ನೃತ್ಯ ವೈಭವದಲ್ಲಿ ಮಿಂದೆದ್ದ ಪ್ರೇಕ್ಷಕರು

ಮಂಗಳವಾರ, ಮಾರ್ಚ್ 19, 2019
21 °C
ಮನಸೆಳೆದ ಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನದ ಮಕ್ಕಳ ನೃತ್ಯ ರೂಪಕ

ನೃತ್ಯ ವೈಭವದಲ್ಲಿ ಮಿಂದೆದ್ದ ಪ್ರೇಕ್ಷಕರು

Published:
Updated:
ನೃತ್ಯ ವೈಭವದಲ್ಲಿ ಮಿಂದೆದ್ದ ಪ್ರೇಕ್ಷಕರು

ಚಾಮರಾಜನಗರ: ಇಳಿಸಂಜೆಯ ತಂಪು ವಾತಾವರಣದಲ್ಲಿ ವೇದಿಕೆಯ ಮೇಲಿ ಅತ್ತಿಂದಿತ್ತ ಬಣ್ಣ–ಬಣ್ಣದ ವಸ್ತ್ರ ಧರಿಸಿ ಓಡಾಡುತ್ತಿರುವ ಚಿಣ್ಣರು. ಮತ್ತೊಂದೆಡೆ, ವೇದಿಕೆಯ ಮೇಲೆ ನಾಟ್ಯ ವಿದ್ವಾಂಸರು ಹಾಗೂ ತಂಡದ ನೃತ್ಯ ವೈಭವ. ಚಪ್ಪಾಳೆ ಹೊಡೆಯುತ್ತಾ ಖುಷಿ ಪಡುತ್ತಿರುವ ಪ್ರೇಕ್ಷಕರು...

– ಇವೆಲ್ಲವೂ ಮುಪ್ಪುರಿಗೊಂಡಿದ್ದು ನಗರದ ಸೇವಾ ಭಾರತಿ ಶಾಲೆಯ ಆವರಣದಲ್ಲಿ ಭಾನುವಾರ ಶ್ರೀ ಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ನಟರಾಜ್ಯೋತ್ಸವ ಕಾರ್ಯಕ್ರಮದಲ್ಲಿ.ಮೊದಲಿಗೆ ನಾಟ್ಯ ವಿದ್ವಾನ್‌ ಅನಿಲ್‌ ಅಯ್ಯರ್‌ ಅವರು ಆಭೋಗಿ ರಾಗದ ಆದಿತಾಳದ ವರ್ಣದೊ೦ದಿಗೆ ಪಟ್ಟ೦ ಸುಬ್ರಮಣ್ಯ ಅಯ್ಯರ್ ಅವರ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.

ನ೦ತರ, ಬೆಂಗಳೂರಿನ ಶ್ರೀ ಶಿವೋಹಂ ನೃತ್ಯ ಶಾಲೆಯ ವಿದ್ಯಾರ್ಥಿನಿಯರು ‘ಮಹಾ ಗಣಪತಿ೦’ ನೃತ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಬಳಿಕ, ಮೈಸೂರಿನ ಶ್ರೀನಿಮಷಾಂಭ ನೃತ್ಯ ಶಾಲೆಯ ನಾಟ್ಯ ವಿದ್ವಾನ್‌ ಶ್ರೀಧರ್‌ ಜೈನ್‌ ಮತ್ತು ತಂಡ ಹಾಗೂ ಶ್ರೀಶಾರದಾ ಪ್ರದರ್ಶಕ ಕಲೆಗಳ ಪ್ರತಿಷ್ಠಾನದ ಮಕ್ಕಳ ನೃತ್ಯರೂಪಕವನ್ನು ಕಲಾ ರಸಿಕರು ಕಣ್ಮನಗಳಲ್ಲಿ ತು೦ಬಿಕೊ೦ಡರು.

ಮಹಿಳೆಯರು ನೃತ್ಯ ಕಲಿಯಿರಿ: ‘ಇಂದಿನ ವೇಗದ ಜೀವನದಲ್ಲಿ ಮಹಿಳೆಯರು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮಹಿಳೆಯರು ನೃತ್ಯ ಕಲೆಯನ್ನು ಕಲಿಯಬೇಕು. ಇದರಿಂದ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ’ ಎಂದು ಮೈಸೂರಿನ ನೃತ್ಯಗಿರಿ ನಿರ್ದೇಶಕಿ ಹಾಗೂ ನಾಟ್ಯ ವಿದುಷಿ ಕೃಪಾಫಡ್ಕೆ ಸಲಹೆ ನೀಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಲೆ ಕೇವಲ ವಿಲಾಸಕ್ಕೆ ಅಲ್ಲ. ಅದು ಆತ್ಮ ವಿಕಾಸಕ್ಕೆ ಅವಶ್ಯಕವಾಗಿದೆ. ಆರೋಗ್ಯದ ದೃಷ್ಟಿಯಿಂದ ನೃತ್ಯ ಕಲೆಯನ್ನು ಕಲಿಯಬೇಕು. ಮಾನಸಿಕ ನೆಮ್ಮದಿಗಾಗಿ ಸಂಗೀತ ಕಲಿಕೆ ಮುಖ್ಯವಾಗಿದೆ. ಹಾಗಾಗಿ, ಕಲೆಯನ್ನು ಕಲಿಯುವತ್ತ ಎಲ್ಲರು ಮುಂದಾಗಬೇಕು’ ಎಂದು ತಿಳಿಸಿದರು.

ಸಿದ್ಧಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಕಲೆ ಮತ್ತು ಸಂಸ್ಕೃತಿಯು ದೇಶದಲ್ಲಿ ಪ್ರಾಧ್ಯಾ ನತೆಯನ್ನು ಪಡೆದಿದೆ. ಜಿಲ್ಲೆಯಲ್ಲಿಯೂ ಜನಪದ ಸಾಹಿತ್ಯ ಬೇರುಬಿಟ್ಟಿದೆ. ಇವುಗಳನ್ನು ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕು. ಮಕ್ಕಳಿಗೆ ಸಂಸ್ಕೃತಿಕ ಮೌಲ್ಯವನ್ನು ಬಿಂಬಿಸುವಂತ ಕಲೆಯನ್ನು ಕಲಿಸಬೇಕು ಎಂದರು.

ನಿಮಿಷಾಂಭ ನೃತ್ಯ ಶಾಲೆಯ ವಿದ್ವಾನ್‌ ಶ್ರೀಧರ್‌ಜೈನ್‌ ಮಾತನಾಡಿ, ‘ನೃತ್ಯ, ಸಂಗೀತ ಕಲೆಯನ್ನು ಕಲಿಯಲು ಒಂದು ನಿಗದಿತ ಸಮಯಬೇಕು. ಅದಕ್ಕಾಗಿ ತಾಳ್ಮೆ ಮತ್ತು ಶ್ರದ್ಧೆಯಿಂದ ಕಲಿಬೇಕು’ ಎಂದು ಸಲಹೆ ನೀಡಿದರು.

ಈ ವೇಳೆ ಮೈಸೂರಿನ ನೃತ್ಯಗಿರಿ ನಿರ್ದೇಶಕಿ ಹಾಗೂ ನಾಟ್ಯ ವಿದೂಷಿ ಕೃಪಾಫಡ್ಕೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೀಲು ಮತ್ತು ಮೂಳೆ ತಜ್ಞ ಡಾ.ಸಿ.ವಿ.ಮಾರುತಿ, ಸೇವಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್, ಶಾರದಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ವಿ.ಮಹೇಶ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry