6

ಊರಿನ ಬೆರಗಿನ ನೋಟ

Published:
Updated:
ಊರಿನ ಬೆರಗಿನ ನೋಟ

ನಾಗರಿಕತೆಯ ಉತ್ತುಂಗದಲ್ಲಿರುವ ಮನುಷ್ಯನಿಗೆ ಅಲೆಮಾರಿತನ ಇನ್ನೂ ತಪ್ಪಿಲ್ಲ. ನಗರೀಕರಣದ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯಿಂದ ವಿಮುಖವಾದರೂ ಸಂಕಷ್ಟದ ಘಳಿಗೆಗಳಲ್ಲಿ ಹುಟ್ಟೂರಿನ ಸ್ಮೃತಿ ನೀಡುವ ಸುಖ ಅನನ್ಯ. ಅಂಥ ಸ್ಮೃತಿಯ ಚುಂಗು ಹಿಡಿದುಕೊಂಡೇ ಡಾ.ವೆಂಕಟೇಶ ಇಂದ್ವಾಡಿ ‘ಊರೆಂಬುದು ಊರಾಗುತ್ತಿದ್ದ ಪರಿ’ ಎನ್ನುವ ಕೃತಿ ರಚಿಸಿದ್ದಾರೆ. ಆಧುನಿಕತೆಯ ಅಬ್ಬರದಲ್ಲಿ ಕಣ್ಮರೆಯಾಗುತ್ತಿರುವ ಗ್ರಾಮೀಣ ಸಂಸ್ಕೃತಿಯೊಂದರ ತಿಳಿನೋಟವನ್ನು ಈ ಕೃತಿ ನೀಡುತ್ತದೆ.

ಬಾಲ್ಯದ ಭಾವದ ಹಂಗಿನೊಂದಿಗೆ ಲೇಖಕರು ತಾವು ಹುಟ್ಟಿ ಬೆಳೆದ ಊರನ್ನು ಪರಿಚಯಿಸುತ್ತಾ ‘ಊರೆಂಬ ಊರು’ ತಮ್ಮ ಮನದಲ್ಲಿ ಅಚ್ಚೊತ್ತಿದ ಬಗೆಯನ್ನು ಮನಗಾಣಿಸುತ್ತಾರೆ. ನಾಲ್ಕು ಭಾಗಗಳಲ್ಲಿ ಚಾಮರಾಜ ನಗರ ಕೊಳ್ಳೇಗಾಲ ತಾಲ್ಲೂಕಿನ ಇಂದ್ವಾಡಿ ಗ್ರಾಮದ ಸಮಸ್ತ ಪರಿಚಯವನ್ನೂ ತೆರೆದಿಡುವ ಲೇಖಕರು, ಗ್ರಾಮ್ಯ ಸಂಸ್ಕೃತಿಯ ಜತೆಗೆ ಜಾಗತೀಕರಣದ ಪ್ರಭಾವಳಿ (ಚೀನಾ ರೇಷ್ಮೆ), ರಾಜಕಾರಣ, ಸಾಂಸ್ಕೃತಿಕ ಒಳನೋಟಗಳನ್ನೂ ಸಮಗ್ರವಾಗಿ ಕಟ್ಟಿಕೊಟ್ಟಿದ್ದಾರೆ.

ಮನುಕುಲದ ಚರಿತ್ರೆಯ ಮೂಲಕ ಮಾನವ ನಾಗರಿಕ ಇತಿಹಾಸ, ನೆಲೆ ನಿಲ್ಲುವ ತವಕ ಇತ್ಯಾದಿಗಳನ್ನು ವೈಜ್ಞಾನಿಕವಾಗಿ ಹೇಳುತ್ತಲೇ ಸೈದ್ಧಾಂತಿಕ ಒಳನೋಟಗಳನ್ನು ಈ ಕೃತಿ ಪರಿಚಯಿಸುತ್ತದೆ. ಊರದೇವತೆ, ಜನಪದ ಕಲಾವಿದನೊಬ್ಬನ ಆತ್ಮಕಥನ, ನೀಲಗಾರರು, ಹಬ್ಬ–ಹರಿದಿನಗಳ, ಸೌಹಾರ್ದದ ಭಾವಬಿಂಬಗಳನ್ನು ಸಹಜವಾಗಿ ಹೇಳುತ್ತ ಊರಿಗೆ ಜೀವ ತುಂಬಿದ ಹಿರಿಯ ಜೀವಗಳನ್ನೂ ಕೃತಿ ಪರಿಚಯಿಸುತ್ತದೆ.

ಉದ್ಯೋಗ, ಜಾಗತೀಕರಣದ ಮೋಹ, ಐಷಾರಾಮಿ ಸೌಲಭ್ಯಗಳ ನಡುವೆ ಕಳೆದುಹೋದ ಮನಸುಗಳಿಗೆ ‘ಊರೆಂಬುದು ಊರಾಗುತ್ತಿದ್ದ ಪರಿ’ ಹುಟ್ಟೂರಿನ ನೆನಪನ್ನು ಕಾಡುವಂತೆ ಮಾಡುತ್ತದೆ. ನಗರ ಮತ್ತು ಗ್ರಾಮೀಣ ಪರಿಸರದ ಪ್ರಸ್ತುತ ಪರಿಸ್ಥಿತಿಯ ಅವಲೋಕನವನ್ನು ಮಾಡುವ ಕೃತಿ ಅದರಲ್ಲಿನ ಉತ್ತಮ ಅಂಶಗಳನ್ನು ಹೇಳುತ್ತದೆ. ಕೃತಿಯಲ್ಲಿ ಇಂದ್ವಾಡಿ ಎಂಬುದು ನಮ್ಮದಲ್ಲದ ಊರಾದರೂ ಅಲ್ಲಿನ ದಟ್ಟವಾದ ಸಾಂಸ್ಕೃತಿಕ ಚಹರೆಗಳು, ಜನರು, ಗ್ರಾಮೀಣ ಸೊಗಡು ಓದುಗರ ಮನದಲ್ಲಿ ತಮ್ಮೂರನ್ನು ನೆನಪಿಸದೇ ಇರಲಾರದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry