ಭಾನುವಾರ, ಡಿಸೆಂಬರ್ 15, 2019
25 °C
ಕೋಮುವಾದ, ಸರ್ವಾಧಿಕಾರದಿಂದ ಸಮಾಜದ ನೆಮ್ಮದಿ ಸಾಧ್ಯವಿಲ್ಲ: ಮಾಧ್ಯಮ ಸಂವಾದದಲ್ಲಿ ನಟ ಪ್ರಕಾಶ್ ರೈ

ದೇಶ ಬದಲಾಗುತ್ತಿದೆ: ಪ್ರಕಾಶ್ ರೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶ ಬದಲಾಗುತ್ತಿದೆ: ಪ್ರಕಾಶ್ ರೈ

ಬಾಗಲಕೋಟೆ: ‘ದೇಶ ಬದಲಾಗುತ್ತಿದೆ. ಅದು ನೋಡುವ ಕಣ್ಣಿದ್ದರೆ ಕಾಣಿಸುತ್ತದೆ. 2019ರ ಚುನಾವಣೆಯ ನಂತರ ಬಿಜೆಪಿ ಎಂಬ ದೊಡ್ಡ ರೋಗ ಈ ದೇಶದಲ್ಲಿ ಇರುವುದಿಲ್ಲ’ ಎಂದು ನಟ ಪ್ರಕಾಶ್ ರೈ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಬಿಜೆಪಿ ಚೆನ್ನಾಗಿ ಕೊಬ್ಬಿರುವ ರಾಕ್ಷಸರ ಬಣ. ದೇಶಕ್ಕೆ ಬಂದಿರುವ ಆ ದೊಡ್ಡ ರೋಗವನ್ನು ಮೊದಲು ಗುಣಪಡಿಸಿ ಕೋಮು ರಾಜಕೀಯವನ್ನು ತಡೆಯಬೇಕಿದೆ’ ಎಂದರು.

‘ಭ್ರಷ್ಟಾಚಾರಕ್ಕಿಂತ ಕೋಮುವಾದ ದೇಶಕ್ಕೆ ತುಂಬಾ ದೊಡ್ಡ ಸಮಸ್ಯೆ. ಕೋಮುವಾದ, ಸರ್ವಾಧಿಕಾರದಿಂದ ಸಮಾಜ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಎಲ್ಲರನ್ನೂ ಕೊಂಡುಕೊಂಡು ಭಯ ಹುಟ್ಟಿಸುವ ವಾತಾವರಣ ಸೃಷ್ಟಿಸುವುದು ದೇಶಕ್ಕೂ ಒಳ್ಳೆಯದಲ್ಲ. ಅದು ಇಂದಿರಾಗಾಂಧಿ, ನರೇಂದ್ರ ಮೋದಿ, ಅಮಿತ್‌ ಶಾ ಯಾರೇ ಇರಲಿ, ಅವರು ಸರ್ವಾಧಿಕಾರಿಯಾಗದಂತೆ ನೋಡಿಕೊಳ್ಳಬೇಕಿದೆ. ಹಿಟ್ಲರ್‌ನಿಂದ, ಇತಿಹಾಸದಿಂದ ಪಾಠ ‌ಕಲಿಯ

ಬೇಕಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಚುನಾವಣಾ ರಾಜಕೀಯಕ್ಕೂ ಬರುವುದಿಲ್ಲ. ಆದರೆ ಜಸ್ಟ್ ಆಸ್ಕಿಂಗ್ ಫೌಂಡೇಶನ್‌

ವತಿಯಿಂದ ಜನರಲ್ಲಿ ರಾಜಕೀಯ, ಸಾಮಾಜಿಕ ಪ್ರಜ್ಞೆ ಬೆಳೆಸುವೆ’ ಎಂದು ಹೇಳಿದರು.

‘ಯಾವ ಪಕ್ಷಗಳೂ ನನ್ನ ಜೊತೆ ಇಲ್ಲ. ಚಿಟಿಕೆ ಹೊಡೆಯುವಷ್ಟರಲ್ಲಿ ನನ್ನ ಮಾರಿಕೊಳ್ಳಬಹುದು. ಆದರೆ ಅದಕ್ಕೆ ಅವಕಾಶ ನೀಡುವುದಿಲ್ಲ. ಚುನಾವಣೆ ವೇಳೆ ರಾಜಕೀಯ ಪಕ್ಷಗಳಿಗೆ ಸುಳ್ಳು ಹೇಳಲು ಬಿಡಬೇಡಿ. ಅದು ಕಾಂಗ್ರೆಸ್,ಬಿಜೆಪಿ, ಜೆಡಿಎಸ್ ಯಾರೇ ಬರಲಿ ಪ್ರಶ್ನಿಸುವ ಕೆಲಸ ಬಿಡಬೇಡಿ. ಆದರೆ ಒಬ್ಬೊಬ್ಬರೇ ಪ್ರಶ್ನಿಸಬೇಡಿ, ಎಲ್ಲರೂ ಒಂದಾಗಿ ಪ್ರಶ್ನೆ ಕೇಳಿ. ಒಂದು ದಿನದಲ್ಲಿ ಬದಲಾವಣೆ ಆಗೊಲ್ಲ. ದೊಡ್ಡ ಸುಳ್ಳು ಹೇಳುವವರನ್ನು ಮೊದಲು ಮನೆಗೆ ಕಳಿಸೋಣ.

ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದೀರಿ, ಬ್ಯಾಂಕ್ ಖಾತೆಗೆ ₹15 ಲಕ್ಷ

ಹಾಕುವುದಾಗಿ ಹೇಳಿದ್ದೀರಿ ಎಲ್ಲಿವೆ ಎಂಬುದಾಗಿ ಪ್ರಶ್ನಿಸೋಣ, ಪ್ರಶ್ನಿಸುವ ನೈತಿಕತೆ ಕಳೆದುಕೊಳ್ಳಬೇಡಿ. ಯೋಚನೆ ಮಾಡಿ ಮತ ಹಾಕಿ’’ ಎಂದು ಸಲಹೆ ನೀಡಿದರು.

‘ಒಂದು ಕೋಮಿನ ಜನರನ್ನೇ ಅಳಿಸಿಹಾಕಬೇಕು. ಸಂವಿಧಾನ ಬದಲಾಯಿಸಬೇಕು’ ಎಂದು ಕೇಂದ್ರ ಮಂತ್ರಿಯೊಬ್ಬರು ಹೇಳುತ್ತಾರೆ. ಅದನ್ನು ಪ್ರಶ್ನಿಸುವವರನ್ನು ನಾಯಿಗಳಿಗೆ ಹೋಲಿಸುತ್ತಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾದ ಅವರ ಈ ಆಲೋಚನೆ ದೇಶಕ್ಕೆ ಒಳ್ಳೆಯದಲ್ಲ. ನಾವು ಯಾವ ಶತಮಾನದಲ್ಲಿ ಇದ್ದೇವೆ. ಅಂತಹವರ ಕೈಗೆ ದೇಶ ಕೊಡಬೇಕೇ’ ಎಂದು ಪ್ರಶ್ನಿಸಿದ ಪ್ರಕಾಶ್ ರೈ, ಪರೋಕ್ಷವಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಚುನಾವಣೆ ಮುಗಿದ ಮೇಲೆ ಜಸ್ಟ್ ಆಸ್ಕಿಂಗ್ ಫೌಂಡೇಶನ್‌ ಮೂಲಕ ರಾಜ್ಯದ ಎಲ್ಲಾ ಹಳ್ಳಿ, ಪಟ್ಟಣಗಳು, ಶಾಲೆ–ಕಾಲೇಜುಗಳಿಗೆ ತೆರಳಿ ವಿಚಾರಸಂಕಿರಣ, ಚರ್ಚಾ ಕಮ್ಮಟ ಹಮ್ಮಿಕೊಳ್ಳಲಾಗುವುದು. ಅಲ್ಲಿ ರೈತರು, ಕಾರ್ಮಿಕರು, ಕೂಲಿಕಾರರು, ವಿದ್ಯಾರ್ಥಿಗಳ ಸಮಸ್ಯೆ ಬಿಡಿಸಿ ಬಿಡಿಸಿ ಹೇಳಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು. ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಅವರ ಕನಸಿನಂತೆ ಜನರಲ್ಲಿ ಸಾಹಿತ್ಯ ಓದುವ ಹವ್ಯಾಸ ರೂಢಿಸಲಾಗುವುದು’ ಎಂದರು.

‘ನಾಗಮಂಡಲ’ ಚಿತ್ರೀಕರಣಕ್ಕೆ ಬಂದಿದ್ದೆ...

‘ಬಾಗಲಕೋಟೆಗೆ 20 ವರ್ಷಗಳ ಹಿಂದೆ ನಾಗಮಂಡಲ ಚಿತ್ರೀಕರಣಕ್ಕೆ ಬಂದ ದಿನಗಳನ್ನು ನೆನಪಿಸಿಕೊಂಡ ಪ್ರಕಾಶ್ ರೈ, ಈಗ ಆ ವಾಡೆ ಆಲಮಟ್ಟಿ ಜಲಾಶಯದಲ್ಲಿ ಮುಳುಗಡೆಯಾಗಿದೆ. ಆ ಚಿತ್ರ ನನ್ನ ವೃತ್ತಿ ಬದುಕಿಗೆ ತಿರುವು ನೀಡಿತು’ ಎಂದು ಸ್ಮರಿಸಿದರು.

‘ನಾನು ಲಂಕೇಶ ಮೇಷ್ಟರ ಗರಡಿಯಲ್ಲೇ ಆಡಿ ಬೆಳೆದವನು. ನಮ್ಮ ಮನೆಯ ಅಂಗಳದಲ್ಲಿಯೇ ನಡೆದ ದುರಂತ (ಗೌರಿ ಲಂಕೇಶ್ ಹತ್ಯೆ) ಜಸ್ಟ್ ಆಸ್ಕಿಂಗ್ ಅಭಿಯಾನಕ್ಕೆ ಪ್ರೇರೇಪಿಸಿತು. ಈಗ ನಾನೊಬ್ಬನೇ ಇಲ್ಲ. ಪ್ರಶ್ನಿಸುವವರ ದೊಡ್ಡ ಬಳಗವೇ ನನ್ನೊಂದಿಗಿದೆ’ ಎಂದರು.

‘ಲಿಂಗಾಯತರು ಪ್ರತ್ಯೇಕ ಧರ್ಮ ಕೇಳಿದ್ದಾರೆ. ಅವರಿಗೆ ಕೊಡಲಾಗಿದೆ. ಎಲ್ಲರಿಗೂ ಅವರವರ ಧರ್ಮ ಪಾಲಿಸುವ ಹಕ್ಕು ಸಂವಿಧಾನದತ್ತವಾಗಿಯೇ ಬಂದಿದೆ. ಆ ಧರ್ಮಕ್ಕೆ ಸಂಬಂಧಿಸದ ನಾವೇಕೆ ಅದಕ್ಕೆ ವಿರೋಧ ವ್ಯಕ್ತಪಡಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಂಸದ ಪ್ರತಾಪ್‌ಸಿಂಹ ನಿಮ್ಮ ಬಗ್ಗೆ ಈಗ ಮಾತನಾಡುತ್ತಿಲ್ಲವೇಕೆ’ ಎಂಬ ಪ್ರಶ್ನೆಗೆ, ‘ಪ್ರಾಣಿಗಳು ಕೆಲವೊಮ್ಮೆ ಸುಮ್ಮನಿರುತ್ತವೆ’ ಎಂದರು.

**

ಐದು ಭಾಷೆ ಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ರೂಪಾಯಿ ಗಳಿಸಿರುವೆ. ಎರಡು ಹಳ್ಳಿಗಳನ್ನು ದತ್ತು ಪಡೆದಿರುವೆ. ಆದರೂ ಬೆಂಗಳೂರಿನಲ್ಲಿ ಸರ್ಕಾರದಿಂದ ನಿವೇಶನ ಪಡೆದಿದ್ದೇನೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ -  ಪ್ರಕಾಶ್ ರೈ, ನಟ'

**

ಪ್ರತಿಕ್ರಿಯಿಸಿ (+)