ಆಕಾಂಕ್ಷಿಗಳ ತಳಮಳ; ಕಾರ್ಯಕರ್ತರ ಕುತೂಹಲ

7
ತುಮಕೂರು ಗ್ರಾಮಾಂತರಕ್ಕೆ ಮಾತ್ರ ಬಿಜೆಪಿ ಅಭ್ಯರ್ಥಿ ಪ್ರಕಟ

ಆಕಾಂಕ್ಷಿಗಳ ತಳಮಳ; ಕಾರ್ಯಕರ್ತರ ಕುತೂಹಲ

Published:
Updated:

ತುಮಕೂರು: 72 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಮೊದಲಪಟ್ಟಿಯನ್ನು ಪಕ್ಷದ ವರಿಷ್ಠರು ಪ್ರಕಟಿಸುತ್ತಲೇ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದ್ದರೆ ಜಿಲ್ಲೆಯಲ್ಲಿ ಕುತೂಹಲದ ಚರ್ಚೆಗಳು ಆರಂಭವಾಗಿವೆ. ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಎರಡನೇ ಜಿಲ್ಲೆ ತುಮಕೂರು.

ಮೊದಲ ಪಟ್ಟಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಟಿಕೆಟ್‌ಗೆ ಕಾತರಿಸಿದ್ದ ಉಳಿದ ಕ್ಷೇತ್ರದ ಆಕಾಂಕ್ಷಿಗಳಲ್ಲಿ ‘ಟಿಕೆಟ್ ಸಿಗುತ್ತದೆಯೇ’ ಎಂದು ತುದಿಗಾಲಿನಲ್ಲಿ ನಿಂತಿದ್ದರೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಾರ್ಯಕರ್ತರಲ್ಲಿ ಕುತೂಹಲ ಮೂಡಿದೆ.

ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ‘ಪ್ರಬಲ’ ಆಕಾಂಕ್ಷಿಗಳು ಮನೆ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ‘ಬಣ’ ರಾಜಕಾರಣ ಸ್ಪಷ್ಟವಾಗಿಯೇ ಎದ್ದು ಕಾಣುತ್ತದೆ. ತಮ್ಮ ನಾಯಕನಿಗೆ ಟಿಕೆಟ್ ಖಚಿತವಾಗಿ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸುವ ಬೆಂಬಲಿಗರು ಅದಕ್ಕೆ ತಮ್ಮದೇ ಆದ ಕಾರಣಗಳನ್ನು ಮತ್ತು ಬಲಾಬಲವನ್ನು ಮುಂದಿಡುತ್ತಾರೆ.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಆರೇಳು ಕ್ಷೇತ್ರಗಳಲ್ಲಿ ಬಿಜೆಪಿ ಬಲಾಢ್ಯವಾಗಿದೆ. ತಿಪಟೂರಿನಲ್ಲಿ ಬಿ.ಸಿ.ನಾಗೇಶ್, ತುರುವೇಕೆರೆಯಲ್ಲಿ ಮಸಾಲ ಜಯರಾಂ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನುತ್ತವೆ ಬಿಜೆಪಿ ಮೂಲಗಳು. ಇಂತಹ ‘ಖಚಿತ’ ಅಭ್ಯರ್ಥಿಗಳನ್ನೇ ಮೊದಲ ಪಟ್ಟಿಯಲ್ಲಿ ಪ್ರಕಟಿಸದಿರುವುದು ಉಳಿದ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರಲ್ಲಿ ಸಹಜ ಕುತೂಹಲಕ್ಕೆ ಕಾರಣವಾಗಿದೆ.

ತುರುವೇಕೆರೆಯಲ್ಲಿ ‘ಬಣ’ ರಾಜಕಾರಣ ಇದ್ದರೂ ತೀವ್ರವಾಗಿಯೇನೂ ಇಲ್ಲ. ತಿಪಟೂರಿನಲ್ಲಿ ಬಿ.ಸಿ.ನಾಗೇಶ್ ಅದಾಗಲೇ ಪ್ರಚಾರ ನಡೆಸಿದ್ದಾರೆ. ತುಮಕೂರು ನಗರ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಪಾವಗಡ, ಶಿರಾ, ಕೊರಟಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳು ಇದ್ದಾರೆ.

ಹಿರಿಯ ಮುಖಂಡ ಸೊಗಡು ಶಿವಣ್ಣ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್ ಅವರ ನಡುವಿನ ಟಿಕೆಟ್ ಪೈಪೋಟಿಯ ಕಾರಣಕ್ಕೆ ಗಮನ ಸೆಳೆದಿರುವ ಕ್ಷೇತ್ರ ತುಮಕೂರು ನಗರ. ಈ ಟಿಕೆಟ್ ಪೈಪೋಟಿ ರಾಜ್ಯ ಮಟ್ಟದಲ್ಲಿಯೂ ಗಮನ ಸೆಳೆದಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಆಕಾಂಕ್ಷಿಗಳಿಂದ ಬಿಜೆಪಿ ರಾಜ್ಯ ಘಟಕ ಮನವಿ ಸ್ವೀಕರಿಸಿತು. ಆ ಸಭೆಯಲ್ಲಿ ಸೊಗಡು ಶಿವಣ್ಣ, ‘ಈ ಹಿಂದಿನಿಂದಲೂ ನಾನು ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ. ಟಿಕೆಟ್ ನೀಡಿ’ ಎಂದು ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಟಿಕೆಟ್ ಪೈಪೋಟಿ ಜಿಲ್ಲೆಯ ಇತರ ಕ್ಷೇತ್ರಗಳ ಬಂಡಾಯಕ್ಕೂ ನೀರೆರೆಯುವ ಸಂಭವ ಇದೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆ.ಸಿ.ಮಾಧುಸ್ವಾಮಿ ಮತ್ತು ಕಿರಣ್ ಕುಮಾರ್ ಅವರ ನಡುವೆ ಟಿಕೆಟ್‌ಗೆ ಈ ಹಿಂದಿನಿಂದಲೂ ಭರ್ಜರಿ ಪೈಪೋಟಿಯೇ ನಡೆದಿದೆ. ಇಬ್ಬರೂ ಹಳ್ಳಿ ಸುತ್ತುತ್ತಿದ್ದಾರೆ. ತಮಗೆ ಟಿಕೆಟ್ ಎಂದು ನುಡಿಯುತ್ತಿದ್ದಾರೆ.

‘ನಾವು ಪಕ್ಷದ ಮೂಲ ಕಾರ್ಯಕರ್ತರು. ಮಾಧುಸ್ವಾಮಿ ಅವರು ಜೆಡಿಯುನಲ್ಲಿದ್ದಾಗ ನಾವು ಬಿಜೆಪಿಗೆ ದುಡಿದಿದ್ದೆವು. ಈಗ ಪಕ್ಷದಲ್ಲಿ ಇದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇವೆ. ಬಹುಶಃ ಗೊಂದಲದ ಕಾರಣಕ್ಕಾಗಿಯೇ ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಟಿಕೆಟ್ ಹಂಚಿಕೆ ನಡೆದಿಲ್ಲ’ ಎಂದು ಹೆಸರು ಪ್ರಕಟಗೊಳ್ಳಲು ಇಚ್ಛಿಸದ ಹಂದನಕೆರೆ ಭಾಗದ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಗುಬ್ಬಿಯಲ್ಲಿ ಬೆಟ್ಟಸ್ವಾಮಿ, ಜಿ.ರಾಮಾಂಜಿನಪ್ಪ, ಚಂದ್ರಶೇಖರ್ ಬಾಬು, ಎನ್‌.ಸಿ.ಪ್ರಕಾಶ್ ಆಕಾಂಕ್ಷಿಗಳು. ದಿಲೀಪ್ ಕುಮಾರ್ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದರೂ ಅವರು ತಮ್ಮದೇ ಆದ ‘ಪ್ರಭಾವ’ದಿಂದ ಟಿಕೆಟ್ ತರುವ ಮಾತನಾಡುತ್ತಿದ್ದಾರೆ. ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ.

‘ಒಂದು ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವೆ’ ಎಂದು ಹೇಳುತ್ತಿದ್ದಾರೆ. ಈ ಬಂಡಾಯದ ಮಾತುಗಳು ಮತ್ತು ಹೆಚ್ಚಿನ ಆಕಾಂಕ್ಷಿಗಳ ಕಾರಣಕ್ಕೆ ಗುಬ್ಬಿ ಟಿಕೆಟ್ ಕಗ್ಗಂಟಾಗಿದೆ. ಈ ಎಲ್ಲ ಬೆಳವಣಿಗೆಗಳು ಕಾರ್ಯಕರ್ತರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕುಣಿಗಲ್‌ನಲ್ಲಿ ಡಿ.ಕೃಷ್ಣಕುಮಾರ್ ಮತ್ತು ರಾಜೇಶ್ ಗೌಡ, ಶಿರಾದಲ್ಲಿ ಬಿ.ಕೆ.ಮಂಜುನಾಥ್, ಎಸ್‌.ಆರ್.ಗೌಡ, ಸಿ.ಎಂ.ನಾಗರಾಜು, ಕೊರಟಗೆರೆಯಲ್ಲಿ ಎಚ್‌.ಹುಚ್ಚಯ್ಯ, ಡಾ.ಲಕ್ಷ್ಮಿಕಾಂತ್, ಆರತಿ, ಗಂಗಹನುಮಯ್ಯ ಟಿಕೆಟ್ ಕೋರಿರುವ ಪ್ರಮುಖರು. ಪಾವಗಡ ಮೀಸಲು ಕ್ಷೇತ್ರದಲ್ಲಿಯೂ ಮುಖಂಡರ ದಂಡೇ ಇದೆ. ಸ್ವಯಂ ನಿವೃತ್ತಿ ಪಡೆದಿರುವ ಬಿಬಿಎಂ‍ಪಿ ಎಂಜಿನಿಯರ್ ರಾಮಕೃಷ್ಣಪ್ಪ, ಕೃಷ್ಣಾನಾಯಕ್, ಕೊತ್ತೂರು ಹನುಮಂತರಾಯ, ಕಾಂಗ್ರೆಸ್ ಮುಖಂಡ ವೆಂಕರವಣಪ್ಪ ಅವರ ಹಿರಿಯ ಪುತ್ರ ಕುಮಾರಸ್ವಾಮಿ, ನಿವೃತ್ತ ಆದಾಯ ತೆರಿಗೆ ಇಲಾಖೆ ಆಯುಕ್ತ ಲಕ್ಷ್ಮಿನಾರಾಯಣಪ್ಪ ‘ಕಮಲ’ದ ಚಿನ್ನೆ ಕೋರಿರುವ ಪ್ರಮುಖರು. ಉಳಿದಂತೆ ಮಧುಗಿರಿಯಲ್ಲಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ಇಲ್ಲ.

ಹೀಗೆ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ದೊಡ್ಡ ಸಂಖ್ಯೆಯ ಆಕಾಂಕ್ಷಿಗಳು ಇದ್ದಾರೆ. ಎರಡನೇ ಪಟ್ಟಿಯತ್ತ ಅಭ್ಯರ್ಥಿಗಳು ನೋಟ ಬೀರಿದ್ದರೆ, ಯಾರಿಗೆ ಕೆಲಸ ಮಾಡಬೇಕು ಎನ್ನುವ ಗೊಂದಲ ಸಾಮಾನ್ಯ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

‘ಇಲ್ಲಿ ಆಕಾಂಕ್ಷಿಗಳದಷ್ಟೇ ಬಿಗಿಪಟ್ಟು. ನಾವು ಪಕ್ಷದ ಕೆಲಸಗಾರರು. ಶಿವಣ್ಣ ಅಥವಾ ಜ್ಯೋತಿಗಣೇಶ್ ಈ ಇಬ್ಬರಲ್ಲಿ ಯಾರಿಗಾದರೂ ಟಿಕೆಟ್ ನೀಡಲಿ. ನಾವು ದುಡಿಯುತ್ತೇವೆ. ಉಳಿದ ಕ್ಷೇತ್ರಗಳಲ್ಲಿಯೂ ಅಷ್ಟೇ. ಪಕ್ಷದ ತೀರ್ಮಾನದ ವಿರುದ್ಧ ನಿಲ್ಲುತ್ತೇವೆ ಎನ್ನುವಷ್ಟು ಬಂಡಾಯ ಇಲ್ಲ. ಸಣ್ಣ ಪುಟ್ಟ ತಿಕ್ಕಾಟ ನಾಯಕರ ನಡುವೆ ಇದೆ ಅಷ್ಟೇ’ ಎನ್ನುವರು ಬಿಜೆಪಿಯ ಜಿಲ್ಲಾ ಮುಖಂಡರೊಬ್ಬರು.

**

ಬಿಜೆಪಿಯಿಂದ ಟಿಕೆಟ್ ದೊರೆಯುವ ಖಚಿತ ವಿಶ್ವಾಸ ಇದೆ. ಏ.20 ಒಳ್ಳೆಯ ದಿನ. ನಾನು ನಾಮಪತ್ರ ಸಲ್ಲಿಸುವೆ - ಸೊಗಡು ಶಿವಣ್ಣ,ಬಿಜೆಪಿ ಮುಖಂಡ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry