ಶನಿವಾರ, ಡಿಸೆಂಬರ್ 14, 2019
20 °C
ರಾಜಕೀಯ ಧ್ರುವೀಕರಣದ ಮೂಲಕ ವಿಜಯಪುರ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿದ ಬಿಜೆಪಿ

ಅಪ್ಪುಗೆ ತಿರುಗೇಟು ನೀಡಿದ ಯತ್ನಾಳ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಅಪ್ಪುಗೆ ತಿರುಗೇಟು ನೀಡಿದ ಯತ್ನಾಳ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರ ಮೂಲಕ, ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆಗೆ, ತೀವ್ರ ಪ್ರತಿರೋಧದ ಬಾಣ ಬಿಟ್ಟಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ತಂಡಕ್ಕೆ ತಿರುಗೇಟು ನೀಡಲು ಯತ್ನಾಳ ಹೂಡಿದ ಪ್ರತಿ ತಂತ್ರ ಯಶಸ್ವಿಯಾಗಿದೆ.

ಸೇರ್ಪಡೆಗೆ ಮುನ್ನ, ನಂತರವೂ ಪ್ರತಿರೋಧ ಹೆಚ್ಚುತ್ತಿರುವುದನ್ನು ಅರಿತ ಯತ್ನಾಳ, ರಾಜ್ಯ ಮಟ್ಟದಲ್ಲಿ ತನ್ನ ಇಮೇಜ್‌ ಕುಸಿಯದಂತೆ ಕಾಪಾಡಿಕೊಳ್ಳಲು, ತಕ್ಷಣವೇ ಪಾಲಿಕೆ ಅಂಗಳದಿಂದಲೇ ಅಪ್ಪು ತಂಡಕ್ಕೆ ಪ್ರತ್ಯಸ್ತ್ರ ಬಿಟ್ಟಿದ್ದಾರೆ.

ಪಾಲಿಕೆ ಮೇಯರ್‌ ಸಂಗೀತಾ ಪೋಳ (ಕಾಂಗ್ರೆಸ್‌), ಜೆಡಿಎಸ್‌ ಸದಸ್ಯರಾದ ಲಕ್ಷ್ಮೀ ಕನ್ನೊಳ್ಳಿ (ಮಾಜಿ ಉಪ ಮೇಯರ್‌), ಮಡಿವಾಳಪ್ಪ ಎಸ್‌.ಕರಡಿ, ಪ್ರೇಮಾನಂದ ಬಿರಾದಾರ (ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ ನಾನಾಗೌಡ ಬಿರಾದಾರ ಸಹೋದರ), ಮಂಜುಳಾ ಕೋಲಕಾರ, ವಿದ್ಯಾ ಕವಟಗಿ, ಎನ್‌ಸಿಪಿ ಸದಸ್ಯ ಸಂತೋಷ ಚವ್ಹಾಣ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಬಿ.ಎಸ್‌.ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ ಸಮ್ಮುಖ ಬಿಜೆಪಿಗೆ ಸೇರ್ಪಡೆಗೊಳಿಸುವ ಮೂಲಕ ತಮ್ಮ ಬಲ ಹೆಚ್ಚಿಸಿಕೊಂಡಿದ್ದಾರೆ.

ಪಾಲಿಕೆ ಅಂಗಳದಿಂದ ಅಪ್ಪು ಹೂಡಿದ್ದ ಅಸ್ತ್ರಕ್ಕೆ, ಬಸನಗೌಡ ಅದೇ ಅಖಾಡದಿಂದ ಪ್ರತ್ಯಸ್ತ್ರ ಬಿಟ್ಟ ಪರಿಣಾಮ ಅನಾಯಾಸವಾಗಿ ವಿಜಯಪುರ ಮಹಾನಗರ ಪಾಲಿಕೆ ಆಡಳಿತ, ಇತಿಹಾಸದಲ್ಲೇ ಮೊದಲ ಬಾರಿಗೆ ಕಮಲ ತೆಕ್ಕೆಗೆ ಜಾರಿದೆ.

ಪಾಲಿಕೆಯ ಮೊದಲ ಎರಡು ಅವಧಿಯ ಮೇಯರ್‌, ಉಪ ಮೇಯರ್‌ ಚುನಾವಣೆ ಸಂದರ್ಭ ಬಿಜೆಪಿ ಬೃಹತ್‌ ಪಕ್ಷವಾಗಿ ಹೊರಹೊಮ್ಮಿದ್ದರೂ; ಆಗ ಪಕ್ಷದೊಳಗೆ ಇದ್ದ ಬಸನಗೌಡ, ಅಪ್ಪು ಬಣದ ತಿಕ್ಕಾಟದಿಂದ ಒಮ್ಮೆಯೂ ಪಾಲಿಕೆ ಆಡಳಿತ ಕೇಸರಿ ಪಾಳೆಯಕ್ಕೆ ಲಭಿಸಿರಲಿಲ್ಲ. ಇದೀಗ ರಾಜಕೀಯ ಧ್ರುವೀಕರಣದಿಂದ ಅನಾಯಾಸವಾಗಿ ಒಲಿದು ಬಂದಿದೆ.

‘2015ರ ಡಿಸೆಂಬರ್‌ನಲ್ಲಿ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿಯಿಂದ ಉಚ್ಚಾಟನೆಗೊಂಡ ಬಳಿಕ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬೆನ್ನಿಗೆ ರಾಜ್ಯದ ಪ್ರಮುಖ ಮುಖಂಡರು, ಕೇಂದ್ರ ಸಚಿವರು ನಿಂತಿದ್ದಾರೆ.

ಯತ್ನಾಳ ಸೇರ್ಪಡೆಗೆ ಬಿಎಸ್‌ವೈ ಒಲವು ವ್ಯಕ್ತಪಡಿಸಿದ್ದರೂ, ಉಳಿದವರು ವಿರೋಧವಿದ್ದಾರೆ. ಅಪ್ಪು ಸಹ ಈ ಹಿಂದೆ ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ಇನ್ಮುಂದೆ ಯತ್ನಾಳ ಪ್ರತ್ಯಸ್ತ್ರಕ್ಕೆ ಯಾವ ಅಸ್ತ್ರ ಪ್ರಯೋಗಿಸಲಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ’ ಎನ್ನುತ್ತಾರೆ ಇಬ್ಬರನ್ನೂ ಹತ್ತಿರದಿಂದ ಬಲ್ಲ ಆಪ್ತರು.

‘ಬಸನಗೌಡ ಪಾಟೀಲ ಯತ್ನಾಳ ವಿಜಯಪುರಕ್ಕೆ ಮರಳುತ್ತಿದ್ದಂತೆ ಉಪ ಮೇಯರ್‌ ರಾಜೇಶ ದೇವಗಿರಿ ಜತೆ ಚರ್ಚೆ ನಡೆಸಿ, ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಇದೇ ಸಂದರ್ಭ ಕಾಂಗ್ರೆಸ್‌, ಜೆಡಿಎಸ್‌ನಲ್ಲಿರುವ ಕೆಲ ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳಲಿದ್ದಾರೆ. ವಿಜಯಪುರದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ’ ಎಂದು ರಾಘವ ಅಣ್ಣಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ಯಾಟಿಂಗ್‌ಗಾಗಿಯೇ ಸೇರ್ಪಡೆ..!

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕುರಿತಂತೆ ಪಕ್ಷದ ವರಿಷ್ಠರು ಚರ್ಚೆ ನಡೆಸುವ ಸಂದರ್ಭ, ತಮ್ಮ ಪರ ಬ್ಯಾಟಿಂಗ್‌ ನಡೆಸಲಿ ಎಂಬ ಏಕೈಕ ಕಾರಣಕ್ಕೆ, ಯತ್ನಾಳ ಮಹಾನಗರ ಪಾಲಿಕೆಯಲ್ಲಿ ತಮ್ಮ ಬೆಂಬಲಿಗರಾಗಿದ್ದ, ಜೆಡಿಎಸ್‌ ಸದಸ್ಯರನ್ನು ಗುರುವಾರ ಬೆಂಗಳೂರಿಗೆ ಕರೆಸಿಕೊಂಡು ಬಿಜೆಪಿಗೆ ಸೇರ್ಪಡೆ ಮಾಡಿಸಿದ್ದಾರೆ ಎನ್ನಲಾಗಿದೆ.

‘ಪಕ್ಷಕ್ಕೆ ಸೇರ್ಪಡೆಯಾದ ಮೇಯರ್‌ ಸಂಗೀತಾ ಪೋಳ ಸೇರಿದಂತೆ ಇನ್ನಿತರೆ ಸದಸ್ಯರು ಗುರುವಾರ ಸಂಜೆ ಯಲಹಂಕ ಬಳಿಯ ರೆಸಾರ್ಟ್‌ನಲ್ಲಿ ನಡೆದ ಟಿಕೆಟ್‌ ಅಪೇಕ್ಷಿತರ ಸಭೆಯಲ್ಲಿ ಭಾಗಿಯಾಗಿ, ಅಪ್ಪು ಪರ ಮೂಲ ಬಿಜೆಪಿ ಸದಸ್ಯರು ಬ್ಯಾಟಿಂಗ್‌ಗೆ ಇಳಿಯುತ್ತಿದ್ದಂತೆ; ಗೂಗ್ಲಿ ಪ್ರಯೋಗಿಸಲು ಮುಂದಾದರು. ಇದರಿಂದ ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣಗೊಂಡಿತು’ ಎಂದು ಮೂಲಗಳು ತಿಳಿಸಿವೆ.

ಮೂಲತಃ ಬಿಜೆಪಿ ಸದಸ್ಯೆಯಾಗಿದ್ದ ಸಂಗೀತಾ ಪೋಳ ಮೇಯರ್‌ ಹುದ್ದೆಗಾಗಿ ಮಹಾರಾಷ್ಟ್ರದ ಕಾಂಗ್ರೆಸ್‌ ಮುಖಂಡ ಸುಶೀಲ್‌ಕುಮಾರ್‌ ಶಿಂಧೆ ಮೂಲಕ ಎಂ.ಬಿ.ಪಾಟೀಲ ಬಳಿ ಲಾಬಿ ನಡೆಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಇದೀಗ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಡಾ.ಮಕ್ಬೂಲ್‌ ಬಾಗವಾನಗೆ ‘ಕೈ’ಕೊಟ್ಟು ಬಸನಗೌಡ ಮೂಲಕ ಬಿಜೆಪಿಗೆ ಮರಳಿದ್ದಾರೆ.

ಪ್ರತಿಕ್ರಿಯಿಸಿ (+)