ದಾಖಲೆ ಇಲ್ಲದ ₹ 97 ಲಕ್ಷ ನಗದು ವಶ

7
ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಚುನಾವಣಾ ಅಧಿಕಾರಿಗಳಿಂದ ಕ್ರಮ

ದಾಖಲೆ ಇಲ್ಲದ ₹ 97 ಲಕ್ಷ ನಗದು ವಶ

Published:
Updated:
ದಾಖಲೆ ಇಲ್ಲದ ₹ 97 ಲಕ್ಷ ನಗದು ವಶ

ಬಾಗಲಕೋಟೆ/ ಹುಬ್ಬಳ್ಳಿ/ ಬೆಳಗಾವಿ: ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ, ಬಾಗಲಕೋಟೆ, ಹುಬ್ಬಳ್ಳಿ ಹಾಗೂ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹97 ಲಕ್ಷ ನಗದನ್ನು ಶನಿವಾರ ಸಂಜೆ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಅವರ ಭಾವಚಿತ್ರವಿರುವ ಕುಕ್ಕರ್‌ ಬಾಕ್ಸ್‌ಗಳನ್ನು ತುಂಬಿದ್ದ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಹೊನ್ನಾಕಟ್ಟಿ ಕ್ರಾಸ್‌ನ ರಾಯಚೂರು– ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿರುವ ಚೆಕ್‌ಪೋಸ್ಟ್‌ ಬಳಿ, ಮಧ್ಯಾಹ್ನ ಇಳಕಲ್‌ನಿಂದ ಬಾಗಲಕೋಟೆಯತ್ತ ತೆರಳುತ್ತಿದ್ದ ಹುಂಡೈ ಕಾರನ್ನು ತಡೆದು ತಪಾಸಣೆ ನಡೆಸಿದ ತಹಶೀಲ್ದಾರ್ ವಿನಯ ಕುಲಕರ್ಣಿ, ಚೀಲದಲ್ಲಿ ಇಟ್ಟಿದ್ದ ₹ 50 ಲಕ್ಷ ವಶಪಡಿಸಿಕೊಂಡರು. ಕಾರಿನಲ್ಲಿದ್ದ ನಾಲ್ವರನ್ನು ವಶಕ್ಕೆ ತೆಗೆದುಕೊಂಡರು.

‘ಡಿಸಿಸಿ ಬ್ಯಾಂಕಿನ ಇಳಕಲ್‌ ಶಾಖೆಯಿಂದ ಬಾಗಲಕೋಟೆ ನವನಗರದ ಮುಖ್ಯ ಕಚೇರಿಗೆ ಹಣ ಒಯ್ಯುತ್ತಿರುವುದಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹೇಳಿದ್ದಾರೆ. ಆದರೆ ಸಂಬಂಧಿಸಿದ ಯಾವುದೇ ದಾಖಲೆ ಅವರ ಬಳಿ ಇರಲಿಲ್ಲ. ಬ್ಯಾಂಕಿನ ಹಣ ಸಾಗಣೆಗೆ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳನ್ನೂ ಕೈಗೊಂಡಿರಲಿಲ್ಲ’ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸುದ್ದಿಗಾರರಿಗೆ ತಿಳಿಸಿದರು. ಮುರನಾಳ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಕೋವಳ್ಳಿ ಅವರ ಕಾರು ತಡೆದ ಅಧಿಕಾರಿಗಳು ಕಾರಿನಲ್ಲಿದ್ದ ₹5 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೊಂದು ಘಟನೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ₹22 ಲಕ್ಷ ನಗದನ್ನು ಹುಬ್ಬಳ್ಳಿಯ ಗಬ್ಬೂರು ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಳ್ಳಲಾಗಿದೆ. ಈ ಹಣವನ್ನು ಲಕ್ಷ್ಮೇಶ್ವರದ ಕೆನರಾ ಬ್ಯಾಂಕಿನಿಂದ ಹುಬ್ಬಳ್ಳಿಯ ಕೆನರಾ ಬ್ಯಾಂಕಿನ ಪ್ರಧಾನ ಕಚೇರಿಗೆ ಸಾಗಿಸಲಾಗುತ್ತಿತ್ತು.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಕೊಗನೋಳಿ ಚೆಕ್‌ ಪೋಸ್ಟ್‌ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ₹ 20 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಡಹಿಂಗ್ಲಜ್‌ನ ಅರುಣ ರಾಮು ಶಿರ್ಕೆ ಮತ್ತು ಕಾರು ಚಾಲಕ ಸಂತೋಷ ತರವಾಳ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.

ಕುಕ್ಕರ್‌ ತುಂಬಿದ್ದ ಲಾರಿ ವಶ

ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಲಕ್ಷ್ಮಿ ಹೆಬ್ಬಾಳಕರ ಅವರ ಭಾವಚಿತ್ರ ಹೊಂದಿದ್ದ ಕುಕ್ಕರ್‌ ಬಾಕ್ಸ್‌ಗಳನ್ನು ಹೊತ್ತು ನಿಂತಿದ್ದ ಲಾರಿಯನ್ನು ಶನಿವಾರ ಇಲ್ಲಿನ ಜಾಧವನಗರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಡಿ ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾಧಿಕಾರಿ ನಿವಾಸದಿಂದ ಕೂಗಳತೆ ಅಂತರದಲ್ಲಿ, ಕುಕ್ಕರ್‌ಗಳನ್ನು ಹೊತ್ತು ನಿಂತಿದ್ದ ಲಾರಿಯನ್ನು ಪತ್ತೆ ಹಚ್ಚಿದ ಬಿಜೆಪಿ ಮುಖಂಡ ಅನಿಲ ಬೆನಕೆ, ನಗರ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಲಾರಿ ಸಮೇತ ಕುಕ್ಕರ್‌ಗಳನ್ನು ವಶಪಡಿಸಿಕೊಂಡರು.

ವಾಗ್ವಾದ: ‘ಮುಂಬರುವ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸುವಂತೆ, ಮತದಾರರಿಗೆ ಆಮಿಷವೊಡ್ಡಲು ಲಕ್ಷ್ಮಿ ಹೆಬ್ಬಾಳಕರ ಅವರು ಕುಕ್ಕರ್‌ ನೀಡುತ್ತಿದ್ದಾರೆ’ ಎಂದು ಅನಿಲ ಬೆನಕೆ ಆರೋಪಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಹೆಬ್ಬಾಳಕರ ಅವರ ಸಹೋದರ, ಹರ್ಷಾ ಶುಗರ್ಸ್‌ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ, ‘ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಕುಕ್ಕರ್‌ಗಳನ್ನು ನೀಡಲಾಗುತ್ತಿದೆ. ಮತದಾರರಿಗೆ ಆಮಿಷವೊಡ್ಡಲು ಅಲ್ಲ. ಕುಕ್ಕರ್‌ಗಳನ್ನು ಖರೀದಿಸಿರುವ ಬಗ್ಗೆ ರಸೀದಿ ಇದೆ. ಯಾವುದೂ ಅಕ್ರಮ ನಡೆದಿಲ್ಲ. ಎಲ್ಲ ಬಾಕ್ಸ್‌ಗಳ ಮೇಲೆ ಕಾರ್ಖಾನೆಯ ಹೆಸರಿದೆ’ ಎಂದು ವಾದಿಸಿದರು.

‘ಪೊಲೀಸರು ಯಾವ ದಾಖಲೆಗಳನ್ನೂ ಪರಿಶೀಲಿಸುತ್ತಿಲ್ಲ. ಬಿಜೆಪಿ ಮುಖಂಡರ ಮಾತಿಗೆ ಮಣೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು. ಲಕ್ಷ್ಮಿ ಹೆಬ್ಬಾಳಕರ ಅವರು ಹರ್ಷಾ ಶುಗರ್ಸ್‌ ಕಾರ್ಖಾನೆಯ ಮಾಲೀಕರೂ ಹೌದು.

ಆರತಿ ತಟ್ಟೆಗೆ ಹಣ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರೋಡ್‌ ಶೋದಲ್ಲಿ ಅನುಮತಿಯಿಲ್ಲದೆ ಪ್ರಚಾರಕ್ಕೆ ಬಳಸಿದ ಎರಡು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಲ್ಲೇಗೌಡನಕೊಪ್ಪಲು ಗ್ರಾಮದಲ್ಲಿ ಸಿದ್ದರಾಮಯ್ಯ ಮಹಿಳೆಯೊಬ್ಬರ ಆರತಿ ತಟ್ಟೆಗೆ ₹ 2 ಸಾವಿರ ಹಣ ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry