ಅರುಣಕುಮಾರ್‌ ವಿರುದ್ಧ ಕಠಿಣ ಕ್ರಮಕ್ಕೆ ನಿತಿನ್‌ ಒತ್ತಾಯ

7
ಕಾಂಗ್ರೆಸ್ ಮುಖಂಡ ನಿತಿನ್ ಗುತ್ತೇದಾರ ಒತ್ತಾಯ

ಅರುಣಕುಮಾರ್‌ ವಿರುದ್ಧ ಕಠಿಣ ಕ್ರಮಕ್ಕೆ ನಿತಿನ್‌ ಒತ್ತಾಯ

Published:
Updated:

 

ಕಲಬುರ್ಗಿ: ‘ಈಡಿಗರ ಕೋಣವನ್ನು ಕಡಿಯಲೇಬೇಕು ಎಂದು ಹೇಳುವ ಮೂಲಕ ಕೊಲೆ ಬೆದರಿಕೆ ಹಾಕಿರುವ ಮಾಜಿ ಶಾಸಕ ಎಂ.ವೈ.ಪಾಟೀಲ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ್ ಪಾಟೀಲ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಮುಖಂಡ,  ಮಾಲೀಕಯ್ಯ ಗುತ್ತೇದಾರ ಅವರ ಸಹೋದರ ನಿತಿನ್ ಗುತ್ತೇದಾರ ಒತ್ತಾಯಿಸಿದರು.

‘ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಬೇಕಾದರೆ ಚುನಾವಣೆ ಮುಗಿಯುವವರೆಗೆ ಯಾವುದೇ ರೀತಿಯ ಪ್ರಚಾರಕ್ಕೆ ಅನುಮತಿ ನೀಡಬಾರದು ಹಾಗೂ ಅವರನ್ನು ಬಂಧಿಸಿ, ಗಡೀಪಾರು ಮಾಡಬೇಕು. ರಾಜಕೀಯದಲ್ಲಿ ಆರೋಪ–ಪ್ರತ್ಯಾರೋಪ ಸಹಜ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸಮಾಜದ ಹೆಸರಿನಲ್ಲಿ ಜಾತಿ ನಿಂದನೆ ಮಾಡಿರುವುದು ಮತ್ತು ಏಕ ವಚನ ಪ್ರಯೋಗಿಸಿರುವುದು ಖಂಡನೀಯ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.‘ಅಫಜಲಪುರ ಮತಕ್ಷೇತ್ರದಲ್ಲಿ ಈಡಿಗರ ಮತಗಳು ಕಡಿಮೆ ಇವೆ. ಮಾಲೀಕಯ್ಯ ಅವರು ಇತರೆ ಎಲ್ಲ ಜಾತಿ–ಜನಾಂಗದವರೊಂದಿಗೆ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

‘ನಾನು ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನನ್ನ ಮುಂದಿನ ನಡೆಯನ್ನು ಶೀಘ್ರವೇ ತಿಳಿಸುತ್ತೇನೆ. ಯಾರ ನಾಯಕತ್ವದಿಂದ ಒಳ್ಳೆಯದಾಗುತ್ತದೋ ಅಂಥವರಿಗೆ ಈಡಿಗ ಸಮಾಜ ಬೆಂಬಲ ನೀಡುತ್ತದೆ. ನಮಗೆ ಪಕ್ಷ ಮುಖ್ಯ ಅಲ್ಲ, ವ್ಯಕ್ತಿ ಮುಖ್ಯ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಮ್ಮ ಸಮಾಜ ಸಣ್ಣದು. ನಾವು ಅಲ್ಪಸಂಖ್ಯಾತರು. ಹಾಗಂತ ಇತರೆ ಸಮುದಾಯದವರನ್ನು ಎಂದಿಗೂ ಕಡೆಗಣಿಸಿಲ್ಲ. ಮಾಲೀಕಯ್ಯ ಅವರು ಎಂ.ವೈ.ಪಾಟೀಲ ಬಗ್ಗೆ ಹಗುರವಾಗಿ, ಕೀಳು ಮಟ್ಟದಲ್ಲಿ ಯಾವತ್ತೂ ಮಾತನಾಡಿಲ್ಲ. ಕ್ಷೇತ್ರದ ಮತದಾರರು ಪ್ರಜ್ಞಾವಂತರಿದ್ದು, ಯಾರನ್ನು

ಆಯ್ಕೆ ಮಾಡಬೇಕು ಎಂಬುದು ಅವರಿಗೆ ಗೊತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ, ಮುಖಂಡರಾದ ವೆಂಕಯ್ಯ ಗುತ್ತೇದಾರ, ಶಿವಯ್ಯ ಗುತ್ತೇದಾರ, ಕಾಶೀನಾಥ ಗುತ್ತೇದಾರ, ಚಂದ್ರಶೇಖರ್ ಗಾರಂಪಳ್ಳಿ, ವಕೀಲ ಸೈಯದ್ ಮಸ್ತಾನ್ ಸೇರಿದಂತೆ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry