7

ಸೋಮಣ್ಣಗೆ ಬಿಜೆಪಿ ಟಿಕೆಟ್: ಆಕಾಂಕ್ಷಿಗಳಲ್ಲಿ ಆತಂಕ

Published:
Updated:

ಬೆಂಗಳೂರು: ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ವಿ. ಸೋಮಣ್ಣಗೆ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ವಿಧಾನಸಭೆ ಟಿಕೆಟ್‌ ನೀಡುವ ಸುಳಿವನ್ನು ಪಕ್ಷದ ವರಿಷ್ಠರು ನೀಡಿದ ಬೆನ್ನಲ್ಲೇ, ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದ ಟಿಕೆಟ್‌ ಸಿಗಲಿದೆ ಎಂಬ ಲೆಕ್ಕಾಚಾರ ಪಕ್ಷದಲ್ಲಿತ್ತು. ಹೀಗಾಗಿ, ಕಾರ್ಪೊರೇಟರ್‌ ಉಮೇಶ ಶೆಟ್ಟಿ, ವಿಧಾನಪರಿಷತ್ತಿನ ಮಾಜಿ ಸದಸ್ಯ ಅಶ್ವತ್ಥನಾರಾಯಣ ಹಾಗೂ 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರವೀಂದ್ರ ಈ ಬಾರಿ ಟಿಕೆಟ್‌ಗಾಗಿ ತಮ್ಮದೇ ಲಾಬಿ ನಡೆಸಿದ್ದರು.

ಕೇಂದ್ರ ಸಚಿವ ಎಚ್.ಎನ್. ಅನಂತ್ ಕುಮಾರ್‌ ಅವರನ್ನು ಭಾನುವಾರ ಭೇಟಿಯಾಗಿದ್ದ ಸೋಮಣ್ಣ, ಗೋವಿಂದರಾಜನಗರ ಟಿಕೆಟ್ ಖಾತ್ರಿ ಪಡಿಸಿಕೊಂಡಿದ್ದರು. ನಂತರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರನ್ನೂ ಭೇಟಿಯಾಗಿದ್ದರು. ಚರ್ಚೆಯ ವೇಳೆ, ಹನೂರಿಗೆ ಟಿಕೆಟ್‌ ಕೊಡುವುದಿಲ್ಲ ಎಂದು ಯಡಿಯೂರಪ್ಪ, ಸೋಮಣ್ಣಗೆ ಸ್ಪಷ್ಟವಾಗಿ ಹೇಳಿದ್ದರು.

ಸೋಮಣ್ಣ ಬಂದರೆ ಟಿಕೆಟ್ ಕೈತಪ್ಪುತ್ತದೆ ಎಂಬ ಭೀತಿಯಿಂದ ಕಂಗಾಲಾಗಿರುವ ಮೂವರು ಆಕಾಂಕ್ಷಿಗಳು ಈಗ ಒಟ್ಟಾಗಿದ್ದಾರೆ. ಮಂಗಳವಾರ ಸಭೆ ನಡೆಸಲಿರುವ ಇವರು, ಅನಂತ್‌ ಕುಮಾರ್ ಹಾಗೂ ಯಡಿಯೂರಪ್ಪ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry