ಬುಧವಾರ, ಜುಲೈ 15, 2020
22 °C

ಸಚಿವ ನವಜೋತ್‌ ಸಿಧುರನ್ನು ಜೈಲಿಗೆ ಹಾಕಿ ಎಂದ ಪಂಜಾಬ್‌ ಸರ್ಕಾರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಚಿವ ನವಜೋತ್‌ ಸಿಧುರನ್ನು ಜೈಲಿಗೆ ಹಾಕಿ ಎಂದ ಪಂಜಾಬ್‌ ಸರ್ಕಾರ

ನವದೆಹಲಿ: ನಡುರಸ್ತೆಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಅನ್ವಯ ಮಂತ್ರಿ ನವಜೋತ್‌ ಸಿಂಗ್‌ ಸಿಧು ಜೈಲಿನಲ್ಲಿ ಮೂರು ವರ್ಷ ಕಳೆಯಬೇಕಿದೆ ಎಂದು ಪಂಜಾಬ್‌ ರಾಜ್ಯ ಸರ್ಕಾರ ತಿಳಿಸಿದೆ.

1988ರ ಡಿಸೆಂಬರ್‌ 27ರಂದು ಪಟಿಯಾಲದ ರಸ್ತೆಯಲ್ಲಿ ನಡೆದ ವಾಗ್ವಾದದ ವೇಳೆ ಸಿಧು 65ರ ವಯೋಮಾನದ ಗುರ್‌ನಾಮ್‌ ಸಿಂಗ್‌ ಎಂಬುವರ ತಲೆಗೆ ಹೊಡೆದಿದ್ದರು. ಗುರ್‌ನಾಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು.

ಹರಿಯಾಣ ಮತ್ತು ಪಂಜಾಬ್‌ ಹೈಕೋರ್ಟ್‌ ಸಿಧು ತಪ್ಪಿತಸ್ತ ಎಂದು ತೀರ್ಪು ನೀಡಿದ್ದವು. ಸಿಧು 2007ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಜಾಮೀನು ಪಡೆದಿದ್ದರು. ಆ ಬಳಿಕ ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

‘ಗುರ್‌ನಾಮ್‌ ಸಿಂಗ್‌ರ ಸಾವು ಹೃದಯಾಘಾತದಿಂದ ಆಗಿದೆ’ ಎಂದು ಸಿಧು ವಾದಿಸುತ್ತ ಬಂದಿದ್ದರು. ‘ಗಾಯಗೊಂಡ ಗುರ್‌ನಾಮ್‌ ಹೃದಯಾಘಾತದಿಂದ ಸತ್ತಿದ್ದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ’ ಎಂದು ಪಂಜಾಬ್‌ ಸರ್ಕಾರವೇ ಹೇಳಿಕೆ ನೀಡುವ ಮೂಲಕ ತನ್ನದೇ ಮಂತ್ರಿಮಂಡಲದ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿತು.

‘ಸಾವಿನಲ್ಲಿ ಪಾತ್ರವಿಲ್ಲ ಎಂದು ಸಿಧು ವಾದಿಸುತ್ತಿರುವುದು ಸುಳ್ಳು’ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ ಮತ್ತು ಎಸ್‌.ಕೆ.ಕೌಲ್‌ ಒಳಗೊಂಡ ಪೀಠಕ್ಕೆ ರಾಜ್ಯಸರ್ಕಾರವೇ ತಿಳಿಸಿತ್ತು.

ಈ ಪ್ರಕರಣದಲ್ಲಿ ಸಿಧು ಅವರನ್ನು ಸಮರ್ಥಿಸಿಕೊಳ್ಳಲು ಆಗದು ಎಂದು ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ತಿಳಿಸಿದ್ದರು. ಹೈಕೋರ್ಟ್‌ನಲ್ಲಿ ಸಿಧು ವಿರುದ್ಧ ಮಾಡಿದ್ದ ವಾದವನ್ನೇ ಸುಪ್ರೀಂಕೋರ್ಟ್‌ನಲ್ಲಿ ಸರ್ಕಾರ ಪುನರುಚ್ಛರಿಸಿತ್ತು. 

ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಆಗಿರುವ ಸಿಧು ಪಂಜಾಬ್‌ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ನಿಭಾಯಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.