ಭಾನುವಾರ, ಡಿಸೆಂಬರ್ 15, 2019
25 °C
ಜಿಲ್ಲೆಯಲ್ಲಿ ಗರಿಗೆದರಿದ ಶುಭ ಸಮಾರಂಭಗಳು

ಏರುಗತಿಯಲ್ಲಿ ತರಕಾರಿಗಳ ಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರುಗತಿಯಲ್ಲಿ ತರಕಾರಿಗಳ ಧಾರಣೆ

ಚಾಮರಾಜನಗರ: ಮದುವೆ, ಗೃಹಪ್ರವೇಶ ಮೊದಲಾದ ಶುಭ ಕಾರ್ಯಕ್ರಮಗಳು ಆರಂಭವಾಗಿರುವ ಬೆನ್ನಲ್ಲೇ ತರಕಾರಿಗಳ ಬೆಲೆಗಳೂ ಏರಿಕೆ ಕಂಡಿವೆ.

ಸಾಮಾನ್ಯವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ಶುಭ ಸಮಾರಂಭ ನಡೆ ದರೂ ತರಕಾರಿಗಳಿಗಾಗಿ ನಗರದ ತರಕಾರಿ ಮಾರುಕಟ್ಟೆಯನ್ನೇ ಜನರು ನೆಚ್ಚಿಕೊಂಡಿದ್ದಾರೆ. ಸಂತೇಮರಹಳ್ಳಿ ಯಲ್ಲಿ ಮಂಗಳವಾರ ಹಾಗೂ ಯಳಂದೂರಿನಲ್ಲಿ ಭಾನುವಾರ ನಡೆಯುವ ಸಂತೆಗಳು ಗುರುವಾರ, ಶುಕ್ರವಾರ, ಶನಿವಾರ, ಭಾನುವಾರಗಳ ಕಾರ್ಯಕ್ರಮಗಳಿಗಾಗಿ ತರಕಾರಿ  ಖರೀದಿಗೆ ಮಾರುಕಟ್ಟೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಹೀಗಾಗಿ, ಸಹಜವಾಗಿಯೇ ದರ ಏರಿಕೆಯಾಗುತ್ತಿದೆ.

ಟೊಮೆಟೊ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 12ರಲ್ಲಿ ಇದೆ. ಇದು ಕಳೆದ ವಾರ ₹ 6 ಇತ್ತು. ₹ 20ರಲ್ಲಿದ್ದ ಬೀನ್ಸ್ ದರ ಈಗ ₹ 40ಆಗಿದೆ. ₹ 10ರಲ್ಲಿದ್ದ  ಕ್ಯಾರೆಟ್ ₹ 20 ಆಗಿದೆ. ₹ 30ರಲ್ಲಿದ್ದ ಬೆಂಡೆ ₹ 40 ಆಗಿದೆ.

ಇದ‌ಕ್ಕೆ ಪೂರಕವಾಗಿ ಸಗಟು ಮಾರುಕಟ್ಟೆ ಬೆಲೆ ಅಲ್ಪ ಏರಿಕೆ ಕಂಡಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ ₹ 2 ಇದ್ದ ದರ ಇದೀಗ  ₹ 5 ತಲುಪಿದೆ. ₹ 20 ಇದ್ದ ಬೀನ್ಸ್ ದರ ₹ 30 ಆಗಿದೆ. ₹ 10 ಇದ್ದ ಹಸಿರುಮೆಣಸಿನ  ಕಾಯಿ ₹ 15 ಆಗಿದೆ.

ಮೊಟ್ಟೆ ಬೆಲೆಯಲ್ಲಿ ಚೇತರಿಕೆ ಇಲ್ಲ: ಕೋಳಿ ಮೊಟ್ಟೆ ಧಾರಣೆ ಈ ವಾರವೂ ಚೇತರಿಕೆ ಕಂಡಿಲ್ಲ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ಒಂದು ಕೋಳಿ ಮೊಟ್ಟೆಗೆ ₹ 3.28 ಇದ್ದದ್ದು, ಇದೀಗ ₹ 3.33 ಆಗಿದೆ. ಕೇವಲ 5 ಪೈಸೆಯಷ್ಟು ಹೆಚ್ಚಳ ಮೊಟ್ಟೆ ಉತ್ಪಾದಕರಿಗೆ ಯಾವುದೇ ಲಾಭವನ್ನು ತಂದು ಕೊಡುತ್ತಿಲ್ಲ.

ಕರ್ನಾಟಕ ಪೌಲ್ಟ್ರಿ ಫಾರ್ಮಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್‌ ದರದಲ್ಲಿ ಯಾವುದೇ ಏರಿಳಿತವಾಗಿಲ್ಲ. ಕಳೆದ ವಾರದಲ್ಲಿದ್ದಂತೆ ಬ್ರಾಯ್ಲರ್ ಕೋಳಿ ದರ ಕೆ.ಜಿಗೆ ₹ 76 ಹಾಗೂ ಬ್ರಾಯ್ಲರ್ ಪೇರೆಂಟ್ ಕೋಳಿ ದರ ಕೆ.ಜಿಗೆ ₹ 72ರಲ್ಲೇ ಮುಂದುವರಿದಿದೆ.

ದುಬಾರಿಯಲ್ಲೇ ಮುಂದುವರಿದ ಮಾವಿನಕಾಯಿ ಕಳೆದೆರಡು ವಾರಗಳಿಂದ ಸಿಗುತ್ತಿರುವ ಮಾವಿನಕಾಯಿ ದರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಕನಿಷ್ಠ ಎಂದರೂ ಒಂದು ಮಾವಿನಕಾಯಿಗೆ ₹ 10 ದರ ಇದೆ. ಕಾಯಿಯ ಗಾತ್ರ ದೊಡ್ಡದಿದ್ದರೆ ₹ 30ರವರೆಗೂ ಬೆಲೆ ಇದೆ.

ಹಣ್ಣುಗಳಲ್ಲಿ ಕಿತ್ತಳೆ ಕೆ.ಜಿಗೆ ₹ 80, ದ್ರಾಕ್ಷಿ ₹ 100, ಸೇಬು ₹ 120 ಹಾಗೂ ದಾಳಿಂಬೆ ₹ 100ರಲ್ಲಿ ಮಾರಾಟವಾಗುತ್ತಿವೆ. ಏಲಕ್ಕಿ ಬಾಳೆಹಣ್ಣು ₹ 40ರಿಂದ 50ರಲ್ಲಿ ಹಾಗೂ ಪಚ್ಚಬಾಳೆ ₹ 30ರ ಆಸುಪಾಸಿನಲ್ಲಿ ಸಿಗುತ್ತಿದೆ.

**

ಈಗ ತರಕಾರಿ ಬೆಲೆ ಸ್ವಲ್ಪ ಏರಿಕೆ ಕಂಡಿದೆ. ಆದರೆ, ಬೆಳೆದಂತ ನಮಗೆ ಸರಿಯಾದ ದರ ಸಿಗುತ್ತಿಲ್ಲ. ಲಾಭವೆಲ್ಲ ಮಧ್ಯವರ್ತಿಗಳ ಪಾಲಾಗುತ್ತಿದೆ – ಪುಟ್ಟನಿಂಗಪ್ಪ,ರೈತ.

**

ಪ್ರತಿಕ್ರಿಯಿಸಿ (+)