ಶುಕ್ರವಾರ, ಡಿಸೆಂಬರ್ 6, 2019
24 °C
ಕೊಡಗು ಗೌಡ ಕುಟುಂಬಗಳ ನಡುವೆ ಕ್ರಿಕೆಟ್ ಟೂರ್ನಿ, ಜಿಲ್ಲಾ ಕ್ರೀಡಾಂಗಣ ಸಜ್ಜು

15ರಿಂದ ‘ಚೆರಿಯಮನೆ’ ಕ್ರಿಕೆಟ್ ಜಂಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

15ರಿಂದ ‘ಚೆರಿಯಮನೆ’ ಕ್ರಿಕೆಟ್ ಜಂಬರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಒಂದೆಡೆ ವಿಧಾನಸಭೆ ಚುನಾವಣೆಯ ಕಾವು. ಮತ್ತೊಂದೆಡೆ ಕ್ರೀಡಾ ಕಲರವ. ಹೌದು ಏಪ್ರಿಲ್‌, ಮೇ ಬಂದರೆ ಸಾಕು; ಕೊಡಗಿನಲ್ಲಿ ಕ್ರೀಡಾ ಜಾತ್ರೆಯೇ ನಡೆಯುತ್ತದೆ. ಈ ಬಾರಿ ಚುನಾವಣೆ ನಡುವೆಯೂ ಕ್ರಿಕೆಟ್‌, ಹಾಕಿ, ಫುಟ್‌ಬಾಲ್‌, ವಾಲಿಬಾಲ್‌, ಕಬಡ್ಡಿ... ಹೀಗೆ ವಿವಿಧ ಬಗೆಯ ಕ್ರೀಡೆಗಳು ಆರಂಭಗೊಳ್ಳುತ್ತಿವೆ.

ಕೊಡಗು ಗೌಡ ಕುಟುಂಬಗಳ ನಡುವೆ ನಡೆಯುವ ಕ್ರಿಕೆಟ್ ಟೂರ್ನಿಯ ಆತಿಥ್ಯ ಈ ಬಾರಿ ಚೆರಿಯಮನೆ ಕುಟುಂಬಕ್ಕೆ ಲಭಿಸಿದೆ. 15ರಿಂದ ಆರಂಭಗೊಳ್ಳಲಿದ್ದು, ಅದಕ್ಕೆ ಮಡಿಕೇರಿ ಜನರಲ್‌ ತಿಮ್ಮಯ್ಯ ಕ್ರೀಡಾಂಗಣ ಸಜ್ಜಾಗಿದೆ.

ಕ್ರೀಡಾಂಗಣದಲ್ಲಿ ಎರಡು ಪ್ರತ್ಯೇಕ ಅಂಕಣ ನಿರ್ಮಿಸಲಾಗಿದೆ. ಏಕಕಾಲದಲ್ಲಿ ಎರಡು ಕಡೆಯೂ ಪಂದ್ಯಗಳು ನಡೆಯಲಿವೆ. ಇದು 19ನೇ ವರ್ಷದ ಕ್ರಿಕೆಟ್‌ ಹಬ್ಬವಾಗಿದ್ದು ಸಮುದಾಯದಲ್ಲಿ ಸಂಭ್ರಮ ಮೇಳೈಸಿದೆ.

ಮೇ 3ರಂದು  ಪ್ರಿ ಕ್ವಾರ್ಟರ್ ಹಂತದ ಪಂದ್ಯಗಳು, 4ರಂದು ಕ್ವಾರ್ಟರ್ ಹಾಗೂ 5ರಂದು ಫೈನಲ್‌ ಪಂದ್ಯ ನಡೆಯಲಿದೆ ಎಂದು ಯುವ ವೇದಿಕೆ ಕಾರ್ಯದರ್ಶಿ ರೋಷನ್ ತಿಳಿಸಿದ್ದಾರೆ.

ಶುಕ್ರವಾರ (ಏ. 13) ಮೈದಾನದಲ್ಲಿ ಪೂಜೆ ನಡೆಯಲಿದೆ. ಕಳೆದ ವರ್ಷ ಪೈಕೇರ ಕುಟುಂಬದವರು ಆತಿಥ್ಯ ವಹಿಸಿಕೊಂಡಿದ್ದರು. ‘ಪೈಕೇರ’ ಕಪ್‌ಗಿಂತಲೂ ಹೆಚ್ಚಿನ ತಂಡಗಳು ಈ ಬಾರಿ ನೋಂದಣಿ ಮಾಡಿಕೊಂಡಿವೆ. ಪ್ರತಿನಿತ್ಯ 13 ಪಂದ್ಯಗಳು ನಡೆಯಲಿವೆ. ಪ್ರತಿ ಪಂದ್ಯವನ್ನು 8 ಓವರ್‌ಗೆ ಸೀಮಿತ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

22ರಂದು ಮಹಿಳೆ ಹಾಗೂ ಪುರುಷರಿಗೆ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಥ್ರೋಬಾಲ್‌ ಸಹ ನಡೆಯಲಿದೆ. ಆಸಕ್ತ ತಂಡಗಳು ಹೆಸರು ನೋಂದಾಯಿಸಿಕೊಳ್ಳಬಹುದು. ಮೊ: 9731009841 ಸಂಪರ್ಕಿಸಬಹುದು.

ಉದ್ಘಾಟನೆ: 15ರಂದು ಕ್ರಿಕೆಟ್‌ ಜಂಬರದ ಉದ್ಘಾಟನೆ ನಡೆಯಲಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ, ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಪಾಲ್ಗೊಳ್ಳಲಿದ್ದಾರೆ.

ಚೆರಿಯಮನೆ ಕ್ರಿಕೆಟ್ ಕಪ್ ಕ್ರೀಡಾ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್‌ ಸದಸ್ಯ ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳಲಿದ್ದಾರೆ.

ಏ. 18ರಂದು ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಚೆರಿಯಮನೆ ಕುಟುಂಬದವರ ಸಹಯೋಗದಲ್ಲಿ ಅಂದು ಬೆಳಿಗ್ಗೆ 9ಕ್ಕೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಚ್.ಟಿ.ಅನಿಲ್ ಶಿಬಿರಕ್ಕೆ ಚಾಲನೆ ನೀಡುವರು. ಅದೇ ದಿನ ಬೆಳಿಗ್ಗೆ 9.30ರಿಂದ ನೇತ್ರ ತಪಾಸಣಾ ಶಿಬಿರ, 10ಕ್ಕೆ ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾಹಿತಿಗಾಗಿ ಮೊಬೈಲ್‌: 94493 61933 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಮಳೆಯ ಆತಂಕ : 15 ದಿನಗಳಿಂದ ಈಚೆಗೆ ಕೊಡಗು ಜಿಲ್ಲೆಯಲ್ಲಿ ಎರಡು ದಿನಕ್ಕೊಮ್ಮೆ ಮಳೆ ಸುರಿಯುತ್ತಿದ್ದು ಕ್ರೀಡಾ ಹಬ್ಬಗಳ ಸಂಭ್ರಮಕ್ಕೆ ಅಡ್ಡಿ ಉಂಟಾಗುವ ಆತಂಕವಿದೆ. ಇನ್ನು ನಾಪೋಕ್ಲು ಕ್ರೀಡಾಂಗಣದಲ್ಲೂ 15ರಿಂದಲೇ ಕುಲ್ಲೇಟಿರ ಹಾಕಿ ಹಬ್ಬಕ್ಕೂ ಚಾಲನೆ ಸಿಗಲಿದೆ. ಆ ಭಾಗದಲ್ಲಿ ಮಳೆ ಹೆಚ್ಚು. ಹೀಗಾಗಿ, ಹಾಕಿ ಹಬ್ಬದ ಸಂಘಟಕರೂ ‘ವರುಣ ಬಿಡುವು ನೀಡಪ್ಪ’ ಎಂದು ಬೇಡಿಕೊಳ್ಳುತ್ತಿದ್ದಾರೆ.

 

 

ಪ್ರತಿಕ್ರಿಯಿಸಿ (+)