ಆಧಾರ್‌ ಕಾರ್ಡ್‌ಗಾಗಿ ನಿತ್ಯ ಜಾಗರಣೆ

7
ಜಿಲ್ಲಾಡಳಿತ, ಬ್ಯಾಂಕ್‌, ನಾಡ ಕಚೇರಿ ಎದುರು ತಪ್ಪದ ಸಾರ್ವಜನಿಕರ ಪರದಾಟ

ಆಧಾರ್‌ ಕಾರ್ಡ್‌ಗಾಗಿ ನಿತ್ಯ ಜಾಗರಣೆ

Published:
Updated:

ಹಾವೇರಿ: ಜಿಲ್ಲೆಯ ಬಹುತೇಕ ನಾಡ ಕಚೇರಿ, ಬ್ಯಾಂಕ್‌, ಅಂಚೆ ಕಚೇರಿಗಳಲ್ಲಿ ಸಮರ್ಪಕವಾಗಿ ಆಧಾರ್‌ ಕಾರ್ಡ್ ಸಿಗದ ಕಾರಣ, ಸಾರ್ವಜನಿಕರು ಆಧಾರ್ ಕಾರ್ಡ್ ನೀಡುವ ಕೆಲವೇ ಕೇಂದ್ರಗಳಲ್ಲಿ ರಾತ್ರಿಯಿಂದಲೇ ಸರದಿ ನಿಲ್ಲುವ ಮೂಲಕ, ಜಾಗರಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತ್ರವಲ್ಲದೆ ಖಾಸಗಿ ಕಚೇರಿಗಳು, ಯೋಜನೆಗಳಿಗೆ, ಬ್ಯಾಂಕ್‌ ವ್ಯವಹಾರಗಳಿಗೆ, ಶಾಲಾ–ಕಾಲೇಜುಗಳ ದಾಖಲಾತಿಗಳು, ಸಂಘ–ಸಂಸ್ಥೆಗಳ ವ್ಯವಹಾರಕ್ಕೂ ಆಧಾರ್‌ ಕಡ್ಡಾಯವಾಗಿದೆ.

ಮೂರು ತಿಂಗಳ ಹಿಂದೆ ಎಲ್ಲ ಖಾಸಗಿ ಏಜೆನ್ಸಿಗಳನ್ನು ರದ್ದುಪಡಿಸಲಾಗಿದೆ. ಈ ಮೊದಲು ಆನ್‌ಲೈನ್‌ ನೋಂದಣಿ ಇತ್ತು. ಈಗ ಜನರಿಗೆ ನೆರವಾಗುವ ಉದ್ದೇಶದಿಂದ ಆಫ್‌ಲೈನ್‌ನಲ್ಲಿ ಮಾಹಿತಿ ದಾಖಲಿಸಿಕೊಂಡು ಬಳಿಕ, ಆನ್‌ಲೈನ್‌ ಮಾಡಲಾಗುತ್ತಿದೆ. ‘ಹಳೇ ಆಧಾರ್‌ ಕಾರ್ಡ್‌ಗಳಲ್ಲಿ ಮೊಬೈಲ್‌ ಹಾಗೂ ಪಿನ್‌ ಸಂಖ್ಯೆ ಸೇರ್ಪಡೆಗೊಂಡಿರಲಿಲ್ಲ. ಅದನ್ನು ಸೇರಿಸಲು ಜನ ರಾತ್ರಿಯಿಡೀ ಜಾಗರಣೆ ಮಾಡಬೇಕಾಗಿದೆ’ ಎಂದು ಸವಣೂರ ತಾಲ್ಲೂಕು ಕಳಸೂರ ಗ್ರಾಮದ ಎಸ್‌.ಆರ್‌. ಅಂಗಡಿ ತಿಳಿಸಿದರು.

‘ನನ್ನ ಹೆಂಡತಿಗೆ ಹೊಸ ಆಧಾರ್‌ ಕಾರ್ಡ್‌ ಮಾಡಿಸಲು ನಮ್ಮ ಹೋಬಳಿ ಕೇಂದ್ರವಾದ ಹತ್ತಿಮತ್ತೂರ ನಾಡ ಕಚೇರಿಗೆ ಎರಡ್ಮೂರು ದಿನ ಎಡತಾಕಿದೆ. ಆದರೂ, ಹೊಸ ಕಾರ್ಡ್ ಮಾಡಿಸಲು ಸಾಧ್ಯವಾಗಲಿಲ್ಲ. ಕಳೆದ ಎರಡು ಮೂರು ದಿನ ಮಧ್ಯರಾತ್ರಿ 2 ಗಂಟೆಗೆ ಬಂದು ಜಿಲ್ಲಾಡಳಿತದ ಎದುರು ಸರದಿಯಲ್ಲಿ ನಿಂತರೂ ಹೊಸ ಕಾರ್ಡ್ ಮಾಡಿಸಲು ಸಾಧ್ಯವಾಗಲ್ಲಿಲ್ಲ’ ಎಂದು ಅಳಲು ತೋಡಿಕೊಂಡರು.‘ಒಂದು ಆಧಾರ್‌ ಕಿಟ್‌ ಮೂಲಕ ದಿನಕ್ಕೆ ಸುಮಾರು 60 ಜನರ ಆಧಾರ್ ಕಾರ್ಡ್‌ ನೋಂದಣಿ ಮಾಡಬಹುದು. ಆದರೆ ಕೆಲವು ಬ್ಯಾಂಕಿನವರು ಕೇವಲ 20 ಟೋಕನ್‌ ನೀಡುತ್ತಿದ್ದಾರೆ. ಹೀಗಾಗಿ, ನಾವು ಎಷ್ಟೇ ರಾತ್ರಿ ಹೋದರೂ ಟೋಕನ್‌ ಸಿಗುತ್ತಿಲ್ಲ’ ಎಂದರು.

ಶಾಲಾ ಪ್ರವೇಶಕ್ಕೂ ತೊಂದರೆ:

‘ಮಕ್ಕಳನ್ನು ಶಾಲೆಗೆ ಸೇರಿಸಲು ಈಗ ಎಲ್ಲಾ ಕಡೆ ಆಧಾರ್ ಕಾರ್ಡ್ ಕೇಳುತ್ತಿದ್ದಾರೆ. ಸ್ವಲ್ಪ ದಿನದ ಬಳಿಕ ಮಾಡಿಸಿಕೊಂಡು ಬಂದು ಕೊಡುತ್ತೇವೆ ಎಂದರೂ ಶಾಲೆಯವರು ಕೇಳುತ್ತಿಲ್ಲ. ಹಾಗಾಗಿ, ಎಲ್ಲಾ ಕೆಲಸ ಬಿಟ್ಟು ಆಧಾರ್‌ ಕಾರ್ಡ್‌ಗಾಗಿ ಮೂರ್ನಾಲ್ಕು ದಿನದಿಂದ ಅಲೆಯುತ್ತಿದ್ದೇನೆ. ಆದರೆ, ಇನ್ನೂ ಮಾಡಿಸಲು ಆಗಿಲ್ಲ’ ಎಂದು ನಗರದ ವೀರೇಶ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯ ಸದ್ಯದ ಅಂದಾಜು ಜನಸಂಖ್ಯೆಯು 16,90,897. ಈ ಪೈಕಿ 16,77,713 ಜನರ ಆಧಾರ್‌ ಕಾರ್ಡ್‌ ಮಾಡಿಸಿಕೋಂಡಿದ್ದು, ಇನ್ನೂ 13,184 ಮಂದಿಗೆ ಹೊಸ ಆಧಾರ್‌ ಕಾರ್ಡ್‌ ಆಗಬೇಕಾಗಿದೆ. 2011ರಲ್ಲಿ ಖಾಸಗಿ ಏಜೆನ್ಸಿಗಳು ಆಧಾರ್‌ ನೋಂದಣಿ ಮಾಡಿಸಿದಾಗ, ವಿಪರೀತ ತಪ್ಪುಗಳಾದ ಪರಿಣಾಮ ಸಮಸ್ಯೆ ಉಂಟಾಗಿದೆ’ ಎಂದು ಜಿಲ್ಲಾ ಆಧಾರ್‌ ಸಂಯೋಜಕ ವೀರೇಶ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.‘ತಪ್ಪುಗಳ ತಿದ್ದುಪಡಿ, ಬದಲಾವಣೆ ಹಾಗೂ ಕಾರ್ಡ್ ಜನರೇಟ್ ಆಗದಿರುವ ಸಮಸ್ಯೆಗಳನ್ನು ಈಗ ನಾವು ಬಗೆಹರಿಸಬೇಕಾಗಿದೆ. ಖಾಸಗಿ ಏಜೆನ್ಸಿಗಳು ಮಾಡಿದ ತಪ್ಪುಗಳಿಂದ ಜನತೆ ಈಗ ಸಮಸ್ಯೆ ಎದುರಿಸುವಂತಾಗಿದೆ’ ಎಂದು ಅವರು ಹೇಳಿದರು.

‘ಸಿಬ್ಬಂದಿ ಕೊರತೆ; ಕೆಲವೆಡೆ ಸೇವೆ ಸ್ಥಗಿತ’

‘ಜಿಲ್ಲೆಯಲ್ಲಿ 13 ಬ್ಯಾಂಕ್‌, 19 ನಾಡಕಚೇರಿ, 2 ಅಂಚೆ ಕಚೇರಿ, 1 ಸೇವಾಕೇಂದ್ರ ಹಾಗೂ 1 ಜಿಲ್ಲಾಡಳಿತ ಭವನದಲ್ಲಿ ಸೇರಿದಂತೆ ಒಟ್ಟು 36 ಆಧಾರ್‌ ಸೇವಾ ಕೇಂದ್ರಗಳು ಇವೆ. ಆದರೆ, ಕೆಲವು ಬ್ಯಾಂಕ್‌ಗಳಲ್ಲಿ ಸಿಬ್ಬಂದಿ ಕೊರತೆಯಿಂದ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ’ ಎಂದು ಜಿಲ್ಲಾ ಆಧಾರ್‌ ಸಂಯೋಜಕ ವೀರೇಶ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

**

ಖಾಸಗಿ ಏಜೆನ್ಸಿಗಳಲ್ಲಿ ಈಗಾಗಲೇ ಕಾರ್ಡ್ ಮಾಡಿಸಿಕೊಂಡವರ ವೈಯಕ್ತಿಕ ವಿವರಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವುದೇ ದೊಡ್ಡ ಸಾಹಸವಾಗಿದೆ

ವೀರೇಶ ಬಿ, ಜಿಲ್ಲಾ ಸಂಯೋಜಕ, ಆಧಾರ್‌

**

– ಪ್ರವೀಣ ಸಿ. ಪೂಜಾರ

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry