ಮಂಗಳವಾರ, ಜೂಲೈ 7, 2020
24 °C
ನಿರ್ವಹಣೆ ಕೊರತೆಯಿಂದ ನಿತ್ಯ ವಿದ್ಯುತ್ ಪೋಲು; ಸಾರ್ವಜನಿಕರ ಅಸಮಾಧಾನ

ದಿನವಿಡೀ ಉರಿಯುವ ಬೀದಿ ದೀಪಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿನವಿಡೀ ಉರಿಯುವ ಬೀದಿ ದೀಪಗಳು

ಬ್ಯಾಡಗಿ: ಪಟ್ಟಣದ ಪ್ರಮುಖ ಬೀದಿ, ರಸ್ತೆಗಳಲ್ಲಿ ಸೂರ್ಯನಿಗೆ ಸವಾಲೊಡ್ಡುವಂತೆ ಮಧ್ಯಾಹ್ನದ ಸುಡು ಬಿಸಿಲಿನಲ್ಲಿಯೂ ಇಲ್ಲಿನ ಬೀದಿ ದೀಪಗಳು ಉರಿಯುತ್ತವೆ.ಪಟ್ಟಣದಲ್ಲಿ ಅಗತ್ಯವಿದ್ದ ಕಡೆ ಬೀದಿ ದೀಪಗಳನ್ನು ಹಾಕುವಂತೆ ಸ್ಥಳೀಯರು ಮನವಿ ಮಾಡಿಕೊಂಡರು ಕ್ಯಾರೇ ಎನ್ನದ ಪುರಸಭೆ ಅಧಿಕಾರಿಗಳು, ಮಧ್ಯಾಹ್ನದವರೆಗೂ ಬೀದಿ ದೀಪಗಳು ಉರಿಸುವುದು ಸರ್ವೇ ಸಾಮಾನ್ಯವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

‘ಪಟ್ಟಣದ ಬೀದಿ ದೀಪಗಳ ನಿರ್ವಹಣೆಗೆ ಪ್ರತಿ ತಿಂಗಳ ಗುತ್ತಿಗೆದಾರರಿಗೆ ₹1 ಲಕ್ಷ ಸಂದಾಯವಾಗುತ್ತಿದೆ. ನೀರು ಸರಬರಾಜು, ಬೀದಿ ದೀಪ ಸೇರಿದಂತೆ ಹೆಸ್ಕಾಂ ಇಲಾಖೆಗೆ ಪ್ರತಿ ತಿಂಗಳು ₹3 ಲಕ್ಷ ವಿದ್ಯುತ್‌ ಬಿಲ್‌ ಸಂದಾಯವಾಗುತ್ತಿದೆ. ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ವೆಂಕಟೇಶ ಅವರು ಆಗ್ರಹಿಸಿದರು.‘ಪಟ್ಟಣದ ಕೆಲವು ಬೀದಿಗಳಲ್ಲಿ ಬೆಳಿಗ್ಗೆ ಸೂರ್ಯ ಹುಟ್ಟಿ ನೆತ್ತಿ ಮೇಲೆ ಬಂದರೂ ಬೀದಿ ದೀಪಗಳು ಆರಿರುವುದಿಲ್ಲ. ಇನ್ನು ಕೆಲವು ಬೀದಿಗಳಲ್ಲಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿಯೂ ಉರಿಯುತ್ತಿರುತ್ತವೆ. ಅಲ್ಲದೇ, ಸಂಜೆ ಕತ್ತಾಲಾಗುವ ಒಂದು ಗಂಟೆಗೂ ಮೊದಲೇ ಎಲ್ಲ ಬೀದಿ ದೀಪಗಳನ್ನು ಹಚ್ಚಲಾಗುತ್ತಿದೆ’ ಎಂದು ಅವರು ದೂರಿದರು.

‘ಕದರಮಂಡಲಗಿ ರಸ್ತೆಯಿಂದ ಬೆಟ್ಟದ ಮಲ್ಲೇಶ್ವರ ಗುಡ್ಡದವರೆಗೆ ಬೀದಿ ದೀಪಗಳಿಲ್ಲ. ರಸ್ತೆ ಬದಿಯಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಅಲ್ಲದೇ, ವಿಷ ಜಂತುಗಳು ಕೂಡಾ ಅಲ್ಲಿ ಹೆಚ್ಚಾಗಿದ್ದು, ಅಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಕೂಡಾ ಪುರಸಭೆ ಅಧಿಕಾರಿಗಳು ಈ ವರೆಗೂ ಸ್ಪಂದಿಸಿಲ್ಲ’ ಎಂದು ಬಸವೇಶ್ವರ ನಗರ ನಿವಾಸಿ ಸಿದ್ದು ಪಾಟೀಲ ಆರೋಪಿಸಿದರು.‘ಬೀದಿ ದೀಪಗಳ ನಿರ್ವಹಣೆಯಲ್ಲಿ ಬ್ಯಾಡಗಿ ಪುರಸಭೆ ಎಡವಿದೆ. ಬೆಳಿಗ್ಗೆ ಹತ್ತು ಗಂಟೆಯಾದರೂ ಬೀದಿ ದೀಪಗಳು ಉರಿಯುತ್ತಿದ್ದು ನಿಯಂತ್ರಣ ಇಲ್ಲದಂತಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಹೆದ್ದಾರಿ ದೀಪಗಳ ಹೊಣೆ ನಮ್ಮದಲ್ಲ: ‘ಪಟ್ಟಣದ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇದ್ರಗಡ ರಾಜ್ಯ ಹೆದ್ದಾರಿಯಲ್ಲಿ (ಪುರಸಭೆ ಎದುರಿನ ರಸ್ತೆ) ಲೋಕೋಪಯೋಗಿ ಇಲಾಖೆಯು ಬೀದಿ ದೀಪಗಳನ್ನು ಅಳವಡಿಸಿದೆ. ಒಂದು ವರ್ಷದವರೆಗೂ ಅವರೇ ಅವುಗಳ ನಿರ್ವಹಣೆ ಮಾಡಬೇಕು. ಅಲ್ಲದೇ, ಅವರ ಸಿಬ್ಬಂದಿಯೇ ಬೀದಿ ದೀಪಗಳನ್ನು ಹಚ್ಚುವ ಆರಿಸುವ ಕೆಲಸವನ್ನು ಮಾಡಬೇಕು’ ಎಂದು ಪುರಸಭೆಯ ಕಿರಿಯ ಎಂಜನಿಯರ್‌ ನಿರ್ಮಲಾ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.‘ಹೆದ್ದಾರಿ ಬೀದಿ ದೀಪಗಳಿಗೂ ಪುರಸಭೆಗೂ ಯಾವುದೇ ಸಂಬಂಧವಿಲ್ಲ. ಆದರೂ, ನಮ್ಮ ಗುತ್ತಿಗೆದಾರರೇ ಅವುಗಳ ನಿರ್ವಹಣೆ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಪ್ರಮೀಳಾ ಹುನಗುಂದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.