ಭಾನುವಾರ, ಡಿಸೆಂಬರ್ 15, 2019
25 °C
ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌, ರಜನಿಕಾಂತ್‌, ಶಿವಾಜಿ ಗಣೇಶನ್‌, ಜಯಲಲಿತಾ ಸೇರಿ ಅನೇಕ ಸೂಪರ್‌ಸ್ಟಾರ್‌ಗಳ ಸಿನಿಮಾ ನಿರ್ದೇಶನ

'ತ್ರಿಮೂರ್ತಿ' ಚಿತ್ರ ಖ್ಯಾತಿಯ ನಿರ್ದೇಶಕ ಸಿ.ವಿ.ರಾಜೇಂದ್ರನ್‌ ನಿಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

'ತ್ರಿಮೂರ್ತಿ' ಚಿತ್ರ ಖ್ಯಾತಿಯ ನಿರ್ದೇಶಕ ಸಿ.ವಿ.ರಾಜೇಂದ್ರನ್‌ ನಿಧನ

ಚೆನ್ನೈ: ಡಾ.ರಾಜ್‌ ಕುಮಾರ್‌ ಅಭಿನಯದ ತ್ರಿಮೂರ್ತಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ತಮಿಳು ನಿರ್ದೇಶಕ ಸಿ.ವಿ.ರಾಜೇಂದ್ರನ್(81) ಭಾನುವಾರ ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. 

ತ್ರಿಮೂರ್ತಿ ಸಿ.ವಿ.ರಾಜೇಂದ್ರನ್‌ ನಿರ್ದೇಶಿಸಿದ ಮೊದಲ ಕನ್ನಡ ಸಿನಿಮಾ. ಬಳಿಕ ಡಾ.ವಿಷ್ಣುವರ್ಧನ್‌, ರಜಿನಿಕಾಂತ್‌ ಮುಖ್ಯಭೂಮಿಯ ಗಲಾಟೆ ಸಂಸಾರ(ತಮಿಳು:ವೀಟ್ಟುಕು ವೀಡು), ದ್ವಾರ್‌ಕೀಶ್‌ ನಿರ್ಮಾಣದ ಕಿಟ್ಟು–ಪುಟ್ಟು, ವಿದೇಶದಲ್ಲಿ ಚಿತ್ರೀಕರಿಸಿದ ಸಿಂಗಪೂರ್‌ನಲ್ಲಿ ರಾಜಾಕುಳ್ಳ, ಪ್ರೇಮ ಮತ್ಸರ(ವಿ.ರವಿಚಂದ್ರನ್‌ ನಿರ್ಮಾಣದ ಮೊದಲ ಚಿತ್ರ), ಪ್ರೀತಿ ಮಾಡು ತಮಾಷೆ ನೋಡು, ಅದಲು ಬದಲು, ಅಳಿಯ ದೇವರು, ಕಮಲಾ, ಉಷಾ ಸ್ವಯಂವರ, ಘರ್ಜನೆ, ನಾನೇ ರಾಜಾ, ಪೂರ್ಣ ಚಂದ್ರ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದವು.

ರಾಜೇಂದ್ರನ್‌ ಮೂಲತಃ ತಮಿಳುನಾಡಿನ ಮಧುರಂತಗಂನ ಚಿತ್ತಮೂರ್‌ನವರು. ನಿರ್ದೇಶಕ ಸಿ.ವಿ.ಶ್ರೀಧರ್‌ ಅವರ ಸೋದರ ಸಂಬಂಧಿಯಾಗಿದ್ದ ರಾಜೇಂದ್ರನ್‌ ಅವರು ಶ್ರೀಧರ್‌ ಅವರ ಸಿನಿಮಾಗಳಲ್ಲಿ ಸಹಾಯ ನಿರ್ದೇಶಕನಾಗಿ, ಸಹ–ನಿರ್ದೇಶಕನಾಗಿ ಸಿನಿಮಾ ಅನುಭವ ಪಡೆದುಕೊಂಡರು.

ಜಯಲಲಿತಾ ಮತ್ತು ಶಿವಾಜಿ ಗಣೇಶನ್‌ ಜೋಡಿಯ ಗಲಾಟ ಕಲ್ಯಾಣಂ, ಸುಮತಿ ಎನ್‌ ಸುಂದರಿ ಹಾಗೂ ರಾಜಾ ಚಿತ್ರಗಳನ್ನು ನಿರ್ದೇಶಿಸಿದ್ದ ರಾಜೇಂದ್ರ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅನುಭವಂ ಪುದುಮೈ.

ಸಂಗಿಲಿ ಚಿತ್ರದ ಮೂಲಕ ಶಿವಾಜಿ ಗಣೇಶನ್‌ ಪುತ್ರ ಪ್ರಭು ಅವರನ್ನು ಪರಿಚಯಿಸಿದರು. ಶಿವಾಣಿ ಗಣೇಶನ್‌ ಅವರೊಂದಿಗೆ ಚಿತ್ರ ನಿರ್ಮಾಣವನ್ನೂ ಮಾಡಿದ್ದರು. ಕಮಲ್‌ ಹಾಸನ್‌ ಅಭಿನಯದ ಉಲ್ಲಾಸ ಪರವೈಕಲ್‌ ಸೇರಿ 40ಕ್ಕೂ ಹೆಚ್ಚು ತಮಿಳು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಇದರೊಂದಿಗೆ ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲೂ ಅನೇಕ ಉತ್ತಮ ಸಿನಿಮಾಗಳನ್ನು ರಾಜೇಂದ್ರನ್‌ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)