‘ಅತ್ಯಾಚಾರ: ಪ್ರಧಾನಿ ಮೋದಿ ಕಣ್ಣಿಗೆ ಕಾಣಬಹುದೇನೊ’

ನವದೆಹಲಿ: ‘ಉನ್ನಾವ್ ಅತ್ಯಾಚಾರ ಪ್ರಕರಣ ಸಹ ಪ್ರಧಾನಿ ನರೇಂದ್ರ ಮೋದಿ ಕಣ್ಣಿಗೆ ಕಾಣಬಹುದೇನೊ’ ಎಂದು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.
ಈ ಬಾರಿಯ ಅಧಿವೇಶನದಲ್ಲಿ ಕಲಾಪ ನಡೆಯದೇ ಇದ್ದುದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಲಿರುವುದನ್ನು ಟೀಕಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ.
‘ಅತ್ಯಾಚಾರಕ್ಕೆ ಒಳಗಾದ ತನ್ನ ಮಗಳಿಗಾಗಿ ನ್ಯಾಯ ಕೇಳಿದ ತಂದೆಯ ಮೇಲೆ ನಡೆದ ದೌರ್ಜನ್ಯ ಇಡೀ ಮಾನವ ಕುಲವೇ ತಲೆತಗ್ಗಿಸುವಂಥದ್ದು. ಬಿಜೆಪಿ ಆಡಳಿತದಲ್ಲಿ ತಲೆದೋರಿರುವ ಅರಾಜಕತೆ, ಮಹಿಳೆಯರ ಮೇಲಿನ ದೌರ್ಜನ್ಯ, ಕಾನೂನು ಮತ್ತು ಸುವ್ಯವಸ್ಥೆಗೆ ಬಂದೊದಗಿರುವ ಧಕ್ಕೆಗಳ ವಿರುದ್ಧವೂ ಪ್ರಧಾನಿ ಮೋದಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ನಂಬಿದ್ದೇನೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
‘ಪ್ರಧಾನಿಯವರೇ, ಇದು ಉಪವಾಸ ಸತ್ಯಾಗ್ರಹ ಮಾಡುವ ಸಮಯವಲ್ಲ. ನಿಮ್ಮ ಸರ್ಕಾರದ ವೈಫಲ್ಯಗಳನ್ನು ಲೆಕ್ಕ ಹಾಕಿದರೆ ನೀವು ರಾಜಕೀಯ ಸನ್ಯಾಸ ಸ್ವೀಕರಿಸುವ ಸಮಯವಿದು. ನೀವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, 2019ರಲ್ಲಿ ಜನ ನಿಮ್ಮನ್ನು ಹೊರದಬ್ಬಿದಾಗ ನಿಮ್ಮ ವೈಫಲ್ಯದ ಅರಿವು ನಿಮಗಾಗುತ್ತದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.