7
ಚುಚ್ಚುಮದ್ದು ನೀಡಿದ ಬಳಿಕ ಹದಗೆಟ್ಟ ಮಗುವಿನ ಆರೋಗ್ಯ: ಆರೋಪ

ವೈದ್ಯರ ನಿರ್ಲಕ್ಷ್ಯ; ಪೋಷಕರ ಆಕ್ರೋಶ

Published:
Updated:

ಬೆಂಗಳೂರು: ‘ಗೊರಗುಂಟೆಪಾಳ್ಯದ ಪೀಪಲ್ ಟ್ರೀ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಎರಡು ವರ್ಷದ ಮಗ ನಿರಂಜೈ, ಸಾವು– ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ’ ಎಂದು ಆರೋಪಿಸಿ, ಮಗುವಿನ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯ ಎದುರು ಮಂಗಳವಾರ ಬೆಳಿಗ್ಗೆ ಸೇರಿದ್ದ ಪೋಷಕರು, ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದರು. ಆರ್‌.ಎಂ.ಸಿ ಯಾರ್ಡ್‌ ಪೊಲೀಸರು, ಅದಕ್ಕೆ ಅವಕಾಶ ನೀಡಲಿಲ್ಲ. ಆಸ್ಪತ್ರೆ ಬಳಿ ಕುಳಿತುಕೊಳ್ಳದಂತೆ ತಾಕೀತು ಮಾಡಿದ ಪೊಲೀಸರು, ‘ಸತ್ಯಾಗ್ರಹಕ್ಕೆ ಅನುಮತಿ ಇಲ್ಲ. ನಡೆಸಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪೋಷಕರು, ‘ನಾವು ನ್ಯಾಯ ಕೇಳಲು ಬಂದಿದ್ದೇವೆ. ಇದಕ್ಕೆ ಅವಕಾಶ ಮಾಡಿಕೊಡಿ’ ಎಂದು ಒತ್ತಾಯಿಸಿದರು. ಆಗ ಪೊಲೀಸರು, ಪೋಷಕರನ್ನು ಆಸ್ಪತ್ರೆಯೊಳಗೆ ಕರೆದೊಯ್ದರು. ನಂತರ ಪೋಷಕರು ವೈದ್ಯರೊಂದಿಗೆ ಸಂಧಾನ ನಡೆಸಿದರು.

‘ನಿಮ್ಮ ಆಸ್ಪತ್ರೆ (ಪೀಪಲ್‌ ಟ್ರೀ) ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಮಗು ಕೈ–ಕಾಲು ಸ್ವಾಧೀನ ಕಳೆದುಕೊಂಡಿದೆ. ಪದೇ ಪದೇ ಜ್ವರದಿಂದ ಬಳಲುತ್ತಿದೆ. ಆರೋಗ್ಯ ಸುಧಾರಿಸುವವರೆಗೂ ಚಿಕಿತ್ಸಾ ವೆಚ್ಚವನ್ನು ನೀವೇ ಭರಿಸಬೇಕು’ ಎಂದು ಪೋಷಕರು ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಒತ್ತಾಯಿಸಿದರು.

ವೈದ್ಯರು, ‘ಕರ್ನಾಟಕ ವೈದ್ಯಕೀಯ ಮಂಡಳಿಯಲ್ಲಿ (ಕೆಎಂಸಿ) ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದು ಸರಿಯಲ್ಲ. ಮಂಡಳಿಯ ಆದೇಶದಂತೆ ನಡೆದುಕೊಳ್ಳಲು ಸಿದ್ಧರಿದ್ದೇವೆ’ ಎಂದರು.

ಪೋಷಕರು, ‘ಮಗುವಿಗೆ ಚಿಕಿತ್ಸೆ ಕೊಡಿಸುವ ಬಗ್ಗೆ ಆಸ್ಪತ್ರೆಯವರು ಏಪ್ರಿಲ್ 20ರೊಳಗೆ ನಿರ್ಧಾರ ತಿಳಿಸಬೇಕು. ಇಲ್ಲದಿದ್ದರೆ, ಆಸ್ಪತ್ರೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿ ಹೊರನಡೆದರು.

ಚುಚ್ಚುಮದ್ದು ನೀಡುವಾಗ ಲೋಪ: ‘ಪ್ರಜಾವಾಣಿ’ ಜತೆ ಮಾತನಾಡಿದ ಮಗುವಿನ ತಂದೆ ಎಂ.ವಿ.ಮನೋಜ್ , ‘ಮಗುವಿಗೆ ಏಳು ತಿಂಗಳು ಇರುವಾಗ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಪೀಪಲ್‌ ಟ್ರೀ ಆಸ್ಪತ್ರೆಗೆ ದಾಖಲಿಸಿದ್ದೆ. ಅಲ್ಲಿಯ ಸಿಬ್ಬಂದಿ, ಚುಚ್ಚುಮದ್ದು ನೀಡುವಾಗ ಲೋಪವಾಗಿದೆ.  ಅದರಿಂದಾಗಿ ಮಗುವಿನ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ದೇಹದ ಅಂಗಾಂಗಗಳು ಸ್ವಾಧೀನ ಕಳೆದುಕೊಂಡಿವೆ’ ಎಂದು ಆರೋಪಿಸಿದರು.

‘ಉದ್ಯೋಗ ಅರಸಿ 15 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದೇನೆ. ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ನಿರಂಜೈ ಎರಡನೆಯವನು. 2016ರ ನವೆಂಬರ್‌ನಲ್ಲಿ ಆತನನ್ನು ಮೊದಲು ದಾಸರಹಳ್ಳಿಯ ಪೀಪಲ್‌ ಟ್ರೀ ಆಸ್ಪತ್ರೆಗೆ ದಾಖಲಿಸಿದ್ದೆವು. ಅಲ್ಲಿ ಹುಷಾರಾಗಿದ್ದರಿಂದ, ಗೊರಗುಂಟೆಪಾಳ್ಯದ ಆಸ್ಪತ್ರೆಗೆ ಕಳುಹಿಸಿದ್ದರು.’

‘ಚಿಕಿತ್ಸೆಗೆಂದು ಅಲ್ಲಿಯ ವೈದ್ಯರು, ಮಗನನ್ನು ಒಂದು ತಿಂಗಳವರೆಗೆ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದರು. ಆದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರಲಿಲ್ಲ. ತರಬೇತಿನಿರತ ನರ್ಸ್‌ ಒಬ್ಬರು ಮಗನಿಗೆ ಇಂಜೆಕ್ಷನ್‌ ನೀಡಿದ್ದರು. ಅದಾದ 2 ನಿಮಿಷದಲ್ಲೇ ತುಟಿಗಳು ಬಿಳಿ ಬಣ್ಣಕ್ಕೆ ತಿರುಗಿ, ದವಡೆಯ ರೂಪ ಬದಲಾಗಿತ್ತು. ಗಾಬರಿಗೊಂಡು, ಮತ್ತೊಬ್ಬ ನರ್ಸ್‌ಗೆ ವಿಷಯ ತಿಳಿಸಿದ್ದೆ. ಅವರು, ‘ಅಯ್ಯೋ. ಈ ಇಂಜೆಕ್ಷನ್‌ ಏಕೆ ನೀಡಿದ್ದಾರೆ’ ಎಂದು ಗಾಬರಿಯಲ್ಲೇ ವೈದ್ಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ವೈದ್ಯರು ಬಂದು ತಪಾಸಣೆ ನಡೆಸಿದಾಗ, ಮಗನಿಗೆ ಹೃದಯಾಘಾತ ಆಗಿರುವುದು ತಿಳಿಯಿತು’ ಎಂದು ಮನೋಜ್ ಹೇಳಿದರು.

‘ಅದಾದ ನಂತರ, ಮಗು ಹುಷಾರಾಗಿದ್ದಾನೆ ಎಂದು ಹೇಳಿ ಮನೆಗೆ ಕಳುಹಿಸಿದರು. ಮನೆಗೆ ಬಂದ ನಂತರ, ಮಗ ಹಾಸಿಗೆಯಲ್ಲೇ ಇದ್ದಾನೆ. ಆರೋಗ್ಯದಲ್ಲಿ ಸ್ವಲ್ಪವೂ ಚೇತರಿಕೆ ಕಂಡುಬಂದಿಲ್ಲ. ಹಲವು ವೈದ್ಯರ ಬಳಿ ತೋರಿಸಿದಾಗ, ‘ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಇಂಜೆಕ್ಷನ್‌ ನೀಡುವಾಗ ಆಗಿರುವ ಲೋಪದಿಂದ ಈ ರೀತಿಯಾಗಿದೆ’ ಎನ್ನುತ್ತಿದ್ದಾರೆ. ನನ್ನ ಮಗನಿಗೆ ಬಂದ ಸ್ಥಿತಿ ಬೇರೆ ಯಾರಿಗೂ ಬರಬಾರದೆಂದು ಹೋರಾಟ ನಡೆಸುತ್ತಿದ್ದೇನೆ’ ಎಂದರು.

ಪೋಷಕರ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆಸ್ಪತ್ರೆಯವರು ಲಭ್ಯರಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry