ಶುಕ್ರವಾರ, ಡಿಸೆಂಬರ್ 13, 2019
19 °C
ಬತ್ತಿದ ತುಂಗಭದ್ರಾ ನದಿಪಾತ್ರ; ನೀರು ಹರಿಸಲು ಆಗ್ರಹ; ಎಚ್‌.ಕೆ ಪಾಟೀಲ ವಿರುದ್ಧ ಆಕ್ರೋಶ

ಹಮ್ಮಿಗಿ ಬ್ಯಾರೇಜ್‌ಗೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಮ್ಮಿಗಿ ಬ್ಯಾರೇಜ್‌ಗೆ ರೈತರ ಮುತ್ತಿಗೆ

ಮುಂಡರಗಿ: ಇಲ್ಲಿನ ಹಮ್ಮಿಗಿ ಬ್ಯಾರೇಜ್‌ನಿಂದ ತುಂಗಭದ್ರಾ ನದಿ ಪಾತ್ರಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸಿಂಗಟಾಲೂರು, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಹೆಸರೂರು ಗ್ರಾಮಗಳ ರೈತರು ಸೋಮವಾರ ಬ್ಯಾರೇಜ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.‘ಕಳೆದೆರಡು ವಾರಗಳಿಂದ ನದಿ ಪಾತ್ರ ಸಂಪೂರ್ಣವಾಗಿ ಬತ್ತಿ ಹೋಗಿದೆ. ಜನ, ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುತ್ತಿವೆ. ಈಗಾಗಲೇ ಭದ್ರಾ ನದಿಯಿಂದ ತುಂಗಭದ್ರಾ ನದಿಗೆ 2 ಟಿಎಂಸಿ ಅಡಿ ನೀರು ಬಿಡಲಾಗಿದ್ದು, ಅದು ಹಮ್ಮಿಗಿ ಬ್ಯಾರೇಜಿನಲ್ಲಿ ಸಂಗ್ರಹವಾಗಿದೆ. ಆದರೆ, ಬ್ಯಾರೇಜ್‌ ಕೆಳಗಿನ ಪ್ರದೇಶಗಳ ಗ್ರಾಮಗಳಿಗೆ ನದಿಪಾತ್ರದ ಮೂಲಕ ನೀರು ಹರಿಸುತ್ತಿಲ್ಲ. ತಕ್ಷಣವೇ ಬ್ಯಾರೇಜ್‌ನಿಂದ ನದಿಗೆ ನೀರು ಬಿಡಬೇಕು’ ಎಂದು ರೈತರು ಒತ್ತಾಯಿಸಿದರು.

‘ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹಾಗೂ ಜಿಲ್ಲೆಯ ಶಾಸಕರು ತುಂಗಭದ್ರಾ ನದಿ ನೀರನ ಮೂಲಕ ಕೆರಗಳನ್ನು ಭರ್ತಿ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿದರು. ಪರಿಣಾಮ ನದಿಯ ನೀರು ಬೇಗ ಖಾಲಿಯಾಗುವಂತಾಯಿತು. ಈಗ ಇಡೀ ಜಿಲ್ಲೆಯ ಜನತೆ ನೀರಿಲ್ಲದೆ ಪರದಾಡುವಂತಾಗಿದೆ’ ಎಂದು ಮುಂಡರಗಿ ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌.ಗೌಡರ ಕಟುವಾಗಿ ಆರೋಪಿಸಿದರು.

ಬಿಜೆಪಿ ಮುಖಂಡ ಕೆ.ವಿ.ಹಂಚಿನಾಳ ಮಾತನಾಡಿ, ‘ರೈತರು ಹಾಗೂ ಗ್ರಾಮಸ್ಥರು ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲಿಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಒಂದಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಕ್ಷಣ ನದಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.

ಬಸವರಾಜ ರಾಮೇನಹಳ್ಳಿ, ರವಿ ನಾಯಕ ಇದ್ದರು. ನಂತರ ಡಿವೈಎಸ್‌ಪಿ ಎಸ್‌.ಎ.ಪಾಟೀಲ, ಸಿಪಿಐ ತುಕುರಾಮ ನೀಲಗಾರ, ಹುಲಿಗುಡ್ಡ ನೀರಾವರಿ ಯೋಜನೆಯ ಹಿರಿಯ ಅಧಿಕಾರಿ ಪ್ರತಿಭಟನಾಕಾರರ ಬಳಿಗೆ ಬಂದು ಚರ್ಚಿಸಿದರು. 10 ದಿನಗಳಲ್ಲಿ 200 ಕ್ಯುಸೆಕ್ ನೀರು ನದಿ ಪಾತ್ರಕ್ಕೆ ಹರಿಸಲಾಗುವುದು ಎಂದು ಭರವಸೆ ನೀಡಿದರು.ರೈತರ ಸಮ್ಮುಖದಲ್ಲಿ ಬ್ಯಾರೇಜಿನ ಎರಡು ಗೇಟುಗಳನ್ನು ತೆರೆದು ನೀರನ್ನು ನದಿಗೆ ಬಿಟ್ಟ ನಂತರ ರೈತರು ಪ್ರತಿಭಟನೆಯನ್ನು ವಾಪಸ್‌ ಪಡೆದರು.

ಎಪಿಎಂಸಿ ಸದಸ್ಯ ಕೊಟ್ರೇಶ ಬಳ್ಳೊಳ್ಳಿ, ರೈತ ಮುಖಂಡ ಅಶೋಕ ಸೀಗೇನಹಳ್ಳಿ, ಫಕ್ಕಿರಡ್ಡಿ ನೀರಲಗಿ, ರವಿಕುಮಾರ ಕೊಳಲ, ಮರಿತಮ್ಮಪ್ಪ ಹನುಮಸಾಗರ, ಬಾವಾಜಿ ಇದ್ದರು.

‘ಸಚಿವರ ಪಿತ್ರಾರ್ಜಿತ ಆಸ್ತಿಯಲ್ಲ’

‘ಮುಂಡರಗಿ ಭಾಗದ ರೈತರು ಹುಲಿಗುಡ್ಡ ಏತನೀರಾವರಿ ಯೋಜನೆಗಾಗಿ ಬೆಲೆಬಾಳುವ ಜಮೀನು ಕಳೆದುಕೊಂಡಿದ್ದಾರೆ. ಆದರೆ, ಸಚಿವ ಎಚ್.ಕೆ.ಪಾಟೀಲ ಇಲ್ಲಿ ಸಂಗ್ರಹವಾಗುವ ಸಂಪೂರ್ಣ ನೀರನ್ನು ಗದಗ–ಬೆಟಗೇರಿ ನಗರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಆ ಮೂಲಕ ಈ ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ. ಅವರು ಬರೀ ಗದಗಕ್ಕೆ ಮಾತ್ರ ಮಂತ್ರಿಯಲ್ಲ, ಇಡೀ ರಾಜ್ಯದ ಮಂತ್ರಿ. ತುಂಗಭದ್ರಾ ನದಿ ನೀರು, ಹಮ್ಮಿಗಿ ಬ್ಯಾರೇಜ್‌ ಅವರ ಪಿತ್ರಾರ್ಜಿತ ಆಸ್ತಿಯೇನಲ್ಲ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ವೀರನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

**

ಬೇಸಿಗೆ ಮುಗಿಯುವ ತನಕ ಬ್ಯಾರೇಜ್‌ನಿಂದ ತುಂಗಭದ್ರಾ ನದಿ ಪಾತ್ರಕ್ಕೆ ನೀರು ಹರಿಸದಿದ್ದರೆ ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುವುದು – ವೈ.ಎನ್‌.ಗೌಡರ, ತಾಲ್ಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ.

**

ಪ್ರತಿಕ್ರಿಯಿಸಿ (+)