ಬುಧವಾರ, ಜುಲೈ 15, 2020
22 °C

ಸಾಗರ ತೀರದಲ್ಲಿ ಗೆಲುವಿನ ಛಲದಲ್ಲಿ

ಎಎಫ್ ಪಿ Updated:

ಅಕ್ಷರ ಗಾತ್ರ : | |

ಸಾಗರ ತೀರದಲ್ಲಿ ಗೆಲುವಿನ ಛಲದಲ್ಲಿ

ಗೋಲ್ಡ್‌ ಕೋಸ್ಟ್‌: ಪದಕಗಳ  ಕನಸು ಕಾಣುತ್ತ ಇಲ್ಲಿಗೆ ಬಂದಿರುವ ಕ್ರೀಡಾಪಟುಗಳ ಕಣ್ಮನ ತಣಿಸುವ ಕಾರ್ಯಕ್ರಮಗಳ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟ ಬುಧವಾರ ಆರಂಭವಾಗಲಿದೆ.

71 ರಾಷ್ಟ್ರಗಳ 6,600 ಕ್ರೀಡಾಪಟುಗಳು ಕೂಟದಲ್ಲಿ ಪದಕಗಳ ಬೇಟೆಯಾಡಲಿದ್ದು ಭಾರತದ 221 ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ.

ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಕ್ವೀನ್ಸ್‌ಲ್ಯಾಂಡ್‌ನ ಕರಾರ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಬೆಳಕಿನ ವೈಭವ, ನೃತ್ಯದ ಸೊಬಗು ಮತ್ತು ಸಂಗೀತದ ರಸದೌತಣ ಒಳಗೊಂಡ ಕಾರ್ಯಕ್ರಮಗಳು ಸಮಾರಂಭಕ್ಕೆ ರಂಗು ತುಂಬಲಿವೆ.

ಆಸ್ಟ್ರೇಲಿಯಾದ ಸಂಸ್ಕೃತಿಯನ್ನು ಬಿಂಬಿಸುವ ರೂಪಕಗಳು ಕೂಡ ಸಿದ್ಧವಾಗಿದ್ದು ಬಣ್ಣಗಳ ಸಮ್ಮಿಲನದಲ್ಲಿ ಒಗ್ಗಟ್ಟು ಮತ್ತು ವೈವಿಧ್ಯತೆಯನ್ನು ಬಿಂಬಿಸುವ ಪ್ರಯತ್ನ ನಡೆಯಲಿದೆ. ಒಟ್ಟು ನಾಲ್ಕು ಸಾವಿರ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಭಾರತದ ಧ್ವಜ ಹಿಡಿದು ಮುನ್ನಡೆಯಲಿದ್ದಾರೆ.

ಭಾರತದ ಆಟಗಾರರಿಗೆ ಅಗ್ರಶ್ರೇಯಾಂಕ

ಬ್ಯಾಡ್ಮಿಂಟನ್‌ನ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಕ್ರಮವಾಗಿ ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ.ಸಿಂಧು ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ. ಕೂಟದ ಬ್ಯಾಡ್ಮಿಂಟನ್‌ ಸ್ಪರ್ಧೆಗಳು ಏಪ್ರಿಲ್‌ 10ರಂದು ಆರಂಭವಾಗಲಿವೆ.

ಪಿ.ವಿ. ಸಿಂಧು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು ಮೊದಲ ಪಂದ್ಯದಲ್ಲಿ ಫಾಕ್ಲೆಂಡ್‌ ಐಲೆಂಡ್‌ನ ಜೋ ಮಾರಿಸ್ ವಿರುದ್ಧ ಸೆಣಸಲಿದ್ದಾರೆ. ಗ್ಲಾಸ್ಗೊದಲ್ಲಿ 2014ರಲ್ಲಿ ನಡೆದ ಕಾಮನ್‌ವೆಲ್ತ್ ಕೂಟದ ಸೆಮಿಫೈನಲ್‌ನಲ್ಲಿ ಸಿಂಧು ಕೆನಡಾದ ಮೈಕೆಲಿ ಲೀ ಎದುರು ಸೋತಿದ್ದರು. ಮಹಿಳೆಯರ ವಿಭಾಗದಲ್ಲಿ ಸೈನಾ ನೆಹ್ವಾಲ್‌ ಅವರಿಗೆ ಎರಡನೇ ಶ್ರೇಯಾಂಕ ನೀಡಲಾಗಿದೆ. ಅವರಿಗೂ ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.

ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಫಿಜಿಯ ಲಿಯಾಮ್ ಫಾಂಗ್ ಎದುರು ಸೆಣಸಲಿದ್ದಾರೆ. ಎಚ್‌.ಎಸ್‌.ಪ್ರಣಯ್‌ ಮೂರನೇ ಶ್ರೇಯಾಂಕ ಹೊಂದಿದ್ದು ಮೊದಲ ಸುತ್ತಿನಲ್ಲಿ ಬೈ ಲಭಿಸಿದೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಭರವಸೆ ಮೂಡಿಸಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮೊದಲ ಪಂದ್ಯದಲ್ಲಿ ಮಾರಿಷಸ್‌ನ ಲಬಾ ಆತಿಶ್‌–ಪಾಲ್‌ ಜೋಡಿಯ ವಿರುದ್ಧ ಅಥವಾ ಫಾಕ್ಲೆಂಡ್‌ ಐಲೆಂಡ್‌ನ ಕ್ಲಾರ್ಕ್‌ ಡಗ್ಲಾಸ್‌–ಅಡೆಯೆ ತೊಬಿ ಜೋಡಿ ವಿರುದ್ಧ ಸೆಣಸಲಿದ್ದಾರೆ.

ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ  ಸಾತ್ವಿಕ್ ಸಾಯಿರಾಜ್ ಮತ್ತು ಅಶ್ವಿನಿ ಪೊನ್ನಪ್ಪ ಮೊದಲ ಪಂದ್ಯದಲ್ಲಿ ಹಾರ್ಡಿ ಸ್ಟುವರ್ಟ್‌ ಮತ್ತು ಖ್ಲೋ ಲಿ ಟಿಸ್ಸೆರ್‌ ವಿರುದ್ಧ ಸೆಣಸುವರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರಿ ಚೋಪ್ರಾ ಮತ್ತು ಸಿಕ್ಕಿ ಅವರಿಗೆ ನಾಲ್ಕನೇ ಶ್ರೇಯಾಂಕ ನೀಡಲಾಗಿದೆ.

ಮೇರಿ ಕೋಮ್‌ಗೆ ಒಂದೇ ಹೆಜ್ಜೆ ಸಾಕು

ಭಾರತದ ಬಾಕ್ಸರ್ ಮೇರಿ ಕೋಮ್‌ ಮಹಿಳೆಯರ ವಿಭಾಗದಲ್ಲಿ ಪದಕ ಗೆಲ್ಲಲು ಕೇವಲ ಒಂದು ಬೌಟ್ ಗೆದ್ದರೆ ಸಾಕು. 48 ಕೆಜಿ ವಿಭಾಗದಲ್ಲಿ ಅವರು ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿದ್ದು ಸ್ಕಾಟ್ಲೆಂಡ್‌ನ ಮೆಗಾನ್ ಗೋರ್ಡಾನ್ ಅವರ ವಿರುದ್ಧ ಗೆದ್ದರೆ ಪದಕ ಖಚಿತ ಆಗಲಿದೆ. ಈ ಸ್ಪರ್ಧೆ ಏಪ್ರಿಲ್‌ ಎಂಟರಂದು ನಡೆಯಲಿದೆ. ಈ ವಿಭಾಗದಲ್ಲಿ ಒಟ್ಟು ಎಂಟು ಮಂದಿ ಸ್ಪರ್ಧಿಸುತ್ತಿದ್ದಾರೆ.

ವಿಕಾಸ್ ಕೃಷ್ಣ 75 ಕೆಜಿ ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದ್ದಾರೆ. 60 ಕೆಜಿ ವಿಭಾಗದಲ್ಲಿ ಮನೀಶ್ ಕೌಶಿಕ್ ಮತ್ತು 91 ಕೆಜಿ ಮೇಲಿನವರ ವಿಭಾಗದಲ್ಲಿ ಸತೀಶ್ ಕುಮಾರ್‌ ಮತ್ತು 51 ಕೆಜಿ ವಿಭಾಗದಲ್ಲಿ ಪಿಂಕಿ ಜಂಗಾರ ಕೂಡ ಬೈ ಪಡೆದು ಅಂತಿಮ 16ರಲ್ಲಿ ಸ್ಥಾನ ಗಳಿಸಿದ್ದಾರೆ.

ಹೊಸ ನಿಯಮ ಜಾರಿ ಇಲ್ಲ

ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಬಿಡಬ್ಲ್ಯುಎಫ್‌ನ ಹೊಸ ನಿಯಮವನ್ನು ಜಾರಿಗೆ ತರದೇ ಇರಲು ಸಂಘಟಕರು ನಿರ್ಧರಿಸಿದ್ದಾರೆ. ಹೊಸ ನಿಯಮ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ಭಾರತದ ಆಟಗಾರರು ಈ ನಿರ್ಧಾರದಿಂದ ನಿಟ್ಟುಸಿರು ಬಿಡುವಂತಾಗಿದೆ.

ಸರ್ವ್‌ ಮಾಡುವ ಸಂದರ್ಭದಲ್ಲಿ ಅಂಗಣದಿಂದ ಷಟಲ್‌ 1.15 ಮೀಟರ್ ಎತ್ತರದಲ್ಲಿರಬೇಕು ಎಂಬುದು ಹೊಸ ನಿಯಮ. ಇದನ್ನು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಬಳಸಲಾಗಿತ್ತು.

ಹೊಸ ನಿಯಮವನ್ನು ಕಾಮನ್‌ವೆಲ್ತ್ ಕೂಟದಲ್ಲಿ ಬಳಸದೇ ಇರಲು ನಿರ್ಧರಿಸಿರುವ ವಿಷಯವನ್ನು ಎಲ್ಲ ರಾಷ್ಟ್ರೀಯ ಸಂಸ್ಥೆಗಳಿಗೆ ಸಂಘಟಕರು ಸಂದೇಶದ ಮೂಲಕ ಕಳುಹಿಸಿದ್ದಾರೆ.

ಸಿರಿಂಜ್‌: ನಿಟ್ಟುಸಿರು ಬಿಟ್ಟ ಭಾರತ

ಕ್ರೀಡಾ ಗ್ರಾಮದಲ್ಲಿ ಉದ್ದೀಪನ ಮದ್ದು ಸೇವನೆಗೆ ಸಂಬಂಧಿಸಿದ ಸಿರಿಂಜ್ ಪತ್ತೆಯಾದ ಕಾರಣ ಮುಜುಗರಕ್ಕೆ ಒಳಗಾಗಿದ್ದ ಭಾರತ ಮಂಗಳವಾರ ನಿಟ್ಟುಸಿರು ಬಿಟ್ಟಿದೆ. ಭಾರತವನ್ನು ಕ್ರೀಡಾಕೂಟದ ಸಂಘಟಕರು ಆರೋಪಮುಕ್ತಗೊಳಿಸಿದ್ದಾರೆ. ಆದರೆ ಕಠಿಣ ಎಚ್ಚರಿಕೆ ನೀಡಲಾಗಿದೆ.

‘ಭಾರತ ಬಾಕ್ಸಿಂಗ್ ತಂಡದ ವೈದ್ಯರು ಅನಾರೋಗ್ಯಕ್ಕೆ ಒಳಗಾಗಿದ್ದ ಕ್ರೀಡಾಪಟುವಿಗೆ ವಿಟಮಿನ್ ಒಳಗೊಂಡ ಚುಚ್ಚುಮದ್ದು ನೀಡಿದ್ದಾರೆ. ಸಿರಿಂಜ್ ಬಳಕೆಗೆ ಸಂಬಂಧಿಸಿದ ನಿಯಮವನ್ನು ಈ ಸಂಧರ್ಭದಲ್ಲಿ ಅವರು ಉಲ್ಲಂಘಿಸಿದ್ದಾರೆ’ ಎಂದು ಸಂಘಟಕರು ಹೇಳಿದ್ದಾರೆ.

ಚೆಂಡು ವಿರೂಪ ಪ್ರಕರಣ ಪ್ರತಿಧ್ವನಿ!

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸದ್ದು ಮಾಡಿದ ಚೆಂಡು ವಿರೂಪ ಪ್ರಕರಣ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಪ್ರತಿಧ್ವನಿಸಿದೆ. ಆಸ್ಟ್ರೇಲಿಯಾ ಈಜು ತಂಡದ ಕೋಚ್‌ ಜಾಕೊ ವೆರಾರೆನ್‌ ಈಜುಪಟುಗಳಿಗೆ ಎಚ್ಚರಿಕೆ ನೀಡಿದ್ದು ಸ್ಪರ್ಧೆಗಳ ಸಂದರ್ಭದಲ್ಲಿ ಉತ್ತಮ ನಡವಳಿಕೆಯನ್ನು ಹೊಂದಿರುವಂತೆ ತಾಕೀತು ಮಾಡಿದ್ದಾರೆ.

ಚೆಂಡು ವಿರೂಪ ಪ್ರಕರಣವನ್ನು ನೆನೆದಿರುವ ಕೋಚ್‌ ‘ಇದು ನಮ್ಮ ದೇಶದಲ್ಲಿ ನಡೆಯುತ್ತಿರುವ ಅತಿದೊಡ್ಡ ಕ್ರೀಡಾಕೂಟ. ಈಜುಪಟುಗಳು ಕೂಟದಲ್ಲಿ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸುವ ಪೂರ್ಣ ಭರವಸೆ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.