ನಾಳೆ ಸಿದ್ಧಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ: ಸಚಿವ ಜಯಚಂದ್ರ ಮಾಹಿತಿ

ಸೋಮವಾರ, ಮಾರ್ಚ್ 25, 2019
21 °C

ನಾಳೆ ಸಿದ್ಧಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ: ಸಚಿವ ಜಯಚಂದ್ರ ಮಾಹಿತಿ

Published:
Updated:
ನಾಳೆ ಸಿದ್ಧಗಂಗಾ ಮಠಕ್ಕೆ ರಾಹುಲ್ ಗಾಂಧಿ ಭೇಟಿ: ಸಚಿವ ಜಯಚಂದ್ರ ಮಾಹಿತಿ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡುವರು ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠಕ್ಕೆ ಭೇಟಿ ನೀಡಿದ ನಂತರ ತುಮಕೂರು, ಗೂಳೂರು, ನಾಗವಲ್ಲಿ, ಹೆಬ್ಬೂರು, ಕುಣಿಗಲ್ ನಲ್ಲಿ ರಾಹುಲ್ ರೋಡ್ ಶೋ ನಡೆಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಭಾಗವಹಿಸುವರು’ ಎಂದು ತಿಳಿಸಿದರು.

‘ಕಾರ್ಯಕರ್ತರಲ್ಲಿ ಹುರುಪು’: ರಾಜ್ಯದ ಎಲ್ಲ ವಿಭಾಗಗಳಲ್ಲೂ ರಾಹುಲ್ ಗಾಂಧಿ ಸಂಚರಿಸುತ್ತಿದ್ದಾರೆ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ಬುಧವಾರ ರಾಹುಲ್ ಬಸ್‌ನಲ್ಲಿ ಸಂಚರಿಸಲಿದ್ದಾರೆ. ಅಲ್ಲಲ್ಲಿ ಕೆಲವು ನಿಮಿಷ ಕಾಲ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜಯಚಂದ್ರ ಹೇಳಿದರು.

ಏಪ್ರಿಲ್ 17 ರೊಳಗೆ ಕಾಂಗ್ರೆಸ್  ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಏಪ್ರಿಲ್ 9ರಂದು ರಾಹುಲ್ ಗಾಂಧಿ ಅವರು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದು, ಅಲ್ಲಿ ಟಿಕೆಟ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ನಮ್ಮ ಪಕ್ಷದ ಕೆಲವು ಪ್ರಭಾವಿ ಮುಖಂಡರನ್ನು ಸೆಳೆಯಲು ಐಟಿ ಮತ್ತಿತರ ತನಿಖಾ ಸಂಸ್ಥೆ ಗಳನ್ನು ಬಳಸಿಕೊಂಡಿರುವ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರಿಗೆ ಗೊತ್ತಿರಬಹುದು ಎಂದು ಅವರು ಹೇಳಿದರು.

‘ಎಲ್ಲ ನಾಯಕರ ಮಕ್ಕಳಿಗೆ ಟಿಕೆಟ್ ನೀಡುತ್ತಿಲ್ಲ. ಆರೇಳು ಜನರಿಗೆ ಮಾತ್ರ ನೀಡುತ್ತಿದ್ದೇವೆ. ಚಿಕ್ಕನಾಯಕನಹಳ್ಳಿ ನನ್ನ ಹುಟ್ಟೂರು. ಅಲ್ಲಿ ನನ್ನ ಮಗನಿಗೆ ಟಿಕೆಟ್ ನೀಡುವುದು, ಬಿಡುವುದು ಪಕ್ಷಕ್ಕೆ ಬಿಟ್ಟ‌ ವಿಚಾರ. ಜನರು, ಪಕ್ಷ ತೀರ್ಮಾನ ಮಾಡಲಿದ್ದಾರೆ. ನಾನು ಲಾಬಿ ಮಾಡುವುದಿಲ್ಲ’ ಎಂದು ಜಯಚಂದ್ರ ಹೇಳಿದರು.

ಬಿಜೆಪಿ ವಿರುದ್ಧ ಟೀಕೆ: ಜನರನ್ನು ಗೊಂದಲಕ್ಕೆ ಎಳೆಯುವುದು ಬಿಜೆಪಿ ತಂತ್ರ ಎಂದು ಜಯಚಂದ್ರ ಟೀಕಿಸಿದರು.

‘ನಾವು ಪ್ರಾಮಾಣಿಕವಾಗಿ ಆಡಳಿತ ನಡೆಸಿದ್ದೇವೆ. ಅಭಿವೃದ್ಧಿ ಮಾಡಿದ್ದೇವೆ. ಫಲಿತಾಂಶಕ್ಕೆ ರಾಹುಲ್ ಅವರು ಹೊಣೆ ಅಲ್ಲ. ನಾವೇ ಅಧಿಕಾರಕ್ಕೆ ಬರುತ್ತೇವೆ.  ದೇವರಾಜ ಅರಸು ರೀತಿ ಆಡಳಿತ ನೀಡಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಏನೂ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ’ ಎಂದು ಅವರು ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಸರ್ಕಾರದ ಪಾತ್ರ ಇರಲಿಲ್ಲ. ಜನರು, ಮಠಗಳ ಹೋರಾಟದ ಕಾರಣ ಸಮಿತಿ ರಚಿಸಿ ಅದರಂತೆ ಸಚಿವ ಸಂಪುಟ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry