ಶುಕ್ರವಾರ, ಡಿಸೆಂಬರ್ 6, 2019
23 °C
ಹೊಳೇನರಸೀಪುರ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಕಣಕ್ಕೆ?

ಮಂಜೇಗೌಡ ರಾಜೀನಾಮೆ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಜೇಗೌಡ ರಾಜೀನಾಮೆ ಅಂಗೀಕಾರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಸರ್ಕಾರಿ ಹುದ್ದೆಗೆ ನೀಡಿದ್ದ ರಾಜೀನಾಮೆಗೆ ಕಾನೂನು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದರೂ ಸರ್ಕಾರ ಅಂಗೀಕರಿಸಿದೆ.

ಸಾರಿಗೆ ಇಲಾಖೆಯಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾಗಿರುವ ಮಂಜೇಗೌಡ ಹೊಳೇನರಸೀಪುರ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಈ ಕಾರಣಕ್ಕೆ, 2017ರ ನ. 3ರಂದು ಹುದ್ದೆಗೆ ಅವರು ರಾಜೀನಾಮೆ ನೀಡಿದ್ದರು.

ರಾಜೀನಾಮೆ ಕಡತಕ್ಕೆ ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಈ ಹಿಂದೆಯೇ ಒಪ್ಪಿಗೆ ನೀಡಿತ್ತು. ಆದರೆ, ಅಕ್ರಮ ಆಸ್ತಿ ಗಳಿಕೆ ಆಧಾರದಲ್ಲಿ ಲೋಕಾಯುಕ್ತ ದಾಳಿ ಮತ್ತು ಬಳ್ಳಾರಿ ಅಕ್ರಮ ಗಣಿ ಪ್ರಕರಣದಲ್ಲಿ ಭಾಗಿಯಾದ ಕುರಿತು ಲೋಕಾಯುಕ್ತ ಜಂಟಿ ಇಲಾಖಾ ವಿಚಾರಣೆಗೆ ಸಕ್ಷಮ ಪ್ರಾಧಿಕಾರಗಳು ಅನುಮತಿ ನೀಡಿರುವುದರಿಂದ ರಾಜೀನಾಮೆ ಅಂಗೀಕರಿಸುವುದು ಸಮಂಜಸ ಅಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡಿತ್ತು.

ಆದರೆ, ರಾಜೀನಾಮೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮಂಜೇಗೌಡ ಒತ್ತಡ ಹೇರಿದ್ದರು. ಹೀಗಾಗಿ, ರಾಜೀನಾಮೆ ಅಂಗೀಕರಿಸುವ ಸಂಬಂಧ ಅಡ್ವೊಕೇಟ್‌ ಜನರಲ್‌ ಅವರಿಂದ ಸರ್ಕಾರ ಅಭಿಪ್ರಾಯ ಕೇಳಿತ್ತು.

ಮಂಜೇಗೌಡರ ವಿರುದ್ಧದ ಎರಡು ಪ್ರಕರಣಗಳು ವಿಚಾರಣೆಗೆ ಬಾಕಿ ಇರುವುದರಿಂದ, ಆರೋಪಗಳು ಸಾಬೀತಾದರೆ ಪಿಂಚಣಿ ಮತ್ತು ಭವಿಷ್ಯ ನಿಧಿ ಮುಟ್ಟುಗೋಲು ಹಾಕಿಕೊಳ್ಳುವ ಷರತ್ತಿಗೆ ಒಳಪಟ್ಟು ರಾಜೀನಾಮೆ ಅಂಗೀಕರಿಸುವಂತೆ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ನೀಡಿದ್ದರು ಎಂದು ಗೊತ್ತಾಗಿದೆ. ರಾಜೀನಾಮೆ ಅಂಗೀಕರಿಸುವಂತೆ ಮುಖ್ಯ ಕಾರ್ಯದರ್ಶಿ ಮೇಲೆ ಮುಖ್ಯಮಂತ್ರಿ ಕೂಡಾ ಒತ್ತಡ ಹೇರಿದ್ದರೂ ಎಂದೂ ಹೇಳಲಾಗಿದೆ.

ಅಧಿಕಾರ ಹಸ್ತಾಂತರ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಹೊಣೆಯನ್ನು ಮಂಜೇಗೌಡರು ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ರಾಮ ಅವರಿಗೆ ಮಂಗಳವಾರ ಹಸ್ತಾಂತರಿಸಿದ್ದಾರೆ.

ಪ್ರತಿಕ್ರಿಯಿಸಿ (+)