ಶನಿವಾರ, ಆಗಸ್ಟ್ 8, 2020
23 °C
ಮಹಾರಾಷ್ಟ್ರದ ಪುಟ್ಟಹಳ್ಳಿಯಿಂದ ಕೋಟೆನಾಡು ಚಿತ್ರದುರ್ಗದವರೆಗೆ..

ಬದುಕಿನ ಬಂಡಿಗೆ ಗಾಲಿಗಳಾದ ‘ಬ್ಯಾಟ್ ತಯಾರಿಕೆ’ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬದುಕಿನ ಬಂಡಿಗೆ ಗಾಲಿಗಳಾದ ‘ಬ್ಯಾಟ್ ತಯಾರಿಕೆ’ !

 

ಚಿತ್ರದುರ್ಗ: ಕೌಶಲವಿದ್ದು, ದುಡಿಯುವ ಮನಸ್ಸಿದ್ದರೆ ಎಷ್ಟು ದೂರದ ಊರಿನಲ್ಲಾದರೂ ಬದುಕಿನ ಬಂಡಿಯನ್ನು ಸಾಗಿಸಬಹುದು ಎನ್ನುವುದಕ್ಕೆ ಮಹಾರಾಷ್ಟ್ರದ ಪುಟ್ಟ ಹಳ್ಳಿಯಿಂದ ಚಿತ್ರದುರ್ಗಕ್ಕೆ ಬಂದು ಕ್ರಿಕೆಟ್ ಬ್ಯಾಟ್ ತಯಾರಿಸಿ, ಮಾರಾಟ ಮಾಡುತ್ತಾ ಬದುಕು ನಡೆಸುತ್ತಿರುವ ಸಚಿನ್ ಮತ್ತು ಕುಟುಂಬದ ಕಥೆ ಒಂದು ಉತ್ತಮ ಉದಾಹರಣೆ.ಮಹಾರಾಷ್ಟ್ರದ ಧೂಲಿಯಾ ಜಿಲ್ಲೆಯ ಸುಳೆ ಗ್ರಾಮದ ಸಚಿನ್ ಮತ್ತು ಸಹೋದರ ಆಕಾಶ್ ಮತ್ತು ತಾಯಿಯೊಂದಿಗೆ ಮೂರು ವರ್ಷಗಳ ಹಿಂದೆ ಚಿತ್ರದುರ್ಗ ನಗರಕ್ಕೆ ಬಂದರು. ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸ್ತೆ ಬದಿಯಲ್ಲಿ  ಟೆಂಟ್ ಹಾಕಿಕೊಂಡು, ಕ್ರಿಕೆಟ್ ಬ್ಯಾಟ್ ತಯಾರಿಕೆ ಆರಂಭಿಸಿದರು. ಟೆಂಟ್‌ ಒಳಗೆ ಜೀವನ, ಹೊರಗಡೆ ಮರದ ನೆರಳಲ್ಲಿ ಬ್ಯಾಟ್ ತಯಾರಿಕೆ.

ಸಚಿನ್ ಕುಟುಂಬದ ಮೂಲ ಕಸುಬು ಕರಕುಶಲ ವಸ್ತುಗಳ ತಯಾರಿಕೆ. ಮಾತ್ರವಲ್ಲ, ಅವರ ಗ್ರಾಮದ 60ಕ್ಕೂ ಹೆಚ್ಚು ಕುಟುಂಬಗಳು ಇದೇ ಕಲೆಯನ್ನೇ ಜೀವನಕ್ಕಾಗಿ ಅವಲಂಬಿಸಿವೆ. ಹಾಗಾಗಿ ಸಚಿನ್ ಊರು ತೊರೆದು, ದುಡಿಮೆ ಅರಸಿ ಹೊರಟಾಗಲೇ ಆ ಕುಟುಂಬಗಳೂ ಹೊರಟಿವೆ. ಹೀಗೆ ಬಂದವರು, ರಾಜ್ಯದ ಹೊಸಪೇಟೆ, ಮಂಗಳೂರು, ತಿಪಟೂರು, ಗದಗ, ಬಾಗಲಕೋಟೆ, ಭದ್ರಾವತಿಯಲ್ಲಿ ನೆಲೆಸಿದ್ದಾರೆ. ಕೆಲವರು ಆಂಧ್ರಪ್ರದೇಶಕ್ಕೆ ಹೋಗಿದ್ದಾರೆ. ಎಲ್ಲರೂ ಬ್ಯಾಟ್ ಮತ್ತು ವಿಕೆಟ್‌ಗಳನ್ನೇ ತಯಾರು ಮಾಡುತ್ತಾರೆ.‘ಮಳೆಗಾಲದಲ್ಲಿ (ಜೂನ್‌ನಿಂದ ಅಕ್ಟೋಬರ್) ಸ್ವಂತ ಊರಿಗೆ ಹೋಗುತ್ತೇವೆ. ಬೇರೆ ಬೇರೆ ಕಡೆ ಇರುವ ಎಲ್ಲ ಕುಟುಂಬಗಳೂ ಗ್ರಾಮಕ್ಕೆ ಬರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಊರಲ್ಲಿ ದೀಪಾವಳಿ ಹಬ್ಬ ಆಚರಿಸಿ, ಪುನಃ ಕೆಲಸ ಮಾಡುತ್ತಿದ್ದ ಸ್ಥಳಗಳಿಗೆ ಹಿಂತಿರುಗುತ್ತೇವೆ’ ಎಂದು ಹೇಳುತ್ತಾರೆ ಸಚಿನ್.

ಸಚಿನ್‌ ಮತ್ತು ಸಹೋದರ ಆಕಾಶ್ ಮೂರು ವರ್ಷಗಳಿಂದ ಚಿತ್ರದುರ್ಗದಲ್ಲಿ ಬ್ಯಾಟ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಬ್ಯಾಟ್‌ ತಯಾರಿಕೆಯಂತಹ ಕರಕುಶಲ ಕಲೆ ಪೂರ್ವಿಕರಿಂದ ಬಳುವಳಿಯಾಗಿ ಪಡೆದಿದ್ದಂತೆ. ‘ಇದು ಮರಗೆಲಸದಂತೆ ಒರಟಿನ ಕಲೆಯಲ್ಲ. ನಯ, ನಾಜೂಕಿನಿಂದ ಕುಸುರಿ ಇದು. ಸ್ವಲ್ಪ ವ್ಯತ್ಯಾಸವಾದರೂ ಗ್ರಾಹಕರು  ಬ್ಯಾಟುಗಳನ್ನು ಖರೀದಿಸುವುದಿಲ್ಲ. ಬ್ಯಾಟು ತಯಾರಿಕೆಗೆ ಇಂತಿಷ್ಟೇ ಅಳತೆ, ತೂಕ ಎಲ್ಲವೂ ಇರುತ್ತದೆ. ಹಾಗಾಗಿ ಶ್ರದ್ಧೆಯಿಂದ ಬ್ಯಾಟ್ ತಯಾರಿಸುತ್ತೇವೆ’ ಎನ್ನುತ್ತಾರೆ ಆಕಾಶ್.

ಈ ಸಹೋದರರು ಎಲ್ಲ ಅಳತೆಯ ಬ್ಯಾಟ್‌ಗಳನ್ನೂ ತಯಾರಿಸುತ್ತಾರೆ. ಬ್ಯಾಟ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು (ಮರ) ಸಮೀಪದಲ್ಲಿರುವ ಊರುಗಳಲ್ಲೇ ಪತ್ತೆ ಮಾಡುತ್ತಾರಂತೆ.  ಸಚಿನ್, ಕೂಡ್ಲಿಗೆ ತಾಲ್ಲೂಕು ಖಾನಾ ಹೊಸಹಳ್ಳಿಯಿಂದ ಖರೀದಿಸುತ್ತಾರೆ. ಎರಡು ತಿಂಗಳಿಗೊಮ್ಮೆ ಖಾನಹೊಸಳ್ಳಿಯಿಂದ 500–600 ಬ್ಯಾಟ್‌ಗಳಿಗಾಗುವಷ್ಟು ಮರದ ಕಟ್ಟಿಗೆ ತರುತ್ತಾರೆ. ‘ಒಂದು ಗಂಟೆಗೆ ಒಂದು ಬ್ಯಾಟು ತಯಾರಾಗುತ್ತದೆ. ಬೇಡಿಕೆ ಇದ್ದರೆ ಹೆಚ್ಚು ತಯಾರಿಸುತ್ತೇವೆ. ಒಂದು ಚಿಕ್ಕ ಬ್ಯಾಟ್‌ಗೆ ₹ 200 ಹಾಗೂ ದೊಡ್ಡದ್ದಕ್ಕೆ ₹ 450 ಬೆಲೆ’ ಎನ್ನುತ್ತಾರೆ ಸಚಿನ್.

ಪರೀಕ್ಷೆ ಸಮಯ: ವ್ಯಾಪಾರ ಕುಂಠಿತ

ಸಣ್ಣದೊಂದು ಕೆಲಸ, ಜೀವನಕ್ಕಾಗುವಷ್ಟು ದುಡಿಮೆ. ಇದಕ್ಕಿಂತ ಹೆಚ್ಚು ಏನೂ ಕೇಳದೇ, ಪ್ರತಿನಿತ್ಯ ಬ್ಯಾಟ್‌ಗಳನ್ನು ತಯಾರಿಸಿ ಮಾರುವ ಈ ಕುಟುಂಬಕ್ಕೆ ಶಾಲಾ ಕಾಲೇಜುಗಳಿಲ್ಲದ ಸಮಯದಲ್ಲಿ ವ್ಯಾಪಾರ ಪೂರ್ಣ ಕ್ಷೀಣಿಸಿರುತ್ತದೆ. ‘ಈಗ ಶಾಲೆಗಳಿಗೆ ರಜೆ. ವ್ಯಾಪಾರ ಕಡಿಮೆ ಇದೆ. ಕ್ರಿಕೆಟ್ ಟೂರ್ನಿಗಳು ನಡೆಯುತ್ತಿದ್ದಾಗ ವ್ಯಾಪಾರ ಪರವಾಗಿಲ್ಲ. ಪರೀಕ್ಷೆ ಮುಗಿದು, ಐಪಿಲ್ ಟಿ20 ಶುರುವಾದರೆ ಎಲ್ಲರೂ ಕ್ರಿಕೆಟ್ ಧ್ಯಾನ ಮಾಡುತ್ತಾರೆ. ಆಗ ಬ್ಯಾಟ್‌ಗಳು ಖರ್ಚಾಗುತ್ತವೆ’ ಎನ್ನುತ್ತಾರೆ ಆಕಾಶ್, ಸಚಿನ್.

**

‘ಬ್ಯಾಟುಗಳನ್ನು ತಯಾರಿಸುವುದು ನಾಜೂಕಿನ ಕೆಲಸ, ಇದು ನಮ್ಮ ಹಿರಿಯರು ಬಳುವಳಿಯಾಗಿ ಕೊಟ್ಟಿರುವ ಕಲೆ. ನಾವು ಮುಂದುವರಿಸುತ್ತಿದ್ದೇವೆ –  ಸಚಿನ್, ಬ್ಯಾಟ್ ವ್ಯಾಪಾರಿ.

–ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.