ಮಂಗಳವಾರ, ಜೂಲೈ 7, 2020
27 °C

ವಿದೇಶಕ್ಕೂ ವ್ಯಾಪಿಸಿದ ಚುನಾವಣಾ ಜ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶಕ್ಕೂ ವ್ಯಾಪಿಸಿದ ಚುನಾವಣಾ ಜ್ವರ

ಮಂಗಳೂರು: ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆ ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದು, ಪ್ರತಿ ಕ್ಷೇತ್ರದಲ್ಲಿಯೂ ತುರುಸಿನ ಪ್ರಚಾರ ಆರಂಭವಾಗಿದೆ. ಇದೀಗ ಚುನಾವಣಾ ಪ್ರಚಾರ ದೇಶದ ಗಡಿಯನ್ನು ದಾಟಿ ವಿದೇಶಿ ನೆಲಕ್ಕೂ ವ್ಯಾಪಿಸಿರುವುದು ವಿಶೇಷವಾಗಿದೆ.

ಹೈದರಾಬಾದ್‌ ಕರ್ನಾಟಕದ ಬಹುತೇಕ ಕ್ಷೇತ್ರಗಳ ಶಾಸಕರು, ತಮ್ಮ ಕ್ಷೇತ್ರಗಳಿಗಿಂತ ಹೆಚ್ಚಾಗಿ ಬೆಂಗಳೂರು, ಹೈದರಾಬಾದ್‌, ಪುಣೆ, ಮುಂಬೈನಂತಹ ಮಹಾನಗರಗಳಲ್ಲಿಯೇ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಬಹುತೇಕ ಮತದಾರರು ಮಹಾನಗರಗಳಿಗೆ ಗುಳೆ ಹೋಗಿರುವುದೇ ಇದಕ್ಕೆ ಕಾರಣ. ಇದೇ ಮಾದರಿಯಲ್ಲಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಹಿಯುದ್ದೀನ್‌ ಬಾವ, ಇದೀಗ ವಿದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಮಂಗಳೂರು ಶಾಸಕ ಯು.ಟಿ.ಖಾದರ್‌, ಬಂಟ್ವಾಳ ಶಾಸಕ ಬಿ.ರಮಾನಾಥ ರೈ, ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರೂ ಜೆಡ್ಡಾ

ದಲ್ಲಿದ್ದು, ಎಲ್ಲರಿಗೂ ಭರ್ಜರಿ ಸ್ವಾಗತ ಲಭಿಸಿದೆ.

ಕರಾವಳಿ ಭಾಗದ ಸಾಕಷ್ಟು ಜನರು ಸೌದಿ ಅರೇಬಿಯಾ, ಕುವೈತ್‌, ಬಹರೇನ್‌, ಕತಾರ್‌, ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದು, ಈ ನಾಲ್ವರೂ ಪ್ರತಿನಿಧಿಸುವ ಕ್ಷೇತ್ರಗಳ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಮತದಾರರನ್ನು ಓಲೈಸಲು ಇದೀಗ ಪ್ರಯತ್ನ ನಡೆದಿರುವುದರ ಬಗ್ಗೆ ಜಾಲತಾಣಗಳಲ್ಲಿ ಚರ್ಚೆ ನಡೆಯತೊಡಗಿದೆ.

ಸೌದಿ ಅರೇಬಿಯಾದ ಜೆಡ್ಡಾದ ಇಂಪಾಲಾ ಗಾರ್ಡನ್‌ನಲ್ಲಿ ಇದೇ 6ರಂದು ಸಂಜೆ 4 ಗಂಟೆಗೆ ‘ಮತ್ತೊಮ್ಮೆ ಬಾವಾಕಾ’ ಎನ್ನುವ ಕಾರ್ಯಕ್ರಮ

ಏರ್ಪಡಿಸಲಾಗಿತ್ತು. ಈ ಕುರಿತು ಬ್ಯಾನರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬ್ಯಾನರ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಚಿಹ್ನೆಯನ್ನೂ ಹಾಕಲಾಗಿದೆ. ಮೆಕ್ಕಾ ಪ್ರವಾಸದ ನೆಪದಲ್ಲಿ, ಸೌದಿ ಅರೇಬಿಯಾದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಶಾಸಕ ಬಾವ ನಡೆಸಿದ್ದಾರೆ.

ಪ್ರಚಾರ ಸಭೆಯ ವಿಡಿಯೊ ತುಣುಕೊಂದು ಬಾವ ಅವರ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ಲೋಡ್‌ ಆಗಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ ಅವರ ಭಾವಚಿತ್ರಗಳನ್ನು ಒಳಗೊಂಡ ಕಾಂಗ್ರೆಸ್‌ ಪಕ್ಷದ ಬೃಹತ್‌ ಬ್ಯಾನರ್‌, ಬಂಟಿಂಗ್‌ಗಳನ್ನು ಹಾಕಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.