ಸೋಮವಾರ, ಡಿಸೆಂಬರ್ 9, 2019
22 °C
ದಶಕದಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತ ಶಿವಕುಮಾರ ಗುಮ್ತಾ

ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಆಸರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಆಸರೆ

ಭಾಲ್ಕಿ: ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಉಂಟಾಗುತ್ತಿರುವ ನಷ್ಟದಿಂದ ಪಾರಾಗಲು ರೈತರು ಹೈನುಗಾರಿಕೆಯನ್ನು ನಡೆಸಿ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಯತ್ನಿಸುತ್ತಿದ್ದಾರೆ. ಅಂತಹವರಲ್ಲಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಪ್ರಗತಿಪರ ರೈತ ಶಿವಕುಮಾರ ಗುಮ್ತಾ ಕೂಡಾ ಒಬ್ಬರು.

ಮಳೆಯನ್ನೇ ಅವಲಂಬಿಸಿಕೊಂಡು ಒಣ ಕೃಷಿ ಮಾಡುವ ಬಹುತೇಕ ರೈತರಿಗೆ ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತವೆ. ಪ್ರತಿವರ್ಷ ಉತ್ತಮ ಫಲ ಪಡೆಯಲು ಸಾಧ್ಯವಾಗದೆ ಸಂಕಷ್ಟ ಎದುರಿಸುತ್ತಾರೆ. ಇನ್ನು ಅನೇಕರು ಕೃಷಿ ಕಾರ್ಯದಲ್ಲಿ ಲಾಭವಿಲ್ಲ ಎಂದು ಸಾಲದ ಸುಳಿಗೆ ಸಿಲುಕಿ ನಲುಗಿ ಹೋಗುತ್ತಾರೆ.

ಆದರೆ ಅಲ್ಪ ನೀರನ್ನು ಉಪಯೋಗಿಸಿಕೊಂಡು ಅರ್ಧ ಎಕರೆ ಹೊಲದಲ್ಲಿ ಹುಲ್ಲನ್ನು ಬೆಳೆದು, ಹೈನುಗಾರಿಕೆ ನಡೆಸಿ ನಿತ್ಯ ಕೈತುಂಬಾ ಹಣ ಸಂಪಾದಿಸಿ ಇತರರಿಗೆ ಶಿವಕುಮಾರ ಗುಮ್ತಾ ಮಾದರಿಯಾಗಿದ್ದಾರೆ.

‘ದಶಕದ ಹಿಂದೆ ನಾಲ್ಕು ಎಕರೆ ಹೊಲದಲ್ಲಿ ತೊಗರಿ, ಉದ್ದು, ಸೋಯಾ, ಜೋಳ, ಕಡಲೆ ಬೆಳೆಯಲು ಪ್ರಯತ್ನಿಸಿದೆ. ಆದರೆ, ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆ ಪಡೆಯಲು ಕಷ್ಟಸಾಧ್ಯವಾಗದೆ ಸಾಲಬಾಧೆಗೆ ಒಳಗಾದೆ. ಆಗ ತಲೆಗೆ ಹೊಳೆದಿದ್ದೇ ಹೈನುಗಾರಿಕೆ ಉಪಾಯ’ ಎಂದು ರೈತ ಶಿವಕುಮಾರ ಗುಮ್ತಾ ತಿಳಿಸಿದರು.

‘ಹತ್ತು ವರ್ಷದ ಹಿಂದೆ ಒಂದು ಎಮ್ಮೆ ಸಾಕುವ ಮೂಲಕ ಹೈನುಗಾರಿಕೆ ಪ್ರಾರಂಭಿಸಿದೆ.ಸ್ವಸಹಾಯ ಸಂಘಗಳ ಮೂಲಕ ಸಾಲ ಪಡೆದು ವರ್ಷದಿಂದ ವರ್ಷಕ್ಕೆ ದನಗಳ ಸಂಖ್ಯೆ ಹೆಚ್ಚಿಸಿದೆ. ಸದ್ಯ 3 ಎಮ್ಮೆ, 3 ಜೆರ್ಸಿ ಆಕಳು ಮತ್ತು 5 ಕರುಗಳು ಇವೆ.

ಮೊದಲು ನಿತ್ಯ ಬೆಳಿಗ್ಗೆ, ಸಂಜೆ ಸೇರಿ ಒಟ್ಟು 30 ಲೀಟರ್‌ ಹಾಲು ಕೊಡುತ್ತಿದ್ದವು. ಈಗ ಎರಡು ಅವಧಿ ಸೇರಿ 15ರಿಂದ 17 ಲೀಟರ್‌ ಹಾಲು ಕೊಡುತ್ತವೆ. ಪ್ರತಿದಿನ ದನಗಳಿಗೆ ಅಗತ್ಯ ಪ್ರಮಾಣದ ಹಸಿ ಹುಲ್ಲು, ನೀರಿನೊಂದಿಗೆ ಹೆಚ್ಚಿನ ಹಾಲು ಪಡೆಯಲು 2 ಕೆಜಿ ಹೆಸರಿನ, ಸೋಯಾ, ಮೆಕ್ಕೆ ಜೋಳ, ಹತ್ತಿ ಕಾಳು, ಬಾರ್ಲಿ ತಿನ್ನಲಿಕ್ಕೆ ಕೊಡುತ್ತೇನೆ ಎಂದು ವಿವರಿಸಿದರು.

‘ಅರ್ಧ ಎಕರೆ ಹುಲ್ಲು ಬೆಳೆದು ಪ್ರತಿದಿನ ₹ 550 ಸಂಪಾದಿಸುತ್ತೇನೆ. ಗಣಿಕೆ ಹುಲ್ಲಿನ ಬೀಜದಿಂದ ಹುಲ್ಲು ಬೆಳೆದಿದ್ದೇನೆ. ಇದು ಒಂದು ಸಾರಿ ಬಿತ್ತನೆ ಮಾಡಿದರೆ ಐದಾರು ವರ್ಷ ನಿರಂತರ ಹುಲ್ಲು ಪಡೆಯಬಹುದು.

ಪ್ರತಿ ಲೀಟರ್‌ ಹಾಲಿನ ದರ ₹ 35ರಿಂದ 40. ದನಗಳ ವ್ಯವಸ್ಥೆಗೆ ₹ 100 ರಿಂದ150 ಖರ್ಚು ಮಾಡುತ್ತೇನೆ. ನಿವ್ವಳ ₹ 400ರಿಂದ 450 ಗಳಿಸುತ್ತೇನೆ’ ಎಂದು ಅವರು ತಿಳಿಸಿದರು.

‘ಹೈನುಗಾರಿಕೆಗೆ ನಾನು ಮೀಸಲಿಡುವುದು ದಿನದ ನಾಲ್ಕು ಗಂಟೆ ಮಾತ್ರ. ಉಳಿದ ಸಮಯದಲ್ಲಿ ಇನ್ನು ಉಳಿದ ಮೂರುವರೆ ಎಕರೆ ಒಣ ಭೂಮಿಯಲ್ಲಿ ಹೆಸರು, ಉದ್ದು ಸೇರಿದಂತೆ ಇತರ ಬೆಳೆ ಬೆಳೆಯುತ್ತೇನೆ. ಮುಂಬರುವ ದಿನಗಳಲ್ಲಿ ಇನ್ನೂ 2 ಆಕಳು ತರುವ ಮತ್ತು ದನಗಳಿಗಾಗಿ ಹೊಲದಲ್ಲಿಯೇ ಶೆಡ್‌ ನಿರ್ಮಿಸುವ ಚಿಂತನೆ ಇದೆ. ದಿನಕ್ಕೆ ಏನಿಲ್ಲವೆಂದರೂ ಕನಿಷ್ಟ ₹ 1200 ಹಣ ಗಳಿಸಬೇಕು ಎಂಬುದು ನನ್ನ ಗುರಿ. ನನ್ನ ಕೆಲಸಕ್ಕೆ ಬೆನ್ನುಲುಬಾಗಿ ಪತ್ನಿ ಶಿವಲೀಲಾ ಸಹಕರಿಸುತ್ತಾರೆ’ ಎಂದು ಹೆಮ್ಮೆಯಿಂದ ಹೇಳಿದರು.

**

ಕೃಷಿಯೊಂದೇ ಅವಲಂಬಿಸಿ ಜೀವನ ನಡೆಸುವುದು ಕಷ್ಟ. ರೈತರು ಹೈನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಳ್ಳುವುದು ಒಳಿತು – ಶಿವಕುಮಾರ ಗುಮ್ತಾ, ಪ್ರಗತಿಪರ ರೈತ.

**

ಬಸವರಾಜ್‌ ಎಸ್‌.ಪ್ರಭಾ

ಪ್ರತಿಕ್ರಿಯಿಸಿ (+)