ಭಾನುವಾರ, ಡಿಸೆಂಬರ್ 15, 2019
19 °C

ಜನರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಯುವಕ ಮಧುವಿನ ಕುಟುಂಬಕ್ಕೆ ಸೆಹ್ವಾಗ್ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರಿಂದ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಯುವಕ ಮಧುವಿನ ಕುಟುಂಬಕ್ಕೆ ಸೆಹ್ವಾಗ್ ನೆರವು

ಪಾಲಕ್ಕಾಡ್: ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಜನರ ಹಲ್ಲೆಗೊಳಗಾಗಿ ಸಾವಿಗೀಡಾಗಿದ್ದ ಬುಡಕಟ್ಟು ಜನಾಂಗದ ಯುವಕ ಮಧುವಿನ ಕುಟುಂಬಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹಾಯಧನ ನೀಡಿದ್ದಾರೆ.

ಮಧುವಿನ ಅಮ್ಮ ಮಲ್ಲಿ ಅವರಿಗೆ ಸೆಹ್ವಾಗ್ ₹1.5 ಲಕ್ಷ ಚೆಕ್ ನೀಡಿದ್ದಾರೆ ಎಂದು ಕೇರಳದ ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಅವರ ಫೌಂಡೇಶನ್ ಈ ಚೆಕ್ ನೀಡಿದ್ದು ಇದನ್ನು ಏಪ್ರಿಲ್ 11ರಂದು ಮಲ್ಲಿ ಅವರಿಗೆ ಹಸ್ತಾಂತರಿಸಲಾಗುವುದು ಎಂದು ದ ನ್ಯೂಸ್ ಮಿನಿಟ್ ಸುದ್ದಿ ತಾಣ ವರದಿ ಮಾಡಿದೆ.

ನಾನು ಮಧು ಅವರ ಕುಟುಂಬ ಮತ್ತು ಮಲ್ಲಿ ಅವರನ್ನು ಭೇಟಿ ಮಾಡಲಿದ್ದೇನೆ. ನನ್ನೊಂದಿಗೆ ಡಿವೈಎಸ್‍ಪಿ ಅಗಳಿ ಸುಬ್ರಮಣ್ಯನ್ ಸರ್ ಇರಲಿದ್ದಾರೆ. ಬುಡಕಟ್ಟು ಜನರ ಸಮಸ್ಯೆಯು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಬೇಕಿದೆ ಎಂದು ರಾಹುಲ್ ಈಶ್ವರ್ ಹೇಳಿದ್ದಾರೆ.

ಸೆಹ್ವಾಗ್ ಅವರ ಈ ಸಹಾಯಕ್ಕೆ ಸಾಮಾಜಿಕ ತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.


ವಿವಾದವಾಗಿತ್ತು ಸೆಹ್ವಾಗ್ ಟ್ವೀಟ್


ಮಧು ಹತ್ಯೆಯಾದಾಗ ಸೆಹ್ವಾಗ್ ಮಾಡಿದ ಟ್ವೀಟ್ ವಿವಾದ ಸೃಷ್ಟಿಸಿತ್ತು. ಫೆ.24 ರಂದು ಟ್ವೀಟ್ ಮಾಡಿದ್ದ ಸೆಹ್ವಾಗ್  ಬುಡಕಟ್ಟು ಜನಾಂಗದ ಮಧು 1 ಕೆಜಿ ಅಕ್ಕಿಯನ್ನು ಕಳ್ಳತನ ಮಾಡಿದ್ದಕ್ಕೆ ಉಬೈದ್, ಹುಸೈನ್, ಅಬ್ದುಲ್ ಕರೀಂ ಥಳಿಸಿ ಹತ್ಯೆ ಮಾಡಿದ್ದಾರೆ. ನಾಗರಿಕ ಸಮಾಜದಲ್ಲಿ ಈ ರೀತಿ ನಡೆದಿದ್ದು ಇದೊಂದು ತಲೆ ತಗ್ಗಿಸುವ ಪ್ರಕರಣ ಎಂದು ಟ್ವೀಟ್ ಮಾಡಿದ್ದರು. ಆದಾಗ್ಯೂ, ಈ ಟ್ವೀಟ್‍ನಲ್ಲಿ ಸೆಹ್ವಾಗ್ ಆರೋಪಿಗಳನ್ನು ಧರ್ಮದ ಆಧಾರದಲ್ಲಿ ನೋಡಿದ್ದು ತಪ್ಪು ಎಂದು ನೆಟಿಜನ್‍ಗಳು ಟೀಕಾಪ್ರಹಾರ ನಡೆಸಿದ್ದರು.

ಏನಿದು ಪ್ರಕರಣ?
ಮುಕ್ಕಾಲಿ ಎಂಬಲ್ಲಿ ಆಹಾರವನ್ನು ಕಳ್ಳತನ ಮಾಡಿದ್ದಕ್ಕಾಗಿ ಅಟ್ಟಪ್ಪಾಡಿ ಕಡುಕಮಣ್ಣ ಎಂಬಲ್ಲಿ ವಾಸಿಸುತ್ತಿದ್ದ ಆದಿವಾಸಿ ಯುವಕ ಮಧು ಎಂಬಾತನನ್ನು ಗ್ರಾಮಸ್ಥರು ಸೆರೆ ಹಿಡಿದು ಥಳಿಸಿದ್ದರು. ನಂತರ ಪೊಲೀಸರ ವಶಕ್ಕೊಪ್ಪಿಸಿದ್ದರು. ಗ್ರಾಮಸ್ಥರಿಂದ ತೀವ್ರ ಹಲ್ಲೆಗೊಳಗಾದ ಮಧು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೂ ಮಧುವಿನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)