ಮದುವೆ ಮಂಟಪದಲ್ಲಿ ವಧುವಿನ ಮೇಲೆ ಹಲ್ಲೆ

7

ಮದುವೆ ಮಂಟಪದಲ್ಲಿ ವಧುವಿನ ಮೇಲೆ ಹಲ್ಲೆ

Published:
Updated:

ಸಾಗರ: ತಾಲ್ಲೂಕಿನ ಭೀಮನಕೋಣೆ ಸಮೀಪದ ಕಾಪ್ಟೆಮನೆ ಗ್ರಾಮದಲ್ಲಿ ಭಗ್ನ ಪ್ರೇಮಿಯೊಬ್ಬ ಮದುವೆ ಮಂಟಪದಲ್ಲೇ ವಧುವಿನ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ.

ಹೊಸನಗರ ತಾಲ್ಲೂಕಿನ ಮಾರುತಿಪುರ ಗ್ರಾಮದ ಗೀತಾ ಎಂಬುವವರ ಮದುವೆ ಸಾಗರ ತಾಲ್ಲೂಕಿನ ಕಾಪ್ಟೆಮನೆ ಗ್ರಾಮದ ಭರತ್‌ ಎಂಬುವವರೊಂದಿಗೆ ಸೋಮವಾರ ನಡೆದಿತ್ತು. ವರ ಹಾಗೂ ವಧು ಸಪ್ತಪದಿ ತುಳಿಯುತ್ತಿದ್ದಾಗ ಏಕಾಏಕಿ ಮದುವೆ ಮಂಟಪಕ್ಕೆ ನುಗ್ಗಿದ ಶಿವಮೊಗ್ಗದ ನಂದನ್‌ ಎಂಬುವವನು ಕತ್ತಿಯಿಂದ ವಧುವಿನ ಕತ್ತು ಇರಿದಿದ್ದಾನೆ.

ಇದನ್ನು ತಡೆಯಲು ಬಂದ ವಧುವಿನ ಸೋದರ ಮಾವ ಗಂಗಾಧರ ಅವರ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಗೀತಾ ಹಾಗೂ ಗಂಗಾಧರ್‌ ಅವರನ್ನು ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೀತಾ ಅವರು ಈ ಹಿಂದೆ ಶಿವಮೊಗ್ಗದ ಹೋಟೆಲ್‌ ಒಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಶಿವಮೊಗ್ಗದ ಆರ್‌ಟಿಒ ಕಚೇರಿಯಲ್ಲಿ ಬ್ರೋಕರ್‌ ಆಗಿ ಕೆಲಸ ಮಾಡುತ್ತಿದ್ದ ನಂದನ್‌ ತನ್ನನ್ನು ಪ್ರೀತಿಸುವಂತೆ ಗೀತಾಳನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.

ಗೀತಾ ಬೇರೊಬ್ಬರನ್ನು ಮದುವೆಯಾಗುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ನಂದನ್‌, ಮದುವೆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ನಂತರ ವಧು–ವರ ಸಪ್ತಪದಿ ತುಳಿಯುವ ವೇಳೆಗೆ ಮಂಟಪಕ್ಕೆ ನುಗ್ಗಿ ಕೃತ್ಯ ಎಸಗಿದ್ದಾನೆ.

ಮದುವೆ ಮನೆಯಲ್ಲಿದ್ದವರು ಆರೋಪಿ ನಂದನ್‌ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry