆಮ್ಮದಿಯನ್ನೂ ಹುಡುಕಲು ಯತ್ನಿಸುವ ಲೇಖಕ ಕೊನೆಗೆ ಹೋಗಿ ಮುಟ್ಟುವುದು ನಂಬಿಕೆಯ ಕಡೆಗೆ.

ಈ ಅಧ್ಯಾತ್ಮ ಪಯಣದಲ್ಲಿ ಟಾಲ್‌ಸ್ಟಾಯ್ ಮನೋಜಗತ್ತು ಎಷ್ಟರಮಟ್ಟಿಗೆ ವಿಸ್ತಾರವಾಯಿತು ಎಂಬುದಕ್ಕೆ ‘1879’ ಅಧ್ಯಾಯವನ್ನು ಒಮ್ಮೆ ಪರಿಶೀಲಿಸಬೇಕು. ಕನ್‌ಫೆಶನ್ ಬರೆದು ಮುಗಿಸಿದ ಲೇಖಕರು ಅದನ್ನು ಪರಿಶೀಲಿಸುತ್ತಿರುವಾಗ ಬೀಳುವ ಕನಸಿನ ವಿವರಣೆ ಇಲ್ಲಿದೆ. ‘ಇಷ್ಟು ಪುಟಗಳಲ್ಲಿ ಹೇಳಿರುವುದನ್ನು ಅಖಂಡವಾಗಿ ಕಾಣಿಸಿಕೊಟ್ಟೀತು’ ಎಂದು ಲೇಖಕರು ಆ ಕನಸನ್ನು ನಮೂದಿಸಿದ್ದಾರೆ. ಕನಸಿನ ವಿವರಣೆಯ ಕೊನೆಯ ಪ್ಯಾರಾದ ಸಂಗ್ರಹ ರೂಪ ಇಲ್ಲಿದೆ:

‘ನನ್ನ ದೇಹದ ನಡೂ ಮಧ್ಯದಲ್ಲಿ ಒಂದು ಹಗ್ಗ ಇದೆ. ನಾನು ಅದರ ಮೇಲೆ ದೃಢವಾದ ಸಮತೋಲದಲ್ಲಿದ್ದೇನೆ. ಅದೊಂದೇ ಹಗ್ಗ ಇಷ್ಟು ಹೊತ್ತೂ ನನ್ನ ಎತ್ತಿ ಹಿಡಿದಿತ್ತು. ಕನಸಿನಲ್ಲೇ ಆಶ್ಚರ್ಯವನ್ನೂ ಪಟ್ಟೆ. ನನ್ನ ಪಕ್ಕದಲ್ಲಿ ಒಂದು ಕಂಬ ಇದೆ ಅನಿಸುತ್ತಿದೆ. ಕಂಬಕ್ಕೆ ತಳಹದಿಯೇ ಇಲ್ಲದಿದ್ದರೂ ಅದು ದೃಢವಾಗಿದೆ ಅನ್ನುವ ಬಗ್ಗೆ ಸಂಶವೇ ಇಲ್ಲ. ಹಗ್ಗವನ್ನು ಅದು ಹೇಗೋ ತೀರ ಜಾಣತನದಿಂದ, ತೀರ ಸರಳವಾಗಿ ಕಂಬಕ್ಕೆ ಬಿಗಿದು ಕಟ್ಟಿದ್ದಾರೆ. ಮೈಯ ಭಾಗವನ್ನು ಹಗ್ಗದ ಮೇಲೆ ಇರಿಸಿಕೊಂಡು ಮೇಲೆ ನೋಡಿದರೆ ಬೀಳುವ ಪ್ರಶ್ನೆಯೇ ಇಲ್ಲ. ಇದೆಲ್ಲ ಸ್ಪಷ್ಟವಾಯಿತು. ಆನಂದವಾಯಿತು. ನೆಮ್ಮದಿ ಅನಿಸಿತು. ‘ಇದೆಲ್ಲ ಜ್ಞಾಪಕ ಇರಲಿ’ ಅನ್ನುತ್ತಿದ್ದರು ಯಾರೋ.

‘ಎಚ್ಚರವಾಯಿತು’.

ಕೃತಿಯನ್ನು ಬರೆದು ಮುಗಿಸಿದ ಲೇಖಕನಿಗೆ ನಿದ್ದೆ ತಿಳಿದು, ಕನಸು ಒಡೆದು ಎಚ್ಚರವಾದರೂ, ಪುಸ್ತಕ ಓದಿದ ಸಹೃದಯರ ಮನದಲ್ಲಿ ಮಾತ್ರ ಪುಸ್ತಕ ಕಟ್ಟಿಕೊಡುವ ನೆಮ್ಮದಿ ಬಹುಕಾಲ ಉಳಿದಿರುತ್ತದೆ. ಅದಕ್ಕೆ ಟಾಲ್‌ಸ್ಟಾಯ್ ಅವರ ಅಧ್ಯಾತ್ಮ ಚಿಂತನೆಯ ಜೊತೆಗೆ ಕನ್ನಡ ಭಾಷೆ ಮತ್ತು ಅನುಭಾವ ಜಗತ್ತಿನಲ್ಲಿ ಓಎಲ್‌ಎನ್ ಸಾಧಿಸಿರುವ ಹಿಡಿತವೂ ಕಾರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry