ಶುಕ್ರವಾರ, ಡಿಸೆಂಬರ್ 6, 2019
25 °C

ಬೇಸಿಗೆಗೆ ಆಹಾರ ಆರೈಕೆ

Published:
Updated:
ಬೇಸಿಗೆಗೆ ಆಹಾರ ಆರೈಕೆಕಲ್ಲಂಗಡಿ ಹಣ್ಣು


ಇದರಲ್ಲಿ ಶೇ 90ರಷ್ಟು ನೀರಿನ ಅಂಶವಿರುತ್ತದೆ. ದಣಿವಾರಿಸುವುದರ ಜತೆಗೆ ದೇಹದ ಉಷ್ಣತೆಯನ್ನೂ ಇದು ತಗ್ಗಿಸುತ್ತದೆ. ಕಿಡ್ನಿ ಮತ್ತು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ನೋಡಿಕೊಳ್ಳುತ್ತದೆ.

*

ಮಜ್ಜಿಗೆ

ಉತ್ತಮ ಜೀರ್ಣಕಾರಿ. ಪದೇಪದೇ ನೀರು ಕುಡಿಯಲು ಬೇಸರವಾದರೆ, ನೀರಿನ ಬದಲಿಗೆ ಮಜ್ಜಿಗೆ ಸೇವಿಸಬಹುದು. ದೇಹವನ್ನು ತಂಪುಗೊಳಿಸುವುದಲ್ಲದೇ ಅಜೀರ್ಣ, ಹೊಟ್ಟೆನೋವಿಗೂ ಪರಿಣಾಮಕಾರಿ. ದೇಹವನ್ನು ನಿರ್ಜಲೀಕರಣದಿಂದ ತಡೆಯುತ್ತದೆ. ಆಸಿಡಿಟಿಯಿಂದ ಬಳಲುತ್ತಿರುವವರಿಗೆ ರಾಮಬಾಣ. ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ.

*

ಕಬ್ಬಿನ ರಸ

ಹಲವು ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಇರುವ ಕಬ್ಬಿನರಸಕ್ಕೆ ಬೇಸಿಗೆಯಲ್ಲಿ ಬೇಡಿಕೆ ಹೆಚ್ಚು. ಕಾಮಾಲೆ, ಮೂತ್ರಪಿಂಡದ ಕಲ್ಲಿನ ಸಮಸ್ಯೆ ಮತ್ತಿತರ ಆರೋಗ್ಯ ತೊಂದರೆಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ.

*ಮಾವು

ಜೀರ್ಣಶಕ್ತಿ ವೃದ್ಧಿಸುವ ಗುಣ ಹೊಂದಿದೆ. ಕಬ್ಬಿಣಾಂಶ, ನಾರಿನಾಂಶ ಹೆಚ್ಚಿನ ಪ್ರಮಾಣದಲ್ಲಿದೆ. ವಿಟಮಿನ್–ಸಿ ಸಹ ಗಣನೀಯ ಪ್ರಮಾಣದಲ್ಲಿದೆ.

*

ಸೌತೇಕಾಯಿ

ಇದರಲ್ಲೂ ನೀರಿನಾಂಶ ಹೆಚ್ಚು. ದೇಹದ ನಿರ್ಜಲೀಕರಣ ತಡೆಯುತ್ತದೆ. ಶರೀರವನ್ನು ತಂಪುಗೊಳಿಸಿ ಮನಸ್ಸಿಗೆ ಉತ್ಸಾಹವನ್ನು ತುಂಬುತ್ತದೆ. ಹೊಟ್ಟೆಯುರಿ, ಎದೆಯುರಿಗಳನ್ನು ಶಮನಗೊಳಿಸುತ್ತದೆ. ಪಚನಕ್ರಿಯೆಯನ್ನು ಸುಗಮಗೊಳಿಸುತ್ತದೆ. ಮಲಬದ್ಧತೆಯಿಂದ ಬಳಲುವವರಿಗೆ ಉಪಯುಕ್ತ. ಚರ್ಮದ ಉರಿಗೆ ಸೌತೆಕಾಯಿ ರಸ ಪ್ರಯೋಜನಕಾರಿ. ಕಣ್ಣುರಿ ಅಥವಾ ನೋವು ಇದ್ದರೆ ಕಣ್ಣು ಮುಚ್ಚಿ, ರೆಪ್ಪೆಯ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಟ್ಟಾರೆ ತಂಪು ಅನುಭವ ಆಗುತ್ತದೆ.

*

ಜೇನು

ಕೊಬ್ಬು, ನಾರು, ಪ್ರೊಟೀನ್, ವಿಟಮಿನ್–ಸಿ, ಕಬ್ಬಿಣ ಹಾಗೂ ಶರ್ಕರಗಳು ಹೇರಳವಾಗಿವೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಬಾಯಿಹುಣ್ಣು, ಮಲಬದ್ಧತೆ, ಚರ್ಮವ್ಯಾಧಿ, ಮೂತ್ರ ಸಂಬಂಧಿ ಸಮಸ್ಯೆಗಳು, ಕೆಮ್ಮು ಹಾಗೂ ಗಂಟಲು ಸಂಬಂಧಿ ರೋಗಗಳಿಗೆ ಔಷಧವಾಗಿಯೂ ಒದಗುತ್ತದೆ.

*

ಕರಬೂಜ

ಅತಿ ತಾಪಮಾನದಿಂದ ದೇಹದಲ್ಲಿ ಎದುರಾಗುವ ನಿರ್ಜಲೀಕರಣವನ್ನು ತಡೆಯುತ್ತದೆ. ಇದರಲ್ಲಿ ಕರಗುವ ನಾರು, ಪೊಟ್ಯಾಶಿಯಂ, ಕಬ್ಬಿಣಾಂಶ, ಫೋಲಿಕ್‌ ಆಮ್ಲ, ವಿಟಮಿನ್‌–ಎ, ಸಿ ಹೆಚ್ಚಿನ ಪ್ರಮಾಣದಲ್ಲಿ ಇದೆ. ಆಯಾಸ ತಡೆಯುವ ಶಕ್ತಿ ಹೊಂದಿದೆ.

*ನಿಂಬೆ ಹಣ್ಣು

ನಿಂಬೆರಸಕ್ಕೆ ಸಕ್ಕರೆ ನೀರು ಬೆರೆಸಿ ಕುಡಿದರೆ ಅತಿ ಬಾಯಾರಿಕೆ ನಿವಾರಣೆಯಾಗುತ್ತದೆ. ಅತಿಸಾರ, ಆಮಶಂಕೆ ತಡೆಯುವ ಶಕ್ತಿಯೂ ನಿಂಬೆ ಪಾನಕಕ್ಕೆ ಇದೆ. ಅಜೀರ್ಣ, ಎದೆಯುರಿ, ಮಲಬದ್ಧತೆ ನಿವಾರಣೆಗೂ ಸಹಕಾರಿ. ಉರಿಮೂತ್ರವಾದಾಗ ನಿಂಬೆರಸ ಮತ್ತು ಜೇನುತುಪ್ಪವನ್ನು ನೀರಿನೊಂದಿಗೆ ಸೇರಿಸಿ ಕುಡಿಯಬೇಕು. ದೇಹದ ಉಷ್ಣತೆ ಹೆಚ್ಚಾಗಿ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ಕಾಯಿಸಿ ಆರಿಸಿದ ನೀರಿಗೆ ಸಕ್ಕರೆ, ನಿಂಬೆರಸ ಬೆರೆಸಿ ಸೇವಿಸುವುದು ಒಳ್ಳೆಯದು. ಹೊಟ್ಟೆ ನೋಯುತ್ತಿದ್ದರೆ ನೀರಿಗೆ ನಿಂಬೆರಸ, ಚಿಟಿಕೆ ಉಪ್ಪು ಸೇರಿಸಿ ಕುಡಿಯಬೇಕು.

*

ಪುದೀನಾ ರಸ

ಪುದೀನಾವನ್ನು ಮನೆ ಮದ್ದಾಗಿ ಬಳಸಲಾಗುತ್ತದೆ. ಪುದೀನಾ ರಸವು ಕೆಮ್ಮು, ನೆಗಡಿ, ಹೊಟ್ಟೆಯುರಿ, ಅಜೀರ್ಣ, ಜಂತುಹುಳು ಮತ್ತು ಗ್ಯಾಸ್ಟ್ರಿಕ್‌ಗೆ ರಾಮಬಾಣ. ನಿತ್ಯವೂ 4 ರಿಂದ 5 ಪುದೀನಾ ಎಲೆ ಅಗಿದು ತಿಂದರೆ, ಜೀರ್ಣಶಕ್ತಿ ಹೆಚ್ಚುತ್ತದೆ. ಹಲ್ಲುಗಳ ಆರೋಗ್ಯಕ್ಕೂ ಇದು ಒಳ್ಳೆಯದು.

ಹೀಗೆ ಮಾಡಿ

*ಬಿಸಿಲಿನ ಝಳ ಹೆಚ್ಚಾಗಿದ್ದಾಗ (ಬೆಳಿಗ್ಗೆ 11ರಿಂದ 4 ಗಂಟೆ) ಸಂಚರಿಸುವುದು ಕಡಿಮೆ ಮಾಡಿ. ಈ ಅವಧಿಯಲ್ಲಿ ಸಾಧ್ಯವಾದಷ್ಟೂ ಮನೆ ಅಥವಾ ಕಚೇರಿಯಿಂದಲೇ ಕೆಲಸ ನಿರ್ವಹಿಸಲು ಪ್ರಯತ್ನಿಸಿ

*ಬಿಸಿಲು ಹೆಚ್ಚಿರುವಾಗ ಮನೆ ಅಥವಾ ಕಚೇರಿಯಿಂದ ಹೊರಗೆ ಹೋಗಬೇಕಾದಾರೆ ಕೊಡೆ ಬಳಸಿ ಅಥವಾ ಟೋಪಿ ಧರಿಸಿ.

*ಕಾದು ಆರಿದ ಅಥವಾ ಉಗುರು ಬೆಚ್ಚಗಿನ ನೀರಿನ ಸೇವನೆ ಒಳ್ಳೆಯದು.

*ಫ್ರಿಜ್‌ನಿಂದ ಹೊರತೆಗೆದ ಪದಾರ್ಥಗಳನ್ನು ವಾತಾವರಣದ ತಾಪಮಾನಕ್ಕೆ ಹೊಂದಿಕೊಂಡ

ನಂತರವೇ ಸೇವಿಸಿ.

*ಸೂರ್ಯನ ತಾಪದಿಂದ ಚರ್ಮವನ್ನು ರಕ್ಷಿಸಲು ತುಂಬು ತೋಳಿನ ತೆಳುಬಟ್ಟೆಗಳು ಧರಿಸಿ. ಹತ್ತಿ ಬಟ್ಟೆ ಸೂಕ್ತ.

* ದಿನಕ್ಕೊಂದು ಎಳನೀರು ಕುಡಿಯಿರಿ.

*ಹೆಚ್ಚು ನೀರು ಕುಡಿದಷ್ಟೂ ಒಳ್ಳೆಯದು. ನೀರಿಗೆ ನಿಂಬೆ ರಸ ಮತ್ತು ಜೇನು ಬೆರೆಸಿ ಕುಡಿಯಿರಿ. ಬೆಲ್ಲ ಬೆರೆಸಿದ ನೀರನ್ನೂ ಸೇವಿಸಬಹುದು.

*ಸೌತೆಕಾಯಿ, ಹೆಸರುಬೇಳೆ ಕೋಸಂಬರಿ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ.

*ಗಸಗಸೆ ಪಾಯಸ, ಹೆಸರುಬೇಳೆ ಪಾಯಸವೂ ದೇಹವನ್ನು ತಂಪಾಗಿಡುತ್ತವೆ.

*ಮಿತ ಆಹಾರ ಸೇವನೆ ಒಳ್ಳೆಯದು. ಹೊಟ್ಟೆ ಬಿರಿಯುವಷ್ಟು ಊಟ ಮಾಡಬೇಡಿ. ಇದರಿಂದ ಅಜೀರ್ಣದ ತೊಂದರೆ ಕಾಣಿಸಿಕೊಳ್ಳುತ್ತದೆ.

*ರಾತ್ರಿ ಮಲಗುವಾಗ ಮನೆಯ ಯಾವುದಾದರೂ ಒಂದೆರಡು ಕಿಟಕಿಗಳು ತೆರೆದಿರುವಂತೆ ನೋಡಿಕೊಳ್ಳಿ. ಆ ಮೂಲಕ ತಂಪಾದ ಗಾಳಿ ಮನೆಯೊಳಗೆ ಬಂದು ಧಗೆಯನ್ನು ಕಡಿಮೆ ಮಾಡುತ್ತದೆ.

ಹೀಗೆ ಮಾಡಬೇಡಿ

* ಬಿಸಿಲಿನಲ್ಲಿ ಓಡಾಡಿಕೊಂಡು ಮನೆಗೆ ಬಂದ ತಕ್ಷಣ ಫ್ರಿಜ್‌ನಲ್ಲಿರುವ ನೀರು, ಹಣ್ಣಿನ ರಸ, ಮಜ್ಜಿಗೆ, ಮೊಸರು, ಆಹಾರ ಪದಾರ್ಥವನ್ನು ಸೇವಿಸಬಾರದು.

* ಹೆಚ್ಚು ಬಿಸಿಯಿರುವ ಆಹಾರವನ್ನು ಒಮ್ಮೆಗೆ ಸೇವಿಸಬೇಡಿ. ಇದು ದಗೆ ಮತ್ತು ಸೆಕೆಯನ್ನು ಹೆಚ್ಚಿಸುತ್ತದೆ.

* ಜೋರಾಗಿ ಬೀಸುವ ಫ್ಯಾನಿನ ಕೆಳಗೆ ರಾತ್ರಿಯಿಡಿ ಮಲಗುವುದು ಒಳ್ಳೆಯದಲ್ಲ.

* ಹೆಚ್ಚು ಹುಳಿ, ಖಾರದ ಪದಾರ್ಥಗಳು, ಮಸಾಲೆ ಹೆಚ್ಚಾಗಿರುವ ಆಹಾರದ ಬಳಕೆಗೆ ಕಡಿವಾಣ ಇರಲಿ.

ಪ್ರತಿಕ್ರಿಯಿಸಿ (+)