ಭಾನುವಾರ, ಡಿಸೆಂಬರ್ 15, 2019
25 °C

ಸೀರೆ ಆಸೆ ತೋರಿಸಿ ಆಭರಣ ಕದ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀರೆ ಆಸೆ ತೋರಿಸಿ ಆಭರಣ ಕದ್ದ!

ಬೆಂಗಳೂರು: ಸೀರೆ ಆಸೆ ತೋರಿಸಿ ಶಾಲೆಯೊಂದರ ಪ್ರಾಂಶುಪಾಲರ ಚಿನ್ನಾಭರಣಗಳನ್ನು ದೋಚಿದ್ದ ಆರೋಪದಡಿ ಅಬ್ಬುಲ್‌ ಖಾದರ್‌ (59) ಎಂಬಾತನನ್ನು ಆರ್‌.ಟಿ.ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕೆ.ಜೆ.ಹಳ್ಳಿ ನಿವಾಸಿಯಾದ ಆರೋಪಿ, ಹಳೆ ವಿದ್ಯಾರ್ಥಿ ಸೋಗಿನಲ್ಲಿ ಪ್ರಾಂಶುಪಾಲರನ್ನು ಪರಿಚಯ ಮಾಡಿಕೊಂಡು ಕೃತ್ಯ ಎಸಗಿದ್ದ. ಆತನಿಂದ ₹1.8 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಎಚ್‌ಎಎಲ್‌ ಸಮೀಪದ ಶಾಲೆಯೊಂದಕ್ಕೆ ಜನವರಿಯಲ್ಲಿ ಭೇಟಿ ಕೊಟ್ಟಿದ್ದ ಆರೋಪಿ, ತಾನೊಬ್ಬ ಶ್ರೀಮಂತ ಉದ್ಯಮಿ ಎಂದು ಪರಿಚಯ ಮಾಡಿ

ಕೊಂಡಿದ್ದ. ಹಳೆ ವಿದ್ಯಾರ್ಥಿ ಎಂದೂ ಪರಿಚಯಿಸಿಕೊಂಡಿದ್ದ ಆತ, ಶಿಕ್ಷಕಿಯರಿಗೆ ಸೀರೆಯನ್ನು ಉಡುಗೊರೆಯಾಗಿ ಕೊಡುವುದಾಗಿ ಆಸೆ ಹುಟ್ಟಿಸಿದ್ದ. ಅದನ್ನು ನಂಬಿದ್ದ ಪ್ರಾಂಶುಪಾಲರು ಆತನನ್ನು ಆತ್ಮೀಯವಾಗಿ ಮಾತನಾಡಿಸಿ ಶಾಲೆಯ ಶಿಕ್ಷಕಿಯರನ್ನೆಲ್ಲ ಕೊಠಡಿಗೆ ಕರೆಸಿ ಅಬ್ದುಲ್‌ನ ಪರಿಚಯ ಮಾಡಿಸಿದ್ದರು.

ಅಂದಿನಿಂದ ಆರೋಪಿ ನಿತ್ಯವೂ ಶಾಲೆಗೆ ಬಂದು ಹೋಗುತ್ತಿದ್ದ. ಜನವರಿ ಕೊನೆಯ ವಾರದಲ್ಲಿ ಪ್ರಾಂಶುಪಾಲರ ಕೊಠಡಿಯಲ್ಲಿ ಕುಳಿತಿದ್ದ ಆರೋಪಿ, ಅವರ ಚಿನ್ನದ ಬಳೆ ಹಾಗೂ ಚಿನ್ನದ ಸರವನ್ನು ಗಮನಿಸಿದ್ದ. ‘ಮುಂದಿನ ವಾರ ನನ್ನ ಮಗಳ ಮದುವೆ ಇದೆ. ಹೀಗಾಗಿ, ಆಕೆಗೆ ಚಿನ್ನಾಭರಣ ಮಾಡಿಸಬೇಕಿದೆ. ನಿಮ್ಮ (ಪ್ರಾಂಶುಪಾಲೆ) ಆಭರಣಗಳ ವಿನ್ಯಾಸ ಚೆನ್ನಾಗಿದೆ. ಅಂಥದ್ದೇ ಆಭರಣಗಳನ್ನು ಮಗಳಿಗೆ ಮಾಡಿಸಿ ಕೊಡುವೆ. ನಿಮ್ಮ ಆಭರಣಗಳನ್ನು ಕೊಟ್ಟರೆ, ಚಿನ್ನದ ಅಂಗಡಿಯವರಿಗೆ ತೋರಿಸಿ ಅಂಥದ್ದೇ ವಿನ್ಯಾಸದ ಆಭರಣ ಮಾಡಿಸಿಕೊಂಡು ಬರುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿದ್ದ ಪ್ರಾಂಶುಪಾಲರು ಆಭರಣಗಳನ್ನು ಆತನಿಗೆ ಕೊಟ್ಟು ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಚಿನ್ನಾಭರಣ ತೆಗೆದುಕೊಂಡ ಹೋದ ಆರೋಪಿ, ಮರುದಿನದಿಂದ ಶಾಲೆಗೆ ಬಂದಿರಲಿಲ್ಲ. ಮೊಬೈಲ್‌ ಸಹ ಸ್ವಿಚ್ಡ್‌ ಆಫ್‌ ಮಾಡಿದ್ದ. ಪ್ರಾಂಶುಪಾಲರಿಗೆ ತಾವು ವಂಚನೆಗೀಡಾಗಿದ್ದು ಗೊತ್ತಾಗಿ ಠಾಣೆಗೆ ಬಂದು ದೂರು ನೀಡಿದ್ದರು ಎಂದರು.

‘ಶಾಲೆಗೆ ಬಂದು ಹೋಗುತ್ತಿದ್ದ ವೇಳೆಯಲ್ಲೇ ಆರೋಪಿ, ಪ್ರಾಂಶುಪಾಲರ ಮೊಬೈಲ್‌ ನಂಬರ್‌ ಪಡೆದಿದ್ದ. ಆ ಸಂಖ್ಯೆಗೆ ಹಲವು ಬಾರಿ ಕರೆಯನ್ನೂ ಮಾಡಿದ್ದ. ಅದೇ ಸಂಖ್ಯೆಯಿಂದಲೇ ಆತನನ್ನು ಪತ್ತೆ ಹಚ್ಚಿ ಬಂಧಿಸಿದೆವು’ ಎಂದು ಪೊಲೀಸರು ತಿಳಿಸಿದರು.

ಫೇಷಿಯಲ್‌ ಮಾಡೋ ನೆಪದಲ್ಲೂ ವಂಚನೆ: ಆರೋಪಿಯ ವಿರುದ್ಧ ಶಿವಾಜಿನಗರ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಅಲ್ಲಿಯ ಶಾಲೆಯೊಂದಕ್ಕೆ ಹೋಗಿದ್ದ ಆರೋಪಿ, ತಾನೊಬ್ಬ ಬ್ಯೂಟಿಷಿಯನ್‌ ಎಂದು ಪರಿಚಯ ಮಾಡಿಕೊಂಡಿದ್ದ. ಉಚಿತವಾಗಿ ಫೇಷಿಯಲ್‌ ಮಾಡುವು

ದಾಗಿ ಶಿಕ್ಷಕಿಯರನ್ನು ನಂಬಿಸಿದ್ದ ಎಂದು ಪೊಲೀಸರು ತಿಳಿಸಿದರು.

ಇಬ್ಬರು ಶಿಕ್ಷಕಿಯರು ಮುಖಕ್ಕೆ ಫೇಷಿಯಲ್‌ ಹಾಕಿಸಿಕೊಳ್ಳಲು ಒಪ್ಪಿಕೊಂಡಿದ್ದರು. ಫೇಷಿಯಲ್ ಹಾಕುವ     ವೇಳೆ ಶಿಕ್ಷಕಿಯರು, ಚಿನ್ನಾಭರಣವನ್ನು ಟೇಬಲ್‌ ಮೇಲಿಟ್ಟಿದ್ದರು. ಅವರ ಮುಖಕ್ಕೆ ಫೇಷಿಯಲ್‌ ಮಾಡಿದ್ದ ಆರೋಪಿ, ಗಂಟೆಯವರೆಗೂ ಕಣ್ಣು ಮುಚ್ಚಿಕೊಂಡಿರುವಂತೆ ಹೇಳಿದ್ದ. ಅವರು ಕಣ್ಣು ಬಿಡುವಷ್ಟರಲ್ಲೇ ಆಭರಣಗಳನ್ನು ಕದ್ದು ಪರಾರಿಯಾಗಿದ್ದ ಎಂದರು.

ರೇಷ್ಮೆ ಸೀರೆ ಕದ್ದಿದ್ದ ಆರೋಪಿ: ಗಂಗಾನಗರದ ‘ಎಸ್.ಎಂ.ಸಿಲ್ಕ್‌’ ಅಂಗಡಿಯಿಂದ ಆರೋಪಿ ಸೀರೆಗಳನ್ನೂ ಕದ್ದೊಯ್ದಿದ್ದ. ಆ ಬಗ್ಗೆಯೂ ಪ್ರತ್ಯೇಕ ದೂರು ದಾಖಲಾಗಿತ್ತು ಎಂದು ತಿಳಿಸಿದರು.ಗ್ರಾಹಕನ ಸೋಗಿನಲ್ಲಿ ಅಂಗಡಿಗೆ ಹೋಗಿದ್ದ ಆರೋಪಿ, ರೇಷ್ಮೆ ಸೀರೆ ಖರೀದಿಸಬೇಕೆಂದು ಹೇಳಿದ್ದ. ಅಂಗಡಿಯ ಪ್ರತಿನಿಧಿ ನಾಗೇಶ್‌ ಐದಾರು ಸೀರೆಗಳನ್ನು ತೋರಿಸಿದ್ದರು. ‘ನನ್ನ ಪತ್ನಿಗೆ ಸೀರೆ ಬೇಕಿದೆ. ಈ ಸೀರೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ತೋರಿಸಿಕೊಂಡು ಬರುತ್ತೇನೆ’ ಎಂದು ಆರೋಪಿ ಹೇಳಿದ್ದ. ಆಗ ನಾಗೇಶ್, ‘ನಾನೂ ನಿಮ್ಮ ಜತೆ ಬರುತ್ತೇನೆ. ಇಬ್ಬರೂ ಸೇರಿಯೇ ಹೋಗೋಣ’ ಎಂದು ಆತನೊಂದಿಗೆ ಹೋಗಿದ್ದರು. ಮಾರ್ಗಮಧ್ಯೆಯೇ ನಾಗೇಶ್‌ ಅವರ ದಿಕ್ಕು ತಪ್ಪಿಸಿ ಸೀರೆ ಸಮೇತ ಆರೋಪಿ ಪರಾರಿಯಾಗಿದ್ದ. ಅದೇ ಸೀರೆಗಳನ್ನೇ ಪ್ರಾಂಶುಪಾಲೆಗೆ ತೋರಿಸಿ ಆಭರಣ ಕದ್ದಿದ್ದ ಎಂದರು.

ಸಲೀಂ, ಮುನಾವರ್‌, ಮನೋಹರ್‌!

ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದಿರುವ ಆರೋಪಿ ಇಂಗ್ಲಿಷ್, ಹಿಂದಿ, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಪರಿಣಿತನಾಗಿದ್ದಾನೆ. ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನೂ ಕೇಳಿಯೇ ಪ್ರಾಂಶುಪಾಲರು, ಆತನನ್ನು ನಂಬಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಡಾ. ಸಲೀಂ, ಮುನಾವರ್, ಮನೋಹರ್‌ ಹೀಗೆ ಹಲವು ಹೆಸರುಗಳಿಂದ ಹಲವರನ್ನು ವಂಚಿಸಿದ್ದಾನೆ. ಕುಟುಂಬದಿಂದ ದೂರವಿರುವ ಆತ, ಮೋಜು– ಮಸ್ತಿಗಾಗಿ ಹಣ ಸಂಪಾದನೆ ಮಾಡಲು ಕೃತ್ಯವೆಸಗುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಬಳ್ಳಾರಿ, ವಿಜಯಪುರ, ಕಲಬುರ್ಗಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದ ಆರೋಪಿ, ಸ್ಕ್ಯಾನಿಂಗ್‌ ಕೇಂದ್ರದ ಸಿಬ್ಬಂದಿ ಎಂದು ರೋಗಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಸ್ಕ್ಯಾನಿಂಗ್‌ಗೆ ಹೋಗುವ ಮುನ್ನ ರೋಗಿಗಳ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು, ಅಲ್ಲಿಂದ ಪರಾರಿಯಾಗುತ್ತಿದ್ದ. ಈ ಬಗ್ಗೆಯೂ ಆಯಾ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)