ಶುಕ್ರವಾರ, ಡಿಸೆಂಬರ್ 6, 2019
25 °C
ರಾಹುಲ್‌, ಕರುಣ್‌ ನಾಯರ್ ಅರ್ಧಶತಕ; ಕಿಂಗ್ಸ್ ಇಲೆವನ್‌ ಪಂಜಾಬ್‌ ತಂಡಕ್ಕೆ ಜಯ

ಮೊಹಾಲಿಯಲ್ಲಿ ಕನ್ನಡಿಗರೇ ‘ಕಿಂಗ್ಸ್‌’

Published:
Updated:
ಮೊಹಾಲಿಯಲ್ಲಿ ಕನ್ನಡಿಗರೇ ‘ಕಿಂಗ್ಸ್‌’

ಚಂಡೀಗಡ: ಕನ್ನಡಿಗ ಕೆ.ಎಲ್‌.ರಾಹುಲ್ ಅವರ ದಾಖಲೆಯ ಅರ್ಧಶತಕ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಕರುಣ್‌ ನಾಯರ್ ಅವರ ಸ್ಫೋಟಕ ಅರ್ಧಶತಕ ಕಿಂಗ್ಸ್ ಇಲೆವನ್ ಪಂಜಾಬ್ ತಂಡಕ್ಕೆ ಗೆಲುವು ತಂದುಕೊಟ್ಟಿತು.

ತವರಿನ ಪ್ರೇಕ್ಷಕರ ಎದುರು ಮೊದಲ ‍ಪಂದ್ಯದಲ್ಲಿ ಕಣಕ್ಕೆ ಇಳಿದ ಈ ತಂಡದ ಡೆಲ್ಲಿ ಡೇರ್ ಡೆವಿಲ್ಸ್‌ ಎದುರು ಏಳು ವಿಕೆಟ್‌ಗಳಿಂದ ಗೆದ್ದಿತು. ನಾಯಕ ಗೌತಮ್ ಗಂಭೀರ್‌ (55; 42 ಎ, 1 ಸಿ, 5 ಬೌಂ) ಅವರ ಅರ್ಧಶತಕದ ಬಲದಿಂದ 166 ರನ್‌ ಗಳಿಸಿದ್ದ ಡೇರ್‌ ಡೆವಿಲ್ಸ್‌ನ ಮೊತ್ತವನ್ನು ಪಂಜಾಬ್‌ ಇನ್ನೂ ಏಳು ಎಸೆತ ಬಾಕಿ ಇರುವಾಗ ಮೆಟ್ಟಿ ನಿಂತಿತು.

ರಾಹುಲ್ ಮತ್ತು ಮಯಂಕ್ ಅಗರವಾಲ್ ಆತಿಥೇಯರಿಗೆ ಅಮೋಘ ಆರಂಭ ಒದಗಿಸಿದರು. ಸಿಕ್ಸರ್‌, ಬೌಂಡರಿಗಳ ಮಳೆ ಸುರಿಸಿದ ರಾಹುಲ್‌ 14 ಎಸೆತಗಳಲ್ಲಿ 50 ರನ್‌ ಪೂರೈಸಿ ಐಪಿಎಲ್‌ನ ಅತಿವೇಗದ ಅರ್ಧಶತಕ ಗಳಿಸಿದರು. 16 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದ ಅವರು ನಾಲ್ಕು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದರು.

ಮೊದಲ ವಿಕೆಟ್‌ಗೆ ರಾಹುಲ್ ಜೊತೆ 58 ರನ್‌ ಸೇರಿಸಿದ ಮಯಂಕ್‌ ಏಳು ರನ್‌ ಗಳಿಸಿ ಔಟಾದರು. ಯುವರಾಜ್ ಸಿಂಗ್ ಔಟಾದ ನಂತರ ಕ್ರೀಸ್‌ಗೆ ಬಂದ ಕರುಣ್ ನಾಯರ್‌ 33 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಒಳಗೊಂಡ 50 ರನ್‌ ಗಳಿಸಿದರು. ಡೇವಿಡ್ ಮಿಲ್ಲರ್ ಮತ್ತು ಮಾರ್ಕಸ್ ಸ್ಟೊಯಿನಿಸ್‌ ಅಂತಿಮ ಓವರ್‌ಗಳಲ್ಲಿ ಸುಲಭವಾಗಿ ತಂಡವನ್ನು ಜಯದ ದಡ ಸೇರಿಸಿದರು

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಡೇರ್‌ ಡೆವಿಲ್ಸ್‌ ತಂಡದ ಆರಂಭ ಉತ್ತಮವಾಗಿರಲಿಲ್ಲ. 12 ರನ್‌ ಗಳಸುವಷ್ಟರಲ್ಲಿ ತಂಡ ಆರಂಭಿಕ ಬ್ಯಾಟ್ಸ್‌ಮನ್‌ ಕಾಲಿನ್ ಮನ್ರೊ ಅವರನ್ನು ಕಳೆದುಕೊಂಡಿತು. ಶ್ರೇಯಸ್ ಅಯ್ಯರ್‌, ವಿಜಯಶಂಕರ್‌ ಮತ್ತು ರಿಷಭ್‌ ಪಂತ್ ಕೂಡ ಪರಿಣಾಮ ಬೀರಲಿಲ್ಲ. ಆದರೆ ಗಂಭೀರ್‌ ಏಕಾಂಗಿಯಾಗಿ ತಂಡವನ್ನು ಮುನ್ನಡೆಸಿದರು.

ಪ್ರತಿಕ್ರಿಯಿಸಿ (+)