ಮಂಗಳವಾರ, ಆಗಸ್ಟ್ 4, 2020
26 °C

ಮಿಂಚಿನ ನೋಂದಣಿಗೆ ಉತ್ತಮ ಸ್ಪಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಂಚಿನ ನೋಂದಣಿಗೆ ಉತ್ತಮ ಸ್ಪಂದನೆ

ಚಿಕ್ಕಬಳ್ಳಾಪುರ: ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗ ಭಾನುವಾರ ಹಮ್ಮಿಕೊಂಡಿದ್ದ ‘ಮಿಂಚಿನ ನೋಂದಣಿ’ ಎಂಬ ವಿಶೇಷ ಅಭಿಯಾನಕ್ಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ 1,255 ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳು ಮತಗಟ್ಟೆಯಲ್ಲೇ ಅರ್ಹ ಮತದಾರರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಲು ಸಹಾಯ ನೀಡಲಿದ್ದಾರೆ’ ಎಂದು ತಿಳಿಸಿದರು.

‘18 ವಯಸ್ಸು ದಾಟಿದ ಮತದಾರರು, ಪಟ್ಟಿಯಲ್ಲಿ ಹೆಸರು ನೋಂದಾಯಿಸಿದವರು ತಮ್ಮ ಮನೆಯ ಸಮೀಪದಲ್ಲಿಯೇ ಇರುವ ಮತಗಟ್ಟೆಗೆ ಹೋಗಿ ಸುಲಭವಾಗಿ ಹೆಸರು ಸೇರಿಸಿ ಮತದಾನದ ಗುರುತಿನ ಚೀಟಿ ಪಡೆಯಬೇಕು. ಏಪ್ರಿಲ್‌ 14 ರವರೆಗೆ ಈ ಅವಕಾಶ ಕಲ್ಪಿಸಲಾಗಿದೆ. ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಅರ್ಹ ಅಭ್ಯರ್ಥಿಗೆ ಮತದಾನ ಮಾಡುವ ಮೂಲಕ ದೇಶದ ಪ್ರಗತಿಗೆ ಕೈ ಜೋಡಿಸಬೇಕು’ ಎಂದು ಹೇಳಿದರು.

‘ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರಿಸಿದಾಗ ಮಾತ್ರ ಕಾನೂನು ಬದ್ಧವಾಗಿ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ ಹಾಕಿ ಉತ್ತಮ ಸರ್ಕಾರ ರಚಿಸಬಹುದು. ಮತದಾನಕ್ಕೆ ಅರ್ಹರಾದವರೂ ಮತದಾರರ ಪಟ್ಟಿಗೆ ಸೇರಿಸದಿದ್ದರೆ ದೇಶಕ್ಕೆ ಮಾಡುವ ದ್ರೋಹ. ನನ್ನ ಜೀವನದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ಮತ ಚಲಾಯಿಸುವ ಮೂಲಕ ನನ್ನ ಹಕ್ಕನ್ನು ನಿರೂಪಿಸುತ್ತೇನೆ’ ಎಂದು ಹೊಸದಾಗಿ ಸೇರ್ಪಡೆಗೊಂಡ ದೊಡ್ಡ ಭಜನೆ ರಸ್ತೆಯ ನಿವಾಸಿ ವಿದ್ಯಾರ್ಥಿನಿ ಡಿ.ದಿವ್ಯಾ ತಿಳಿಸಿದರು.

ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ನಗರಸಭೆಯ ಆಯುಕ್ತ ಉಮಾಕಾಂತ್ ಉಪಸ್ಥಿತರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.