ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಂಜುಂಡಪ್ಪ ವರದಿಯಿಂದ ಪ್ರಾದೇಶಿಕ ಅಸಮಾನತೆ ನಿವಾರಣೆ’

ಮಲ್ಲಾಡಿಹಳ್ಳಿ: ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಆರ್ಥಿಕ ತಜ್ಞ ಅಬ್ದುಲ್ ಅಜೀಜ್
Last Updated 13 ಏಪ್ರಿಲ್ 2018, 10:12 IST
ಅಕ್ಷರ ಗಾತ್ರ

ಹೊಳಲ್ಕೆರೆ: ಆರ್ಥಿಕ ತಜ್ಞ ಪ್ರೊ.ಡಿ.ಎಂ.ನಂಜುಂಡಪ್ಪ ವರದಿ ಅನುಷ್ಠಾನದಿಂದ ಪ್ರಾದೇಶಿಕ ಅಸಮಾನತೆ ಕಡಿಮೆಯಾಗಿದೆ ಎಂದು ಬೆಂಗಳೂರಿನ ಆರ್ಥಿಕ ತಜ್ಞ ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ಗುರುವಾರ ನಡೆದ ‘ಡಾ.ಡಿ.ಎಂ.ನಂಜುಂಡಪ್ಪ ಅವರ ಆರ್ಥಿಕ ಚಿಂತನೆಗಳು’ ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿದ್ದ ನಂಜುಂಡಪ್ಪ ಅವರು ಪ್ರಾದೇಶಿಕ ಅಸಮಾನತೆ ನಿವಾರಣೆ ಮಾಡಲು ವರದಿಯೊಂದನ್ನು ಸಿದ್ಧಪಡಿಸಿದ್ದರು. ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು, ಅನುದಾನದ ಬಗ್ಗೆ ವರದಿ ನೀಡಿದ್ದರು. ಇದೇ ವರದಿಯ ಆಧಾರದಲ್ಲಿ ಸರ್ಕಾರ ಅನುದಾನ ಬಿಡುಗಡೆ ಮಾಡುವ ಮೂಲಕ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದೆ. ಈಗಲೂ ನಂಜುಂಡಪ್ಪ ವರದಿಯ ಆಧಾರದ ಮೇಲೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ನುರಿತ ಆರ್ಥಿಕ ತಜ್ಞರಾಗಿದ್ದ ನಂಜುಂಡಪ್ಪ ಅಪಾರ ಅನುಭವ ಹೊಂದಿದ್ದರು ಎಂದರು.

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ವಿಚಾರ ಸಂಕಿರಣದ ನೇತೃತ್ವ ವಹಿಸಿ ಮಾತನಾಡಿ, ‘ಶ್ರೇಷ್ಠ ಆರ್ಥಿಕ ತಜ್ಞ, ಚಿಂತಕ ಪ್ರೊ.ಡಿ.ಎಂ.ನಂಜುಂಡಪ್ಪ ಹೊಳಲ್ಕೆರೆ ತಾಲ್ಲೂಕಿನ ದೊಗ್ಗನಾಳು ಗ್ರಾಮದಲ್ಲಿ ಜನಿಸಿದ್ದರು. ವಿದ್ಯಾರ್ಥಿಗಳು ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ಆರ್ಥಿಕ ಸುಧಾರಣೆಗಳನ್ನು ತರಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಈಗಲೂ ಭೌಗೋಳಿಕವಾಗಿ ಆರ್ಥಿಕ ಅಸಮಾನತೆ ಇರುವುದು ಕಳವಳಕಾರಿ ಸಂಗತಿ. ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗಿದ್ದು, ಪ್ರಾಣಿ, ಪಕ್ಷಿ ಸಂಕುಲವೂ ಕಣ್ಮರೆಯಾಗುತ್ತಿದೆ. ಪರಿಸರ ಕೂಡ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ಕಾಡು, ನದಿ, ವೃಕ್ಷಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ’ ಎಂದರು.

ಅನಾಥ ಸೇವಾಶ್ರಮದ ವಿಶೇಷಾಧಿಕಾರಿ ಪ್ರೊ.ಟಿ.ಎಚ್.ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿವಮೂರ್ತಿ ಮುರುಘಾ ಶರಣರು ‘ಕರ್ನಾಟಕದಲ್ಲಿ ಪ್ರಾದೇಶಿಕ ಅಸಮಾನತೆ’ ಪುಸ್ತಕ ಬಿಡುಗಡೆ ಮಾಡಿದರು.ದಾವಣಗೆರೆ ವಿಶ್ವವಿದ್ಯಾಲಯದ ಉಪ ಕುಲಪತಿ ಕೆ.ವೀರಭದ್ರಪ್ಪ, ಪ್ರೊ.ದಾಡೀಬಾವಿ, ಪ್ರೊ.ಬಸವರಾಜ್, ಪ್ರೊ.ಎಸ್.ಪಿ.ರವಿ ಉಪಸ್ಥಿತರಿದ್ದರು. ಉಪನ್ಯಾಸಕ ಎಚ್.ಪಾಲಯ್ಯ ಪಾರ್ಥಿಸಿದರು. ಎನ್.ಎಸ್.ರುದ್ರೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT