ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಗಾಂಧಿ ಪ್ರಕೃತಿ ಸಾಂಗತ್ಯ

Last Updated 13 ಏಪ್ರಿಲ್ 2018, 9:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭಾ ಸದಸ್ಯ ಜೈರಾಮ್‌ ರಮೇಶ್‌ ಅವರ ‘ಇಂದಿರಾ ಗಾಂಧಿ– ಎ ಲೈಫ್‌ ಇನ್‌ ನೇಚರ್‌’ ಕೃತಿಯ ಕನ್ನಡ ಅನುವಾದಿತ ಪುಸ್ತಕ ‘ಇಂದಿರಾ ಗಾಂಧಿ– ಪ್ರಕೃತಿ ಸಾಂಗತ್ಯ’ವನ್ನು ಶುಕ್ರವಾರ ಬಿಡುಗಡೆ ಮಾಡಲಾಯಿತು.

ಇದನ್ನು ಕನ್ನಡಕ್ಕೆ ಅನುವಾದಿಸಿದವರು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ.

ಇಂದಿರಾ ಗಾಂಧಿ ರಾಜಕಾರಣಿಯಲ್ಲ. ಅವರೊಬ್ಬ ಪ್ರಕೃತಿಯ ಕೂಸು. ಪರಿಸರ ಸಂರಕ್ಷಣೆ ಅವರ ಜೀವನದ ಮುಖ್ಯ ಭಾಗವಾಗಿತ್ತು. ಧರ್ಮೋ ರಕ್ಷತಿ ರಕ್ಷಿತಃ ಎಂದು ಹಿರಿಯರ ನಿಲುವಾಗಿದ್ದರೆ, ಪ್ರಕೃತಿ ರಕ್ಷಿತಿ ರಕ್ಷಿತಃ ಎಂಬುದು ಇಂದಿರಾ ನಿಲುವಾಗಿತ್ತು. ಪ್ರಕೃತಿ ಹಾಗೂ ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು ಎಂದು ನಂಬಿದ್ದರು ಎಂದು ಜೈರಾಮ್‌ ರಮೇಶ್‌ ಹೇಳಿದರು.

‘ಇಂದಿರಾ ವಿವಾದಾತ್ಮಕ ವ್ಯಕ್ತಿ. ತುರ್ತುಪರಿಸ್ಥಿತಿ ಘೋಷಣೆ ಸೇರಿದಂತೆ ಕೆಲ ನಿರ್ಧಾರಗಳ ಮೂಲಕ ಟೀಕೆಗೂ ಗುರಿಯಾಗಿದ್ದರು. ತಾಜ್‌ಮಹಲ್‌ನಿಂದ 40 ಕಿ.ಮೀ. ದೂರದಲ್ಲಿ ಪೆಟ್ರೋಲಿಯಂ ಸಂಸ್ಕರಣೆ ಮಾಡಲು ಹಾಗೂ ಕರ್ನಾಟಕ ಕುದುರೆಮುಖದಲ್ಲಿ ಕಬ್ಬಿಣದ ಅದಿರು ತೆಗೆಯಲು ಅನುಮತಿ ನೀಡಿದ್ದರು. ಇದಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ದೇಶದ ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಕಾರಣದಿಂದ ಕುದುರೆಮುಖ ಯೋಜನೆಗೆ ಅನುಮತಿ ನೀಡಿದ್ದರೇ ಹೊರತು, ಸ್ವಇಚ್ಛೆಯಿಂದ ತೆಗೆದುಕೊಂಡ ನಿರ್ಧಾರವಲ್ಲ’ ಎಂದು ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ‘ನಾನು 25 ವರ್ಷಗಳಲ್ಲಿ 300ಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದಿದ್ದೇನೆ. ಇವುಗಳಲ್ಲಿ ಜೈರಾಮ್‌ ರಮೇಶ್‌ ಅವರ ಈ ಕೃತಿ ಅತ್ಯುತ್ತಮವಾದದ್ದು. ಯಾವುದೇ ಕೃತಿಯ ಅನುವಾದವು ಎಣ್ಣೆಯ ರುಚಿಯಿಂದ ತುಪ್ಪದ ರುಚಿಗೆ ತೆಗೆದುಕೊಂಡು ಹೋಗುವಂತಿರಬೇಕು. ಈ ಕೆಲಸವನ್ನು ಕೆ.ಇ.ರಾಧಾಕೃಷ್ಣ ನಿಷ್ಠೆಯಿಂದ ಮಾಡಿದ್ದಾರೆ. ಕನ್ನಡ ಅವತರಣಿಕೆಯಲ್ಲಿ ಯಾವುದೇ ತಪ್ಪುಗಳು ಕಂಡುಬರಲಿಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೈರಾಮ್‌ ಅವರು ಮೂಲತಃ ಬುದ್ಧಿಜೀವಿ, ವಿದ್ವಾಂಸ, ಅನಿರೀಕ್ಷಿತ ರಾಜಕಾರಣಿ. ಈ ಪುಸ್ತಕವನ್ನು ಗಮನಿಸಿದಾಗ ಅವರೊಳಗೆ ತತ್ವಜ್ಞಾನಿ ಇರುವುದು ವೇದ್ಯವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT