ಬಿಸಿಲಿನ ಪ್ರಕೋಪಕ್ಕೆ ಎಳನೀರಿಗೆ ಮೊರೆ

ಮಂಗಳವಾರ, ಮಾರ್ಚ್ 19, 2019
21 °C
ನಗರದಲ್ಲಿ ತಂಪುಪಾನೀಯಗಳಿಗೆ ಹೆಚ್ಚಿದ ಬೇಡಿಕೆ

ಬಿಸಿಲಿನ ಪ್ರಕೋಪಕ್ಕೆ ಎಳನೀರಿಗೆ ಮೊರೆ

Published:
Updated:
ಬಿಸಿಲಿನ ಪ್ರಕೋಪಕ್ಕೆ ಎಳನೀರಿಗೆ ಮೊರೆ

ಬಾಗಲಕೋಟೆ: ನಗರದಲ್ಲಿ ಬೇಸಿಗೆ ಬಿಸಿಲಿನ ಪ್ರಕೋಪ ಹೆಚ್ಚುತ್ತಿದ್ದು ಜನತೆ ಹೊಟ್ಟೆ ತಣ್ಣಗಾಗಿಸಿಕೊಳ್ಳಲು ಜನತೆ ಎಳನೀರು, ಕಲ್ಲಂಗಡಿ ಹಣ್ಣು ಸೇರಿದಂತೆ ತಂಪುಪಾನೀಯಗಳ ಮೊರೆ ಹೋಗಿರುವುದು ಕಂಡುಬಂದಿದೆ. ನವನಗರದ ಬಸ್‌ನಿಲ್ದಾಣ, ಎಪಿಎಂಸಿ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ಕಾಳಿದಾಸ ವೃತ್ತ, ವಿದ್ಯಾಗಿರಿಯ ಎಂಜಿನಿಯರಿಂಗ್ ಕಾಲೇಜು ವೃತ್ತ ಹಾಗೂ ಬಾಗಲಕೋಟೆ ನಗರದ ಪ್ರಮುಖ ರಸ್ತೆ ಬದಿ ಹಾಗೂ ತಳ್ಳುಬಂಡಿಗಳಲ್ಲಿ ಎಳನೀರು ಮಾರಾಟ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ತಾಪಮಾನದ ಏರಿಕೆಯೊಂದಿಗೆ ಎಳನೀರಿನ ದರ ಕೂಡ ಪೈಪೋಟಿಗಿಳಿದಿದೆ. ಕಳೆದ ವರ್ಷ ₹18–20 ಇದ್ದರೆ ಈ ಬಾರಿ ₹25–30ಕ್ಕೆ ಮಾರಾಟವಾಗುತ್ತಿದೆ. ಇನ್ನೂ ಕೆಲ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾಗಿ ಎಳನೀರಿನ ದರದ ಬಿಸಿ ಸಾಮಾನ್ಯನಿಗೂ ತಟ್ಟಿದೆ. ಎಳನೀರಿನ ಮಾರಾಟ ಹೆಚ್ಚಾಗಿದ್ದರೂ ಅವುಗಳನ್ನು ದೂರದಿಂದ ತರಬೇಕಿದ್ದು, ಸಾಗಾಣಿಕೆ ವೆಚ್ಚ ಅಧಿಕವಾಗುತ್ತಿರುವುದರಿಂದ ಮಾರಾಟಗಾರರು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದಾರೆ. ‘ಬೆಳಿಗ್ಗೆ ಏಳುತ್ತಲೇ ಸೂರ್ಯನ ಬಿಸಿಲು ಜನರನ್ನು ಹೊರಗೆ ಕಾಲಿಡದಂತೆ ಮಾಡುತ್ತಿದೆ. ಬೆಳಿಗ್ಗೆ 10 ಗಂಟೆ ಹೊತ್ತಿಗೆ ಬಿಸಿಲ ಝಳ ತೀವ್ರ ಏರಿಕೆಯಾಗುತ್ತಿದ್ದು, ಬೈಕ್ ಸವಾರರು ಬಿಸಿಲಿನ ಝಳಕ್ಕೆ ಪರದಾಡುವಂತಾಗಿದೆ. ಮಧ್ಯಾಹ್ನದ ಹೊತ್ತು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ’ ಎಂದು ನವನಗರದ ರಾಮನಗೌಡ ಪಾಟೀಲ, ಶ್ರೀಕಾಂತ ಕುಂಬಾರ, ರಘು ಬಾದಾಮಿ ಹೇಳುತ್ತಾರೆ.

‘ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮನೆಯಲ್ಲಿ ಫ್ಯಾನ್ ಹಾಕಿದರೆ ಅದರಿಂದಲೂ ಬಿಸಿಗಾಳಿ ಬರುತ್ತದೆ. ಇದರಿಂದಾಗಿ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ಅಲ್ಲದೆ, ಸಂಜೆಯವರೆಗೆ ಮನೆಬಿಟ್ಟು ಹೊರಹೋಗದಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.‘ಪ್ರತಿವಾರ ಒಂದು ಲಾರಿಯಷ್ಟು ಬರುವ ಎಳನೀರಿನ ಕಾಯಿ ನಗರದ ಒಂದರಲ್ಲಿಯೇ ಮಾರಾಟವಾಗುತ್ತಿವೆ. ಅವುಗಳನ್ನು ₹15ರಿಂದ 18ರ ದರದಲ್ಲಿ ಖರೀದಿಸಲಾಗುತ್ತದೆ. ಬಾಡಿಗೆ ವೆಚ್ಚ ಕೂಡ ಹೆಚ್ಚಾಗಿರುವುದರಿಂದ ಸದ್ಯ ₹25ಕ್ಕೆ ಒಂದರಂತೆ ಮಾರಾಟ ಮಾಡುತ್ತಿದ್ದೇವೆ’ ಎನ್ನುತ್ತಾರೆ ಎಳನೀರಿನ ವ್ಯಾಪಾರಿ ಮಹ್ಮದ್ ಶೇಖ್.

ತಂಪು ಪಾನೀಯಗಳಿಗೂ ಹೆಚ್ಚಿದ ಬೇಡಿಕೆ

ಎಳನೀರು ಮಾತ್ರವಲ್ಲದೇ ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಮಜ್ಜಿಗೆ, ಪಾನಕ, ಐಸ್‌ಕ್ರೀಂ ಹಾಗೂ ಲಸ್ಸಿಗೆ ಕೂಡ ನಗರದಲ್ಲಿ ಈಗ ಹೆಚ್ಚು ಬೇಡಿಕೆ ವ್ಯಕ್ತವಾಗುತ್ತಿದೆ. ಒಂದು ಪ್ಲೇಟ್ ಕಲ್ಲಂಗಡಿ ಹಣ್ಣಿಗೆ ₹10, ಮಜ್ಜಿಗೆ ₹10, ಲಸ್ಸಿಗೆ ₹10 ರಿಂದ ₹20, ಕಬ್ಬಿನ ಹಾಲು ₹10ಗೆ ಮಾರಾಟವಾಗುತ್ತಿವೆ.

**

ದರ ಅಧಿಕವಾದರೂ ಕೂಡ ಎಳನೀರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ದಿನದಲ್ಲಿ ಸುಮಾರು 250ರಿಂದ 300 ಕಾಯಿಗಳು ಮಾರಾಟವಾಗುತ್ತಿವೆ – 

ರೇಣುಕಾ ಅಂಬಿಗೇರ, ಎಳನೀರು ವ್ಯಾಪಾರಸ್ಥೆ.

**

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ಆರೋಗ್ಯದ ದೃಷ್ಟಿಯಿಂದ ಎಳನೀರು ಸೇವನೆ ಉತ್ತಮ. ಹಾಗಾಗಿ ಎಳನೀರು ಖರೀದಿಗೆ ಬಂದಿದ್ದೇವೆ – 

ಪ್ರಿಯಾಂಕಾ, ಪೂರ್ಣಿಮಾ ಕಾಲೇಜು ವಿದ್ಯಾರ್ಥಿನಿಯರು

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry