ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯಬಲ, ಸಿನಿಮಾ ಫಲ

Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜಯಲಲಿತಾ, ಎನ್‌ಟಿಆರ್ ತರಹದವರಿಗೆ ನೃತ್ಯ ಹೇಳಿಕೊಟ್ಟವರು ಕಮಲ ಹಾಸನ್. ಈಗ ಅವರು ತಮ್ಮ ನೃತ್ಯಪಾಠಕ್ಕೆ ಹೆಜ್ಜೆ ಹಾಕಿದವರು ಕಟ್ಟಿಟ್ಟ ರಾಜಕೀಯದ ಮೊಗಸಾಲೆಯಲ್ಲಿ ನಿಂತಿದ್ದಾರೆ. ಅಂಥ ಕಮಲ ಹಾಸನ್ ಅವರಿಗೂ ಹೊಸಕಾಲದ ನೃತ್ಯ ಹೇಳಿಕೊಟ್ಟ ಪ್ರಭುದೇವ ತಮ್ಮ ನೀಳಕಾಯವನ್ನು ಈಗಲೂ ಬಾಗಿಸುತ್ತಾ, ಬಳುಕಿಸುತ್ತಾ, ಬಡನಡು (ಹೆಣ್ಣುಮಕ್ಕಳಿಗಷ್ಟೇ ಯಾಕೆ ಇದನ್ನು ಬಳಸಬೇಕು) ತುಳುಕಿಸುತ್ತಾ, ‘ಮೂನ್ ವಾಕ್’ ಮಾಡುತ್ತಾ ಇದ್ದಾರೆ.

ಮೊನ್ನೆ ಪ್ರಭುದೇವ ನಲವತ್ತೈದನೇ ಬರ್ತ್ ಡೇ ಆಚರಿಸಿದರು. ಕೆಲವರು ‘ಅವರಿಗೆ ನಲವತ್ತೈದಾ?’ ಎಂದು ಆಶ್ಚರ್ಯಸೂಚಕ ಬೆರೆತ ಉದ್ಗಾರ ಹೊರಡಿಸಿದರು. ಇನ್ನು ಕೆಲವರು ‘ಬರೀ ನಲವತ್ತೈದು ಅಷ್ಟೇನಾ?’ ಎಂದು ಪ್ರತಿಕ್ರಿಯಿಸಿದರು.

ಎರಡೂವರೆ ದಶಕಗಳ ಹಿಂದೆ ತಮಿಳಿನ ನಿರ್ದೇಶಕ ಶಂಕರ್, ಮೂಗೂರು ತವರಿನ ಕಪ್ಪುಹುಡುಗನಿಗೊಂದು ದೊಡ್ಡ ವೇದಿಕೆ ಕೊಡದೇ ಇದ್ದಿದ್ದರೆ ಪ್ರಭುದೇವ ಬಹುಶಃ ಉಡುಪಿ ಜಯರಾಂ ತರಹ ನೃತ್ಯ ನಿರ್ದೇಶಕರಾಗಿಯೇ ಉಳಿದುಬಿಡುತ್ತಿದ್ದರು. ಅಪ್ಪ ಮೂಗೂರು ಸುಂದರಂ ಅವರಂಥದ್ದೇ ವ್ಯಕ್ತಿಪರಿಚಯದ ಚೌಕಟ್ಟಿಗೇ ಸಿಲುಕಿ, ಕಳೆದುಹೋಗುತ್ತಿದ್ದರು.

ಹಾಗೆ ನೋಡಿದರೆ ಪ್ರಭುದೇವ ಅವರಿಗೆ ಕ್ಯಾಮೆರಾ ಹೊಸತೇನೂ ಆಗಿರಲಿಲ್ಲ. ಅವರು ಗುಂಪಿನಲ್ಲಿ ಗೋವಿಂದ ಎಂದು ಕುಣಿಯುತ್ತಿದ್ದವರ ನಡುವೆ ಬಾಲ್ಯದಲ್ಲೇ ತೆರೆಮೇಲೆ ಕಾಣಿಸಿಕೊಂಡಿದ್ದರು. ‘ಅದೋ… ನನ್ನ ಮಗ’ ಎಂದು ಮೂಗೂರು ಸುಂದರಂ ಆಗಲೇ ಹೆಮ್ಮೆಯಿಂದ ಹೇಳಿಕೊಂಡಿದ್ದರು.
‘ಜಂಟಲ್ ಮನ್’ ತಮಿಳು ಸಿನಿಮಾದ ‘ಚುಕುಬುಕು ರೈಲೇ’ ಹಾಡಿನಲ್ಲಿ ಪ್ರಭುದೇವ ಮಾಡಿದ ನೃತ್ಯ ಯುವಕರ ಪಾಲಿಗೆ ಸೂಜಿಗಲ್ಲಾಯಿತು. ನಿಂತ ಭಂಗಿಯಿಂದ ಹಿಮ್ಮುಖವಾಗಿ ಮಲಗುವ ಭಂಗಿಗೆ ಬದಲಾಯಿಸುವುದು, ಮತ್ತೆ ಮಲಗುವಂಥ ಭಂಗಿಯಿಂದ ಒಂದು ಲಯದಲ್ಲಿ ಮೇಲೇಳುವುದು-ಪ್ರಭುದೇವ ಆಗ ಹಾಕಿದ ಸಿಗ್ನೇಚರ್ ಸ್ಟೆಪ್. ಮೈಕಲ್ ಜಾಕ್ಸನ್ ಆರಾಧಕನಾಗಿದ್ದೂ ಅದಕ್ಕೆ ದೇಸಿ ನೃತ್ಯವನ್ನು ಕಸಿ ಮಾಡಿದ್ದು ಮೈಸೂರು ಕಡೆಯ ಹುಡುಗನ ಹೆಗ್ಗಳಿಕೆ.

ತಮಿಳುನಾಡಿನಲ್ಲಿ ಕಪ್ಪುಬಣ್ಣದ ನಾಯಕರನ್ನು ಬೆಳೆಸಿದ ಪರಂಪರೆಯೇ ಇದೆ. ಈ ನಾಡಿಮಿಡಿತವನ್ನು ನಿರ್ದೇಶಕ ಶಂಕರ್ ಹಿಡಿದರು.

‘ಕಾದಲನ್’ ಸಿನಿಮಾದ ಒಂದೇ ಒಂದು ಹಾಡಿನಲ್ಲಿ ಮೋಡಿ ಮಾಡಿದ್ದ ಪ್ರಭುದೇವ ಅವರ ಪಾಲಿಗೆ ಆ ದಿನಮಾನದ ಹೊಸ ನಾಯಕನಾಗಿ ಕಂಡರು. ‘ಕಾದಲನ್’ ಚಿತ್ರಕಥೆ ರೂಪಿಸಲು ಅವರಿಗೆ ಅದೇ ಪ್ರೇರಣೆ.

ಕಪ್ಪು ಬಣ್ಣದ ನರಪೇತಲ ದೇಹದ ನಾಯಕ (ಪ್ರಭುದೇವ). ಅವನಿಗೊಬ್ಬ ಇನ್ನೂ ಕಡುಗಪ್ಪಿನ ಸ್ನೇಹಿತ (ವಡಿವೇಲು). ನಾಯಕ ಪ್ರೇಮಿಸತೊಡಗುವ ಹುಡುಗಿ ಶ್ವೇತಕನ್ಯೆ (ನಗ್ಮಾ). ನಾಯಕಿಯ ನಿಲುವು, ದೇಹಾಕಾರಕ್ಕೆ ತದ್ವಿರುದ್ಧ ಎನ್ನುವಂಥ ನಾಯಕ. ಕಪ್ಪು-ಬಿಳುಪನ್ನು ಹೀಗೆ ಒಂದುಮಾಡುವ ಪರಿಕಲ್ಪನೆ ತಮಿಳು ಚಿತ್ರರಂಗಕ್ಕೆ ಹೊಸತಲ್ಲದಿದ್ದರೂ ಶಂಕರ್ ಅದನ್ನು ಸಮಕಾಲೀನ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟರು.

ಪ್ರಭುದೇವ ಅಭಿನಯ ಸಾಮರ್ಥ್ಯದ ಮಿತಿಯನ್ನು ಚೆನ್ನಾಗಿ ಅರಿತುಕೊಂಡ ಅವರು, ನೃತ್ಯ ಲಾಲಿತ್ಯವನ್ನೇ ಚಲನಚಿತ್ರದುದ್ದಕ್ಕೂ ಹರಿಸಿಬಿಟ್ಟರು.

ಪ್ರಭುದೇವ ಖುಷಿಯಲ್ಲೂ ಕುಣಿಯಬೇಕು, ನೋವಿನಲ್ಲೂ ಕುಣಿಯಬೇಕು, ಕುಣಿದೇ ನಾಯಕಿಯ ಚಹರೆಯನ್ನು ರಂಗೋಲಿಯಲ್ಲಿ ಮೂಡಿಸಬೇಕು. ಪ್ರೇಮಿಸಬೇಕು. ನಾಯಕಿಯ ತಂದೆಯನ್ನು ಎದುರಿಸಬೇಕು. ಕಪ್ಪು ನಾಯಕ ಗೆಲ್ಲಬೇಕು. ಬಿಳಿ ನಾಯಕಿ ಅವನಿಗೆ ಮನಸೋಲಬೇಕು. ಇಂಥ ಸಿನಿಮಾ ನಾಯಕತ್ವ ಕಂಡು ಪ್ರೇಕ್ಷಕರೂ ತಮ್ಮನ್ನು ರಿಲೇಟ್ ಮಾಡಿಕೊಂಡು ಸುಖಿಸುತ್ತಾರೆ ಎನ್ನುವುದು ಶಂಕರ್ ನಿಲುವಾಗಿತ್ತು. ‘ಕಾದಲನ್’ ದೊಡ್ಡ ಮಟ್ಟದಲ್ಲಿ ಗೆದ್ದಿತು. ನಿರ್ದೇಶಕರಾಗಿ ಶಂಕರ್ ಅವರಿಗೆ ಅದು ಎರಡನೇ ಇನಿಂಗ್ಸ್ ನ ಅದ್ಭುತ ಗೆಲುವು.

ಪ್ರಭುದೇವ ಬರೀ ನಾಯಕನಾಗಿ ಮೆರೆಯಲಿಲ್ಲ. ನೃತ್ಯ ನಿರ್ದೇಶಕನ ಕೆಲಸವನ್ನೂ ಮುಂದುವರಿಸಿದರು. ‘ಮಿನ್ಸಾರ ಕಣವು’ ತರಹದ ಭಾವಪ್ರಧಾನ ಸಿನಿಮಾದಲ್ಲಿ ಅರವಿಂದ ಸ್ವಾಮಿ, ಕಾಜೋಲ್ ತರಹದ ಸುಂದರ ವದನಗಳ ಮಧ್ಯೆಯೂ ನಟನಾಗಿ ತಮ್ಮತನವನ್ನ ಸಾಬೀತುಪಡಿಸಿದರು.

ತಮಿಳಿನಲ್ಲಿ ಅವರ ಸುತ್ತ ಬೆಳೆದ ಮಾರುಕಟ್ಟೆಯನ್ನು ಗಮನಿಸಿದ ಸಲ್ಮಾನ್ ಖಾನ್ ಬಾಲಿವುಡ್ ಗೆ ಕರೆತಂದರು. ಇವತ್ತಿಗೂ ತಡವರಿಸುತ್ತಲೇ ಹಿಂದಿ ಮಾತನಾಡುವ ಪ್ರಭುದೇವ, ಮುಂಬೈ ಜನರಿಗೂ ಮಸಾಲೆ ಸಿನಿಮಾ ಕೊಡಬಲ್ಲ ನಿರ್ದೇಶಕರಾಗಿ ಬೆಳೆದದ್ದೇ ರೋಚಕ.
ದಕ್ಷಿಣ ಭಾರತದ ಸಿನಿಮಾಗಳ, ಅದರಲ್ಲೂ ತಮಿಳು ಚಲನಚಿತ್ರಗಳ ಹುಲುಸು ಬೆಳೆ ಹಾಗೂ ಹದವರಿತ ಮಸಾಲೆ ಬಾಲಿವುಡ್‌ನವರಿಗೂ ರುಚಿಕಟ್ಟೆನಿಸಿತು. ಪ್ರಭುದೇವ ಅಲ್ಲಿಯೂ ಬರೀ ನಿರ್ದೇಶಕನಾಗಿ ಉಳಿಯಲಿಲ್ಲ; ನೃತ್ಯ ನಿರ್ದೇಶನದ ಕೆಲಸವನ್ನೂ ಮುಂದುವರಿಸಿದರು.

ಸಲ್ಮಾನ್‌ ಖಾನ್‌ನನ್ನು ಕುಣಿಸಿದರು. ಸೋನಾಕ್ಷಿ ಸಿನ್ಹಾರ ಮುಖಭಾವದಲ್ಲೇ ಜನಮನ ಸೂರೆಗೊಳ್ಳುವಂಥ ತಂತ್ರ ತೋರಿದರು. ಶಾಹಿದ್ ಕಪೂರ್ ಹುರಿಗಟ್ಟಿದ ದೇಹದವನ್ನೂ ಬಾಗಿಸಿ, ಬಳುಕಿಸಿದರು. ತಮಗಿಂತ ವಯಸ್ಸಿನಲ್ಲಿ ಸಾಕಷ್ಟು ಚಿಕ್ಕವರಾದ ಅವರ ಜೊತೆಗೆ ತಾವೂ ನರ್ತಿಸಿದರು. ಶ್ರದ್ಧಾ ಕಪೂರ್ ತರಹದ ಬಿಳಿ ಬೊಂಬೆಯಿಂದಲೂ ಪ್ರೇಕ್ಷಕರು ಹುಬ್ಬೇರಿಸುವಂಥ ನೃತ್ಯ ಮಾಡಿಸಿದರು. ‘ಎಬಿಸಿಡಿ’ ಅರ್ಥಾತ್ ‘ಎನಿಬಡಿ ಕ್ಯಾನ್ ಡಾನ್ಸ್’ ಸಿನಿಮಾವನ್ನು ಕೂಡ ಒಂದು ಬ್ರಾಂಡ್ ಆಗಿ ಮಾಡಿದರು; ತಮ್ಮ ಸ್ನೇಹಿತ ರೆಮೊ ಡಿಸೋಜಾ ಜೊತೆಗೂಡಿ.

ನಲವತ್ತೈದರ ಪ್ರಭುದೇವ ಕುಣಿಯತೊಡಗಿದರೆ ಈಗಲೂ ಇಪ್ಪತ್ತೈದರ ಹುಡುಗನಂತೆ ಕಾಣುತ್ತಾರೆ. ಅವರ ನೃತ್ಯಬಲಕ್ಕೊಂದು ಸಲಾಮು.
ಕ್ರಿಕೆಟ್ ಅಂಗಳದಲ್ಲಿ ಬ್ರಿಯಾನ್ ಲಾರಾ ಪಾದಚಲನೆಗೆ ಒಂದು ಲಯ ಹಾಗೂ ಸದ್ದು ಇರುತ್ತಿತ್ತು. ಪ್ರಭುದೇವ ನೃತ್ಯ ಮಾಡಲು ತೊಡಗಿದಾಗ ಅವರ ಪಾದಚಲನೆ ಕೂಡ ಹಾಗೆಯೇ; ಲಯವಿದೆ, ಸದ್ದು ಇದೆ. ಅದರ ಮೋಡಿ ಮಾತ್ರ ಸುಲಭವಾಗಿ ಅರ್ಥವಾಗದು.

ಪಯಣ ಇನ್ನೂ ಬಾಕಿ ಇದೆ
‘ನಾನು ಬದುಕು ಹೇಗೆ ಹೋಗುವುದೋ ಹಾಗೆ ಸಾಗಬೇಕೆಂದು ತೀರ್ಮಾನಿಸಿದ್ದೆ. ನೃತ್ಯ ನನ್ನ ರಕ್ತದಲ್ಲಿತ್ತು. ಅದನ್ನು ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಸಿನಿಮಾ ಅನುಭವಗಳೇ ನಿರ್ದೇಶಕನ ಗೌರವವನ್ನೂ ಕೊಟ್ಟವು. ಬಣ್ಣ, ಭಾಷೆ ಎಲ್ಲ ಮಿತಿಗಳನ್ನು ಮೀರಿದ ಅವಕಾಶಗಳು ನನ್ನತ್ತ ಬಂದವು. ಸಿನಿಮಾಮೋಹಿಗೆ, ನೃತ್ಯಮೋಹಿಗೆ ಇನ್ನೇನು ಬೇಕು? ಪಯಣ ಇನ್ನೂ ಬಾಕಿ ಇದೆ’- ಹೀಗೆನ್ನುವ ನಮ್ರತೆ ಪ್ರಭುದೇವ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT