ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಬೆಂಬಲಕ್ಕೆ ನಿಂತ ಸ್ವಾಮೀಜಿಗಳು

ಅಮಿತ್ ಶಾ ವಿರುದ್ಧ ಲಿಂಗಾಯತ ಮಠಾಧಿಪತಿಗಳ ವೇದಿಕೆ ಆಕ್ರೋಶ
Last Updated 7 ಏಪ್ರಿಲ್ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಬೆಂಬಲ ನೀಡಲು ಲಿಂಗಾಯತ ಮಠಾಧೀಶರು ನಿರ್ಧರಿಸಿದ್ದಾರೆ.

‘ಲಿಂಗಾಯತ ಮಠಾಧಿಪತಿಗಳ ವೇದಿಕೆ’ಯು ಬಸವ ಸದನದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿಗಳು ತಮ್ಮ ನಿರ್ಧಾರ ಪ್ರಕಟಿಸಿದರು.

‘ಎಲ್ಲ ಲಿಂಗಾಯತರೂ ಕಾಂಗ್ರೆಸ್‌ಗೇ ಮತ ಚಲಾಯಿಸಬೇಕು’ ಎಂದು ಬಸವ ಧರ್ಮ ಪೀಠದ ಮಾತೆ ಮಹಾದೇವಿ ಬಹಿರಂಗವಾಗಿ ಕರೆ ನೀಡಿದರೆ, ಇತರೆ ಸ್ವಾಮೀಜಿಗಳೂ ಪರೋಕ್ಷವಾಗಿ ಬೆಂಬಲ ಸೂಚಿಸಿದರು.

‘ಯಾರು ನಮ್ಮ ವಿಚಾರಧಾರೆಗಳನ್ನು ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಪ್ರೋತ್ರಾಹಿಸುತ್ತಾರೋ, ಅವರನ್ನು ಬೆಂಬಲಿಸೋಣ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ‘ಮುಂದೆ ‌ಏನಾದರೂ ಪರವಾಗಿಲ್ಲ. ನಾನು ಮಾನ್ಯತೆ ಕೊಡುತ್ತೇನೆ’ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿತನ ನಮಗೆ ಇಷ್ಟವಾಗಿದೆ. ಹೀಗಾಗಿ, ಎಲ್ಲರೂ ಅವರನ್ನು ಗೌರವಿಸಲೇಬೇಕು.’

‘ಒಂದು ವೇಳೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಟ್ಟಿದ್ದೇ ಆದರೆ, ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿ ಪಂಚಪೀಠದ ಕೆಲವರು ಸಿದ್ದರಾಮಯ್ಯ ಅವರನ್ನು ಬೆದರಿಸಿದ್ದರು. ಇದಾವುದಕ್ಕೂ ಅಂಜದೆ ಅವರು ನಮ್ಮ ಪರವಾಗಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಲಿಂಗಾಯತ ಮತದಾರರ ಮೇಲೆ ಈಗ ದೊಡ್ಡ ಜವಾಬ್ದಾರಿ ಇದೆ. ಎಲ್ಲರೂ ಯಾವುದೇ ಮುಚ್ಚುಮರೆ ಇಲ್ಲದೆ ಅವರನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸೋಣ’ ಎಂದು ‌ಕರೆ ನೀಡಿದರು.

‘ಆಗ ಯಾಕೆ ಗಡುವು ಕೊಡಲಿಲ್ಲ?’

2013 ರಲ್ಲಿ ಯುಪಿಎ ಸರ್ಕಾರ ವೀರಶೈವ– ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ನಿರಾಕರಿಸಿದಾಗ ಸ್ವಾಮೀಜಿಗಳು ಕಾಂಗ್ರೆಸ್‌ಗೆ ಯಾಕೆ ಗಡುವು ಕೊಡಲಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಪ್ರಶ್ನಿಸಿದರು.

ಗಡುವು ಕೊಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಹುಲ್‌ಗಾಂಧಿ ರಾಜಕೀಯ ಲಾಭಕ್ಕಾಗಿ ಹಿಂದೂ ಸಮಾಜವನ್ನು ಒಡೆಯಲು ಮುಂದಾಗಿರುವುದು ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

2013 ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಸರ್ಕಾರಕ್ಕೆ ಪ್ರತ್ಯೇಕ ಧರ್ಮದ ಪ್ರಸ್ತಾವನೆ ಹೋಗಿತ್ತು. ಆದರೆ, ಮಾನ್ಯತೆ ನೀಡಲು ನಿರಾಕರಿಸಿತು. ವೀರಶೈವ–ಲಿಂಗಾಯತ ಹಿಂದೂ ಸಮಾಜದ ಭಾಗ ಎಂದು ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ತಿಳಿಸಿತ್ತು. ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ತಡೆಯಲು ಕಾಂಗ್ರೆಸ್‌ ಈಗ ಪಿತೂರಿ ನಡೆಸಿದೆ ಎಂದರು.

ಅಮಿತ್‌ ಶಾ ಯಾರು

ಲಿಂಗಾಯತಕ್ಕೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡುವ ಪ್ರಸ್ತಾವವನ್ನು ತಿರಸ್ಕರಿಸಲು ಅಮಿತ್‌ ಶಾ ಯಾರು? ಅವರೇನು ರಾಷ್ಟಪತಿಗಳೇ? ಸಚಿವ ಸಂಪುಟದ ಸದಸ್ಯರೇ? ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರೇ? ಅಥವಾ ಇವರೆಲ್ಲರನ್ನೂ ಮೀರಿದ ಸರ್ವಾಧಿಕಾರಿಯೇ.. ಇವರ‍್ಯಾರು ಅಲ್ಲ ಅಂದ ಮೇಲೆ ಬೇಜವಾಬ್ದಾರಿ ಹೇಳಿಕೆ ನೀಡುತ್ತ ಧರ್ಮ ಒಡೆಯುವ ಕೆಲಸವನ್ನೇಕೆ ಮಾಡುತ್ತೀರಾ ಎಂದು ಎಲ್ಲ ಸ್ವಾಮೀಜಿಗಳು ಪ್ರಶ್ನಿಸಿದರು.

**

ನಮ್ಮದು ‘ಸಹಕಾರಕ್ಕೆ–ಸಹಕಾರ ತತ್ವ’. ನಮಗೆ ಯಾರು ಸಹಕಾರ ಕೊಡುತ್ತಾರೋ, ಅವರಿಗೆ ನಾವು ಸಹಕಾರ ನೀಡುತ್ತೇವೆ
ಡಾ.ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ

**

ಜೇನುತುಪ್ಪದ ಬಾಟಲಿಗೆ ಹರಳೆಣ್ಣೆ ಎಂಬ ಚೀಟಿ ಅಂಟಿಸಲಾಗಿತ್ತು. ಆ ಚೀಟಿ ಕಿತ್ತು ಹಾಕಿ ಜೇನು ತುಪ್ಪ ಸವಿಯುವ ಕಾಲ ಬಂದಿದೆ. ಅಂದರೆ, ವೀರಶೈವದ ಲೇಬಲ್ ಕಿತ್ತೆಸೆದು ಲಿಂಗಾಯತ  ಧರ್ಮ ಎನ್ನಬೇಕಿದೆ
ಮಾತೆ ಮಹಾದೇವಿ, ಬಸವ ಧರ್ಮ ಪೀಠ, ಬಾಗಲಕೋಟೆ

**

ನಮ್ಮ ಹೋರಾಟ ಈಗ ತಾರ್ಕಿಕ ಅಂತ್ಯಕ್ಕೆ ಬಂದಿದೆ.  ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರಬೇಕೆಂದು ಅಮಿತ್ ಶಾ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಯುದ್ಧ ಮಾಡಿಯಾದರೂ, ನಾವು ಗೆಲ್ಲಲೇಬೇಕು
ಸಿದ್ಧಲಿಂಗ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT