ಬುಧವಾರ, ಆಗಸ್ಟ್ 5, 2020
21 °C
ಅನಿಲ ಸೋರಿಕೆಯಾಗಿ ಅಗ್ನಿ ದುರಂತ l ಮಕ್ಕಳ ಸ್ಥಿತಿ ಚಿಂತಾಜನಕ

ಮೂರು ಮಕ್ಕಳು ಸೇರಿ 9 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರು ಮಕ್ಕಳು ಸೇರಿ 9 ಮಂದಿಗೆ ಗಾಯ

ಬೆಂಗಳೂರು: ಟಿ.ದಾಸರಹಳ್ಳಿಯ ಕಲ್ಯಾಣನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಅಗ್ನಿ ದುರಂತ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಪಾವಗಡ ತಾಲ್ಲೂಕಿನ ದೇವರಾಜು ಹಾಗೂ ಲಕ್ಷ್ಮಮ್ಮ ದಂಪತಿ, ಇಬ್ಬರು ಮಕ್ಕಳೊಂದಿಗೆ ಎರಡು ವರ್ಷಗಳಿಂದ ಕಲ್ಯಾಣನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಬುಧವಾರ ಅವರ ಸಂಬಂಧಿಕರೂ ಮನೆಗೆ ಬಂದಿದ್ದರು.

ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ದೇವರಾಜು, ಬುಧವಾರ ರಾತ್ರಿಪಾಳಿ ಕೆಲಸಕ್ಕೆ ತೆರಳಿದ್ದರು. ಸಂಬಂಧಿಕರಿಗಾಗಿ ವಿಶೇಷ ಅಡುಗೆ ಸಿದ್ಧಪಡಿಸಿದ್ದ ಲಕ್ಷ್ಮಮ್ಮ, ಸಿಲಿಂಡರ್‌ನ ರೆಗ್ಯುಲೇಟರ್‌ ಬಂದ್‌ ಮಾಡುವುದನ್ನು ಮರೆತಿದ್ದರು. ಎಲ್ಲರೂ ಊಟ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ನಿದ್ರೆಗೆ ಜಾರಿದ್ದರು.

ರಾತ್ರಿಪೂರ್ತಿ ಸೋರಿಕೆಯಾದ ಅನಿಲ, ಇಡೀ ಮನೆಯನ್ನು ಆವರಿಸಿತ್ತು. ದೇವರಾಜು ಕೆಲಸ ಮುಗಿಸಿಕೊಂಡು ಬೆಳಗಿನ ಜಾವ 4.30ರ ಸುಮಾರಿಗೆ ಮನೆಗೆ ಮರಳಿದ್ದಾರೆ. ಅವರು ಬಾಗಿಲು ಬಡಿದಾಗ ಎಚ್ಚರಗೊಂಡ ಲಕ್ಷ್ಮಮ್ಮ, ವಿದ್ಯುತ್ ದ್ವೀಪದ ಸ್ವಿಚ್‌ ಒತ್ತುತ್ತಿದ್ದಂತೆಯೇ ಬೆಂಕಿ ಹೊತ್ತಿ ಅದರ ಕೆನ್ನಾಲಗೆ ಇಡೀ ಮನೆಯನ್ನೇ ಆವರಿಸಿದೆ.

ಈ ವೇಳೆ ಹೊರಗೇ ನಿಂತಿದ್ದ ದೇವರಾಜು, ಪತ್ನಿಯ ಚೀರಾಟ ಕೇಳಿ ಗಾಬರಿಗೊಂಡಿದ್ದಾರೆ. ಏನಾಯಿತೆಂದು ನೋಡಲು ಕಿಟಕಿ ಬಾಗಿಲು ತೆಗೆಯುತ್ತಿದ್ದಂತೆ ದಟ್ಟ ಹೊಗೆ ಹೊರಬಂದಿದೆ. ಸ್ಥಳೀಯರ ನೆರವಿನಿಂದ ಬಾಗಿಲು ಮುರಿದು ಒಳ ನುಗ್ಗಿದ ಅವರು, ಎಲ್ಲ ಗಾಯಾಳುಗಳನ್ನು ಹೊರಗೆ ತಂದಿದ್ದಾರೆ. ಆಟೊಗಳಲ್ಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ವೈದ್ಯರ ಸಲಹೆಯಂತೆ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಗಾಯಗೊಂಡವರು: ಲಕ್ಷ್ಮಮ್ಮ (35), ಮಕ್ಕಳಾದ ನಿರಂಜನ್ (10), ದೇವಿಕಾ (4), ದಂಪತಿಯ ಸಂಬಂಧಿಗಳಾದ ವೆಂಕಟೇಶ್ (38),  ಮಹೇಶ್ವರಿ (33), ಅಲವೇಲು (9) ಸೋಮಶೇಖರ್ (16),‌ ಸಂಗೀತಾ (16) ಹಾಗೂ ಹೊನ್ನೂರಪ್ಪ (70) ಗಾಯಗೊಂಡವರು.

‘ದೇವಿಕಾ ದೇಹ ಶೇ 76ರಷ್ಟು ಸುಟ್ಟಿದ್ದರೆ, ಅಲವೇಲುಗೆ ಶೇ 70ರಷ್ಟು ಹಾಗೂ ಮಹೇಶ್ವರಿ ಅವರಿಗೆ ಶೇ 56ರಷ್ಟು ಸುಟ್ಟ ಗಾಯಗಳಾಗಿವೆ. ಈ ಮೂವರ ಸ್ಥಿತಿ ಗಂಭೀರವಾಗಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಕೆ.ಟಿ.ರಮೇಶ್ 'ಪ್ರಜಾವಾಣಿ'ಗೆ ತಿಳಿಸಿದರು.

‘ಹೊನ್ನೂರಪ್ಪ (ಶೇ 19) ಹೊರತುಪಡಿಸಿ, ಉಳಿದೆಲ್ಲರಿಗೂ ಶೇ 30 ರಿಂದ 40ರಷ್ಟು ಸುಟ್ಟ ಗಾಯಗಳಾಗಿವೆ. ಮನೆಯೊಳಗೆ ಸ್ಫೋಟ ಸಂಭವಿಸಿದ್ದರಿಂದ ಉಸಿರಾಟದ ತೊಂದರೆ ಉಂಟಾಗಿ ಬಿಸಿ ಗಾಳಿ ದೇಹ ಸೇರಿರುತ್ತದೆ. ಇದರಿಂದಾಗಿ ದೇಹದ ಒಳಗಿನ ಅಂಗಾಂಗಗಳೂ ಹಾನಿಗೊಳಗಾಗಿರುವ ಸಾಧ್ಯತೆ ಇರುತ್ತದೆ’ ಎಂದು ವಿವರಿಸಿದರು.

**

ಇನ್ನೊಂದು ಅವಘಡ; 6 ಮಂದಿಗೆ ಗಾಯ

ಹಳೆ ಗುಡ್ಡದಹಳ್ಳಿ ಬಳಿಯ ಅರ್ಫತ್ ನಗರದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಗುರುವಾರ ಬೆಂಕಿ ಹೊತ್ತಿಕೊಂಡು ಆರು ಮಂದಿ ಗಾಯಗೊಂಡಿದ್ದಾರೆ.

ನಸೀರ್, ರಿಯಾಜ್‌, ಮುಸ್ತಫಾ, ರಾಹೇಜ್, ಅಪ್ಸರ್‌ ಹಾಗೂ ಕೋಮಲ್ ಗಾಯಗೊಂಡವರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಜೆ.ಜೆ.ನಗರ ಠಾಣೆ ಪೊಲೀಸರು ತಿಳಿಸಿದರು.

ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿ ಇವರೆಲ್ಲ ವಾಸವಿದ್ದರು. ಅಲ್ಲಿಯೇ ಬೆಂಕಿ ಹೊತ್ತಿಕೊಂಡಿತ್ತು. ರಕ್ಷಣೆಗಾಗಿ ಕೂಗಾಡುತ್ತಿದ್ದ ಅವರನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರು ಎಂದರು.

**

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿತ್ತು

‘ಸೋಮಶೇಖರ್ ಹಾಗೂ ಸಂಗೀತಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದು, ಶುಕ್ರವಾರ ಅವರು ಸಮಾಜ ವಿಜ್ಞಾನ ಪರೀಕ್ಷೆ ಬರೆಯಬೇಕಿತ್ತು. ಇಬ್ಬರೂ ಪರೀಕ್ಷೆಗೆ ಹೋಗುವುದು ಬೇಡ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ, ಅವರನ್ನು ಪರೀಕ್ಷೆಗೆ ಕಳುಹಿಸುತ್ತಿಲ್ಲ’ ಎಂದು ಸಂಬಂಧಿ ಕುಸುಮಾ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.