ಸೋಮವಾರ, ಜೂಲೈ 13, 2020
23 °C

ಧಾರವಾಡ: ಧರಣಿ ಕುಳಿತ ಅಮಿತ್ ಶಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಧರಣಿ ಕುಳಿತ ಅಮಿತ್ ಶಾ

ಧಾರವಾಡ: ಲೋಕಸಭೆಯಲ್ಲಿ ಸುಗಮ ಅಧಿವೇಶನಕ್ಕೆ ಪ್ರತಿಪಕ್ಷಗಳ ಅಸಹಕಾರ ಖಂಡಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಇಲ್ಲಿನ ಜಿಲ್ಲಾಧಿಕಾರಿ ಆವರಣದಲ್ಲಿ ಧರಣಿ ಕೈಗೊಂಡಿದ್ದಾರೆ. 

ಮುರುಘಾಮಠದ ದರ್ಶನ ಪಡೆದು ಬಂದು ಧರಣಿಗೆ ಕುಳಿತ ಅಮಿತ್ ಶಾ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದರಾದ ಪ್ರಹ್ಲಾದ ಜೋಶಿ, ರಾಜೀವ ಚಂದ್ರಶೇಖರ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಸಾಥ್ ನೀಡಿದ್ದಾರೆ. 

ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಪ್ರಹ್ಲಾದ್ ಜೋಷಿ ಅವರು, ‘ಅಮಿತ್ ಶಾ ಅವರ ಧರಣಿ ಸತ್ಯಾಗ್ರಹ ಐತಿಹಾಸಿಕ ಘಟನೆ. ಬಿಜೆಪಿ ಪ್ರಜಾಪ್ರಭುತ್ವದ ವಿರೋಧಿ ಅಲ್ಲ. ಪ್ರಜಾಪ್ರಭುತ್ವದ ಗುಣ ಬಿಜೆಪಿ ರಕ್ತದಲ್ಲಿಯೇ ಇದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕನಾಗಬೇಕಾದರೆ ಅವರ ಮನೆಯಲ್ಲಿ ಹೊಸಬರು ಹುಟ್ಟಬೇಕು. ಜನ ಅವರಿಗೆ ಮತ ಹಾಕಬೇಕು’ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಜಗದೀಶ್ ಶೆಟ್ಟರ್‌ ಮಾತನಾಡಿ, ‘ಕಾಂಗ್ರೆಸ್ ಅಧಿಕಾರ ಇಲ್ಲದೆ ಪರಿತಪಿಸುತ್ತಿದೆ. ಪ್ರಜಾತಂತ್ರದ ಕತ್ತು ಹಿಸುಕಿದ ಏಕೈಕ ಪಕ್ಷ ಕಾಂಗ್ರೆಸ್. ಇಂದಿರಾಗಾಂಧಿಯಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವರೆಗೂ ಪ್ರಜಾತಂತ್ರದ ಕತ್ತು ಹಿಸುಕಿದೆ. ಕಾಂಗ್ರೆಸ್ ವಿರೋಧ ಪಕ್ಷವಾಗಲು ನಾಲಾಯಕ್. ಸಂಸತ್ತಿನಲ್ಲಿ ಅಧಿಕಾರ ನಡೆಯದಂತೆ ತಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸಹಿಸುತ್ತಿಲ್ಲ. ಇನ್ನಾದರೂ ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಗೌರವ ನೀಡಲಿ’  ಎಂದರು. 

ಯಡಿಯೂರಪ್ಪ ಮಾತನಾಡಿ, ‘ದೇಶದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಎಂದೆನ್ನುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲೆ ತಿರುಕನಂತೆ ಮಾತನಾಡುತ್ತಿದ್ದಾರೆ. ಇದು ತಿರುಕರ ಕನಸು. ಬ್ರಿಟಿಷರ ನಂತರ ಕಾಂಗ್ರೆಸ್ ವಿದೇಶಿಯರ ಆಡಳಿತ ಮುಂದುವರೆಸಿದ್ದಾರೆ. ಬಿಜೆಪಿ ಈ ಬಾರಿ 150 ಸ್ಥಾನ ಗೆಲ್ಲಲ್ಲಿದೆ. ಮೂರು ದಿನ ರಾಹುಲ್ ಗಾಂಧಿ ಜೊತೆ ಕೂತು ಮೂರು ಜಿಲ್ಲೆ ಅಭ್ಯರ್ಥಿಗಳ ಆಯ್ಕೆ ಮಾಡಲು ಆಗಲಿಲ್ಲ. ತನ್ನ ಸ್ವಂತ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸದೇ ಕ್ಷೇತ್ರ ಹುಡುಕುತ್ತಿರುವ ಸಿದ್ದರಾಮಯ್ಯ ಸ್ಥಿತಿ, ಯೋಗ್ಯತೆ ಏನು ಎಂಬುದು ಅರ್ಥ ಮಾಡಿಕೊಳ್ಳಲಿ’ ಎಂದು ಲೇವಡಿ ಮಾಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.