ರಂಗಭೂಮಿ ಕಲಾವಿದರಿಗೆ ಸರ್ಕಾರದ ನೆರವು ಅಗತ್ಯ

7
ಶಾರದಾ ಕಲಾನಿಕೇತನ ವಾರ್ಷಿಕೋತ್ಸವ; ನಾಟಕಗಳ ದೃಶ್ಯಾವಳಿ ಪ್ರದರ್ಶನ, ರಂಗಗೀತೆ

ರಂಗಭೂಮಿ ಕಲಾವಿದರಿಗೆ ಸರ್ಕಾರದ ನೆರವು ಅಗತ್ಯ

Published:
Updated:

ಮಂಡ್ಯ: ‘ರಂಗಭೂಮಿ ಕಲಾವಿದರ ಆರ್ಥಿಕ ಸ್ಥಿತಿ ಶೋಚನೀಯವಾಗಿದ್ದು, ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕಲಾವಿದರಿಗೆ ನೆರವು ನೀಡಬೇಕು’ಎಂದು ಸಾಹಿತಿ ಎಂ.ವಿ.ಧರಣೇಂದ್ರಯ್ಯ ಹೇಳಿದರು.

ಶಾರದಾ ಕಲಾನಿಕೇತನ ವೃತ್ತಿ ನಾಟಕ ಸಂಘದ 21ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಗಾಂಧಿಭವನದಲ್ಲಿ ಶುಕ್ರವಾರ ನಡೆದ ಸಾಮಾಜಿಕ ನಾಟಕಗಳ ದೃಶ್ಯಾವಳಿ ಪ್ರದರ್ಶನ, ಏಕಪಾತ್ರಾಭಿನಯ, ರಂಗಗೀತೆ ಹಾಗೂ ಕಲಾವಿದರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

‘ಉತ್ತರ ಕರ್ನಾಟಕದಲ್ಲಿ ವೃತ್ತಿ ನಾಟಕ ಸಂಘಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿವೆ. ಆ ಭಾಗದಲ್ಲಿ ಪ್ರತಿಯೊಂದು ಗ್ರಾಮ, ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನಡೆಯುವ ಹಬ್ಬ ಜಾತ್ರೆಗಳಲ್ಲಿ ತಿಂಗಳವರೆಗೆ ನಿರಂತರವಾಗಿ ಪ್ರತಿನಿತ್ಯ ಎರಡರಿಂದ ಮೂರು ನಾಟಕ ಪ್ರದರ್ಶನ ನಡೆಯುತ್ತವೆ. ಜನರು ಕೂಡ ವೃತ್ತಿ ನಾಟಕಗಳತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದರಿಂದ ಕಲಾವಿದರು ಜೀವನ ಸಾಗಿಸಲು ಅನುಕೂಲವಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲು ವೃತ್ತಿ ನಾಟಕ ಕಂಪನಿಗಳು ಹೆಚ್ಚಾಗಿ ಇದ್ದವು. ರಂಗಭೂಮಿ ಕಲೆ ಗಂಡು ಕಲೆಯಾಗಿದೆ. ನವರಸಗಳ ಪ್ರದರ್ಶನ ತೋರುವ ಕಲಾವಿದರ ಹೊಟ್ಟೆ ತುಂಬಲಾರದ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ’ ಎಂದು ಹೇಳಿದರು.

‘ಹೆಚ್ಚು ಆದಾಯ ಬರುವಂತಹ ಟಿವಿ ಧಾರಾವಾಹಿ ಹಾಗೂ ಸಿನಿಮಾ ಕ್ಷೇತ್ರಕ್ಕೆ ಯುವಜನರು ಮಾರುಹೋಗುತ್ತಿದ್ದಾರೆ. 2,500 ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಉಗಮದ ಜೊತೆಗೆ ರಂಗಭೂಮಿ ಕಲೆಯೂ ಉಗಮವಾಗಿದೆ. ನಾಡಿನ ರಂಗಭೂಮಿ ಕಲೆಯನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಉಳಿಸಿ, ಬೆಳೆಸಬೇಕು. ಇಂಗ್ಲೆಂಡ್‌ನಲ್ಲಿ ಕಡಿಮೆ ಜನಸಂಖ್ಯೆ ಇದ್ದರೂ, 60ಕ್ಕೂ ಹೆಚ್ಚು ಸುಸಜ್ಜಿತ ರಂಗಮಂದಿರಗಳು ಇವೆ. ಈ ರೀತಿಯಲ್ಲಿ ಸರ್ಕಾರ ಹೋಬಳಿ ಮಟ್ಟದಲ್ಲಿ ರಂಗಮಂದಿರ ನಿರ್ಮಾಣ ಮಾಡಬೇಕು. ಆಸಕ್ತ ಯುವಜನರಿಗೆ ತರಬೇತಿ ನೀಡಿ ರಂಗಭೂಮಿ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು’ ಎಂದರು.

ಶಾರದಾ ಕಲಾನಿಕೇತನ ವೃತ್ತಿ ನಾಟಕ ಸಂಘದ ತಮ್ಮಣ್ಣ ಮಾತನಾಡಿ ‘ರಾಜ್ಯದಲ್ಲಿ ವೃತ್ತಿ ನಾಟಕ ಕಂಪನಿಗಳು ಅವನತಿ ಹೊಂದುತ್ತಿವೆ. ವೃತ್ತಿ ರಂಗಭೂಮಿ ಒಂದು ಕಾಲದಲ್ಲಿ ಉಚ್ಛಾಯ ಸ್ಥಿತಿಯಲ್ಲಿ ಇತ್ತು. ಆದರೆ ಇಂದು ಯುವಜನರು ರಂಗಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ. ನಾಟಕ ಕಲೆ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇಂದಿನ ಪೀಳಿಗೆಯ ಮಕ್ಕಳು ರಂಗಕಲೆಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಕೃಷಿಕ್ ಲಯನ್ಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ ‘ರಂಗಭೂಮಿ ಹಲವಾರು ಲಲಿತ ಕಲೆಗಳ ಸಂಗಮ ಕ್ಷೇತ್ರ. ಯಾವುದೇ ಒಂದು ನಾಡಿನ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜನರನ್ನು ಏಕ ಕಾಲಕ್ಕೆ ರಂಜಿಸುವ ವಿಶೇಷತೆ ಹೊಂದಿರುವ ರಂಗಭೂಮಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಮನೋರಂಜನೆಯ ಜೊತೆಗೆ ಮಾನವನ ಓರೆ-ಕೋರೆ ತಿದ್ದಿ ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ಪರಿಣಾಮಕಾರಿ ಮಾಧ್ಯಮವಾಗಿದೆ. ಜನತೆಗೆ ನೈತಿಕ ಸಂಸ್ಕಾರ ನೀಡಿ ಉನ್ನತ ಮೌಲ್ಯಗಳತ್ತ ಕೈ ಹಿಡಿದು ನಡೆಸುತ್ತಿದೆ’ಎಂದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಸಂಘಟನೆ ಅಧ್ಯಕ್ಷ ಕೆ.ಪ್ರಹ್ಲಾದ್‌ರಾವ್ ಹಾಗೂ ಕಲಾವಿದೆ ರಮಾಬಾಯಿ ಅವರನ್ನು ಸನ್ಮಾನಿಸಲಾಯಿತು. ಗಿರಿಯಪ್ಪ, ಜ್ಯೋತಿ, ರಾಮಕ್ಕ, ಪುಷ್ಪ, ಸರಸ್ವತಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry