ಸೋಮವಾರ, ಡಿಸೆಂಬರ್ 9, 2019
22 °C
ಜಿಲ್ಲೆಯಾದ್ಯಂತ ಮಿಂಚಿನ ನೋಂದಣಿ ಅಭಿಯಾನ ಭರಾಟೆ: ಮತದಾನ ಜಾಗೃತಿ

ವಿವಿಧೆಡೆ ಹೊಸ ಮತದಾರರ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧೆಡೆ ಹೊಸ ಮತದಾರರ ಸೇರ್ಪಡೆ

ರಾಯಚೂರು: ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಆಗದಿರುವವರ ನೋಂದಣಿಗಾಗಿ ಜಿಲ್ಲೆಯಾದ್ಯಂತ ಭಾನುವಾರ ಮಿಂಚಿನ ನೋಂದಣಿ ಅಭಿಯಾನ ನಡೆಸಲಾಯಿತು.

ಪ್ರತಿ ಮತಗಟ್ಟೆ ಕೇಂದ್ರದಲ್ಲೂ ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಮತದಾನ ಮಾಡುವಂತೆ ಜಾಗೃತಿಯನ್ನು ನಡೆಸಲಾಯಿತು. ಚುನಾವಣೆ ಜವಾಬ್ದಾರಿ ವಹಿಸಿಕೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ರಜೆಯಿದ್ದರೂ ತುಂಬಾ ಕ್ರಿಯಾಶೀಲರಾಗಿ ಅಭಿಯಾನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಜಿಲ್ಲೆಯಾದ್ಯಂತ 1,805 ಮತದಾನ ಕೇಂದ್ರಗಳಲ್ಲಿ ನಡೆದ ಅಭಿಯಾನಕ್ಕೆ ನೋಂದಣಿ ಮಿಂಚಿನ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.ಏ.14 ರವರೆಗೆ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ಇರುವುದನ್ನು ಮನವರಿಕೆ ಮಾಡಲಾಯಿತು.

18 ವರ್ಷದ ಯುವ ಜನಾಂಗವು ಅಗತ್ಯ ದಾಖಲಾತಿಗಳೊಂದಿಗೆ ಆಗಮಿಸಿ ಅರ್ಜಿ ಭರ್ತಿ ಮಾಡಿ, ಮತದಾರರ ಪಟ್ಟಿಗೆ ಸೇರುವಂತೆ ಜನಜಾಗೃತಿ ಮೂಡಿಸಲಾಯಿತು. ನಗರದ ಹರಿಜನವಾಡದ ಗಾಜಗಾರ ಪೇಟೆ ಶಾಲೆ, ಎನ್‌ಜಿಓ ಸ್ಕೂಲ್, ಜವಾಹರ ನಗರ, ಮಡ್ಡಿಪೇಟೆ ಶಾಲೆ, ಮುನ್ನೂರುವಾಡಿ ಸೇರಿದಂತೆ ಇನ್ನಿತರ ವಿವಿಧ ಶಾಲೆಗಳಲ್ಲಿ ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಮತದಾರರ ಹೆಸರು ನೋಂದಣಿಗೆ ಮಿಂಚಿನ ಅಭಿಯಾನ ನಡೆಯಿತು.

ಜಿಲ್ಲೆಯಾದ್ಯಂತ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಈ ಅಭಿಯಾನ ನಡೆಯಿತು. ಇದೇ ಮೊದಲ ಬಾರಿ ಜಿಲ್ಲೆಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಮಿಂಚಿನ ಅಭಿಯಾನ ಹಮ್ಮಿಕೊಂಡಿದ್ದು ಗಮನ ಸೆಳೆವಂತಿತ್ತು. ಸಾಕಷ್ಟು ಯುವ ಜನಾಂಗವು ಮತದಾರರ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಮಿಂಚಿನ ಅಭಿಯಾನದ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು. ಯಾರಾದರೂ 18 ವರ್ಷ ತಲುಪಿದವರು ಕಂಡು ಬಂದಲ್ಲಿ ಕೂಡಲೇ ಹೆಸರು ನೋಂದಣಿ ಮಾಡಿಕೊಂಡು ಮತದಾನದ ಹಕ್ಕು ಚಲಾಯಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.ರಾಯಚೂರು ನಗರದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಿಂದ ಭಾನುವಾರ ರೋಡ್‌ ಶೋ ಮಾಡಲಾಯಿತು.

ಡಾ.ಬಾಬು ಜಗಜೀವನರಾಂ, ಡಾ.ಅಂಬೇಡ್ಕರ್‌ ವೃತ್ತ, ನಗರಸಭೆ, ತಿನ್‌ ಕಂದೀಲ್‌, ಪಟೇಲ್‌ ವೃತ್ತ, ಚಂದ್ರಮೌಳೇಶ್ವರ ವೃತ್ತ, ಮಹಾತ್ಮಗಾಂಧಿ ವೃತ್ತ, ಬಸವೇಶ್ವರ ವೃತ್ತ, ಎಲ್‌ಐಸಿ ಕಚೇರಿ ಮೂಲಕ ಬಸ್‌ ನಿಲ್ದಾಣದವರೆಗೂ ಜಾಥಾ ನಡೆಸಲಾಯಿತು. ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮತ ನೀಡುವಂತೆ ಘೋಷಣೆಗಳನ್ನು ಕೂಗಿದರು.

**

ಜಿಲ್ಲೆಯ ಎಲ್ಲ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಮಿಂಚಿನ ನೋಂದಣಿ ಅಭಿಯಾನ ಕೈಗೊಳ್ಳಲಾಗಿದೆ. ಈ ಮಾಹಿತಿಯನ್ನು ವ್ಯಾಟ್ಸ್‌ಆ್ಯಪ್‌ಗೆ ಕಳುಹಿಸುತ್ತಿದ್ದಾರೆ – ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ.

**

 

ಪ್ರತಿಕ್ರಿಯಿಸಿ (+)