3
ಬಿಜೆಪಿಗೂ ಭರವಸೆ ಮೂಡಿಸಿದ್ದ ಕ್ಷೇತ್ರ; ಸಜ್ಜನ, ಸರಳ ರಾಜಕಾರಣಿಗಳನ್ನು ಸೃಷ್ಟಿಸಿದ ತಾಲ್ಲೂಕು

ಕೆ.ಆರ್‌.ಪೇಟೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ನ ಜುಗಲ್‌ಬಂದಿ!

Published:
Updated:

ಮಂಡ್ಯ: ಸರಳ, ಸಜ್ಜನ ರಾಜಕಾರಣಿಗಳನ್ನು ರಾಜ್ಯಕ್ಕೆ ಕೊಟ್ಟ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದ ಮತದಾರರು ಹಲವು ಚುನಾವಣೆಗಳಲ್ಲಿ ಪ್ರಬುದ್ಧತೆ ಮೆರೆದಿದ್ದಾರೆ. ಈಚೆಗೆ ಹಣ ಬಲ, ತೋಳ್ಬಲ, ಜಾತಿ ಬಲ ಸದ್ದು ಇದ್ದರೂ ಜಿಲ್ಲೆಯ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಕೆ.ಆರ್‌.ಪೇಟೆ ತಾಲ್ಲೂಕಿನ ಜನರು ಅಭ್ಯರ್ಥಿಯ ಪ್ರಾಮಾಣಿಕತೆಯನ್ನು ಓರೆಗೆ ಹಚ್ಚಿ ನೋಡುತ್ತಾರೆ.

‘ರಾಜಕಾರಣದ ಮೇಸ್ಟ್ರು’ ಎಂದೇ ಕರೆಸಿಕೊಳ್ಳುವ ಕೆ.ಆರ್‌.ಪೇಟೆ ಕೃಷ್ಣ ಮೂರು ಬಾರಿ ಶಾಸಕರಾಗಿ, ಸಂಸದರಾಗಿ, ಸ್ಪೀಕರ್‌ ಆಗಿ ಕೆಲಸ ಮಾಡಿದ್ದಾರೆ. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ತವರೂರು ಕೆ.ಆರ್‌.ಪೇಟೆ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಸ್‌.ಎಂ.ಲಿಂಗಪ್ಪ ಅವರು ಮೂರು ಬಾರಿ ಶಾಸಕರಾಗಿದ್ದಾರೆ. ಕೆ.ಆರ್‌.ಪೇಟೆಯಲ್ಲಿ ಗ್ರಾಮಭಾರತಿ ವಿದ್ಯಾಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ತಂಗಾಳಿ ಬೀಸುವಂತೆ ಮಾಡಿದವರು ಇದೇ ಲಿಂಗಪ್ಪ. ಈಗಲೂ ಗ್ರಾಮಭಾರತಿ ಆ ಭಾಗದ ನೆಚ್ಚಿನ ವಿದ್ಯಾಸಂಸ್ಥೆ. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಸರಳ ವ್ಯಕ್ತಿ ಎಂ.ಕೆ.ಬೊಮ್ಮೇಗೌಡ ಕೂಡ ಎರಡು ಬಾರಿ ಶಾಸಕರಾಗಿದ್ದಾರೆ. ಎಂ.ಪುಟ್ಟಸ್ವಾಮಿಗೌಡರೂ ಎರಡು ಬಾರಿ ಶಾಸಕರಾಗಿದ್ದಾರೆ.

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ 14 ಮಹಾ ಚುನಾವಣೆ, ಒಂದು ಉಪ ಚುನಾವಣೆ ನಡೆದಿದೆ. ಅದರಲ್ಲಿ ಎಂ.ಎಸ್‌.ಲಿಂಗಪ್ಪ, ಕೃಷ್ಣ ಹ್ಯಾಟ್ರಿಕ್‌ ಸಾಧನೆ ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಹ್ಯಾಟ್ರಿಕ್‌ ಸಾಧನೆಯ ಕನಸಿನಲ್ಲಿದ್ದಾರೆ. ಕೆ.ಆರ್‌.ಪೇಟೆ ಜನರು ವ್ಯಕ್ತಿಗೆ ಮನ್ನಣೆ ಕೊಡುತ್ತಾರೆ ಎಂಬುದಕ್ಕೆ ಇಲ್ಲಿ ಮೂರು ಬಾರಿ ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿರುವುದೇ ಸಾಕ್ಷಿ. 1962 ಎನ್‌.ನಂಜೇಗೌಡ, 1967ರಲ್ಲಿ ಎಂ.ಕೆ.ಬೊಮ್ಮೇಗೌಡ, 1996ರಲ್ಲಿ ಬಿ.ಪ್ರಕಾಶ್‌ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

ಒಟ್ಟು ಏಳು ಬಾರಿ ಕಾಂಗ್ರೆಸ್‌, ಮೂರು ಬಾರಿ ಪಕ್ಷೇತರರು, ಒಮ್ಮೆ ಜನತಾ ಪಕ್ಷ, ಒಮ್ಮೆ ಜನತಾ ದಳ, ಒಂದು ಬಾರಿ ಜನತಾ ಪರಿವಾರ, ಎರಡು ಬಾರಿ ಜೆಡಿಎಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಮತ್ತು ಜನತಾ ಪಕ್ಷ, ದಳ, ಪರಿವಾರ, ಜೆಡಿಎಸ್‌ ಅಭ್ಯರ್ಥಿಗಳೇ ಇಲ್ಲಿ ವಿಜಯಮಾಲೆ ಧರಿಸಿದ್ದಾರೆ. ಈಗಲೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ನಡುವೆ ನೇರ ಸಮರ ನಡೆಯುತ್ತಾ ಬಂದಿದೆ. ಒಂದು ರೀತಿಯ ಕಾಂಗ್ರೆಸ್‌–ಜೆಡಿಎಸ್‌ ನಡುವೆ ಜುಗಲ್‌ಬಂದಿ ನಡೆದಿದೆ. ಮುತ್ಸದ್ಧಿ ರಾಜಕಾರಣಕ್ಕೆ ಹೆಸರಾಗಿದ್ದ ಕೆ.ಆರ್‌.ಪೇಟೆ ಕ್ಷೇತ್ರ ಈಚೆಗೆ ಬದಲಾವಣೆಗೆ ಒಳಗಾಯಿತು. ಆದರೆ ಜಿಲ್ಲೆಯ ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ಕ್ಷೇತ್ರದ ಜನರು ‘ಸಂಪೂರ್ಣ ರಾಜಕಾರಣ’ದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರಲ್ಲ.

‘ಕೆ.ಆರ್‌.ಪೇಟೆ ತಾಲ್ಲೂಕಿನ ಜನರು ರಾಜಕಾರಣವನ್ನೇ ಹೊದ್ದು ಮಲಗಿದವರಲ್ಲ. ಇಲ್ಲಿಯ ಜನರು ನೀರಾವರಿ ಸೇರಿ ಮೂಲಸೌಲಭ್ಯಗಳ ಕೊರತೆಗಳ ನಡುವೆ ಬದುಕಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಮುಂಬೈ, ಬೆಂಗಳೂರಿನಂತಹ ನಗರಗಳಲ್ಲಿ ದುಡಿಯುತ್ತಿದ್ದಾರೆ. ಚುನಾವಣೆ ಬಂದಾಗ ಒಂದು ವೋಟು ಹಾಕಿ ಹೋಗುತ್ತಾರೆ. ಅಷ್ಟು ಬಿಟ್ಟರೆ ಜನರು ರಾಜಕಾರಣದತ್ತ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ರೈತಸಂಘದ ಮುಖಂಡ ಜಯರಾಂ ಹೇಳಿದರು.

ಬಿಜೆಪಿಗೆ ಭರವಸೆ ನೀಡಿದ್ದ ಕ್ಷೇತ್ರ: ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ತಾಲ್ಲೂಕು ಪಂಚಾಯಿತಿ ಸ್ಥಾನವನ್ನೂ ಗೆಲ್ಲಲೂ ಶಕ್ತವಾಗಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಆದರೆ ಬಿ.ಪ್ರಕಾಶ್‌ ಅವರು ಬಿಜೆಪಿಯಲ್ಲಿ ಇದ್ದಾಗ ಮೂರು ತಾಲ್ಲೂಕು ಪಂಚಾಯಿತಿ ಬಿಜೆಪಿ ಗೆದ್ದಿದೆ. ಹಿರೀಕಳಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪ್ರಕಾಶ್‌ ಪತ್ನಿ ಹೇಮಾ ಗೆಲುವು ಸಾಧಿಸಿದ್ದರು. ಇದು ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಗೆದಿರುವ ಏಕೈಕ ಜಿಲ್ಲಾ ಪಂಚಾಯಿತಿ ಕ್ಷೇತ್ರ. 1994ರ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ನಾಯಕ ಕೆ.ಎನ್‌.ಕೆಂಗೇಗೌಡ ಅವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು.ಈ ಚುನಾವಣೆಯಲ್ಲಿ ಕೆಂಗೇಗೌಡರು ಕೃಷ್ಣ ಅವರಿಗೆ ಪ್ರಬಲ ಪೈಪೋಟಿ ಕೊಟ್ಟಿದ್ದರು. 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಪ್ರಕಾಶ್‌ 27 ಸಾವಿರ ಮತ ಗಳಿಸಿದ್ದರು. ನಂತರ ಕ್ಷೇತ್ರದಲ್ಲಿ ಬಿಜೆಪಿ ಅಲೆ ನಿಲ್ಲಲಿಲ್ಲ. ಆದರೂ ಜಿಲ್ಲೆಯಲ್ಲಿ ಕೆ.ಆರ್‌.ಪೇಟೆ ಕ್ಷೇತ್ರ ಮಾತ್ರ ಬಿಜೆಪಿಗೆ ಭರವಸೆ ಮೂಡಿಸಿತ್ತು.

ಈಗಿನ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎದುರಾಳಿ ಯಾಗಿವೆ. ಕಾಂಗ್ರೆಸ್‌ನಿಂದ ಕೆ.ಬಿ.ಚಂದ್ರಶೇಖರ್‌ ಅಂತಿಮವಾಗಿದ್ದು ಇನ್ನೂ ಹೆಸರು ಪ್ರಕಟವಾಗಿಲ್ಲ. ಆದರೆ ಜೆಡಿಎಸ್‌ನಿಂದ ಕೆ.ಸಿ.ನಾರಾಯಣಗೌಡರ ಹೆಸರು ಪ್ರಕಟವಾಗಿದ್ದರೂ ಅಂತಿಮವಾಗಿಲ್ಲ. ಈಚೆಗೆ ನಡೆದ ಕುಮಾರ ಪರ್ವ ಕಾರ್ಯ ಕ್ರಮದಲ್ಲಿ ಎಚ್‌.ಡಿ.ಕುಮಾರಸ್ವಾಮಿ ನಾರಾಯಣಗೌಡರ ಹೆಸರು ಹೇಳದಿರುವುದು ಅಭ್ಯರ್ಥಿ ಯಾರು ಎಂಬ ಗೊಂದಲಕ್ಕೆ ಕಾರಣವಾಗಿದೆ. ಬಿ.ಪ್ರಕಾಶ್‌, ಬಿ.ಎಲ್‌.ದೇವರಾಜು, ಕೃಷ್ಣೇಗೌಡ, ಎಸ್‌.ಎಲ್‌.ರಮೇಶ್‌, ಬಿ.ಎನ್‌.ದಿನೇಶ್‌ ಆಕಾಂಕ್ಷಿಯಾಗಿದ್ದಾರೆ.

ಯಡಿಯೂರಪ್ಪ ಅವರನ್ನು ಕಾಡುವ ಕೊರಗು

ತವರು ಜಿಲ್ಲೆಯಲ್ಲಿ ಬಿಜೆಪಿಯ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಬಲುದೊಡ್ಡ ಕೊರಗು. ಮಂಡ್ಯ ಜಿಲ್ಲೆಗೆ ಭೇಟಿ ಕೊಟ್ಟಾಗಲೆಲ್ಲಾ ಅವರು ತಮ್ಮ ಮನದಾಳದಲ್ಲಿ ಕೊರೆಯುತ್ತಿರುವ ಕೊರಗನ್ನು ತಿಳಿಸಿ ಹೋಗುತ್ತಾರೆ. ಆದರೆ ಈ ಬಾರಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಜನರು ಊಹಿಸಲೂ ಅಸಾಧ್ಯವಾದಂತಹ ಅಭ್ಯರ್ಥಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವುದಾಗಿ ಯಡಿಯೂರಪ್ಪ ಅವರೇ ಈಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ನೀಡಿದ್ದ ಸಂದರ್ಭದಲ್ಲಿ ಘೋಷಣೆ ಮಾಡಿದ್ದಾರೆ. ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್‌ ಹಾಗೂ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್‌ ನಿರಂತವಾಗಿ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಪಕ್ಷದ ಮುಂದಿನ ನಡೆ ಕುತೂಹಲ ಹುಟ್ಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry