ಮಂಗಳವಾರ, ಆಗಸ್ಟ್ 11, 2020
21 °C
ಬಗೆ ಬಗೆಯ ಹಲಸಿನ ತಳಿ ನೋಡಿ ವಿಸ್ಮಿತವಾದ ತಂಡ, ಡ್ರ್ಯಾಗನ್‌ ತಂದ ಮೋಡಿ

ತೋಟಗಾರಿಕಾ ಸಂಸ್ಥೆಗೆ ವಿದೇಶಿಗರ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋಟಗಾರಿಕಾ ಸಂಸ್ಥೆಗೆ ವಿದೇಶಿಗರ ಭೇಟಿ

ತುಮಕೂರು: ಇಲ್ಲಿನ ಹಿರೇಹಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಕ್ಕೆ ಏಳು ದೇಶಗಳ ತಂಡ ಭೇಟಿ ನೀಡಿ ಕೇಂದ್ರದಲ್ಲಿ ಬೆಳೆದಿರುವ ವಿವಿಧ ಬಗೆಯ ಹಲಸಿನ ತಳಿಗಳನ್ನು ನೋಡಿ ಮೂಕ ವಿಸ್ಮಿತಗೊಂಡಿತು.

ನೈಜೀರಿಯಾ, ಮಾಲ್ವಿಯಾ, ಕೀನ್ಯಾ, ಜಾಂಬಿಯಾ, ಇಥೋಪಿಯ, ಉಗಾಂಡ, ತಾಂಜೇನಿಯಾ ದೇಶಗಳ ಅಲ್ಲಿನ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈಚೆಗೆ ಭೇಟಿ ನೀಡಿದ್ದರು.

ವಿವಿಧ ತಳಿಯ ಹಲಸಿನ ಮರಗಳು, ಚೇಳೂರು ಹಲಸಿನ ವಿಶಿಷ್ಟತೆ ಬಗ್ಗೆ ಕೇಂದ್ರದ ಮುಖ್ಯಸ್ಥ ಡಾ.ಕರುಣಾಕರನ್‌ ಮಾಹಿತಿ ನೀಡಿದರು. ಸಿದ್ದು ಹಲಸಿನ ಬಣ್ಣಕ್ಕೆ ಮನ ಸೋತ ತಂಡದ ಸದಸ್ಯ ನೈಜೀರಿಯಾದ ಫಸದೆ ಅಡ್ವೇಲ್‌ ಅದೇನ್ಸಿಯಾ ಅವರು, ‘ಆಫ್ರಿಕಾ ದೇಶಗಳಲ್ಲಿ ಈ ತಳಿ ಬೆಳೆಯಲು ಸಾಧ್ಯವಾ? ದೇಶದ ವಿವಿಧ ತೋಟಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿದ್ದೆವು. ಎಲ್ಲೂ ಇಂಥಹ ಅನುಭವ ಆಗಿರಲಿಲ್ಲ. ಇದೊಂದು ಕಲಿಕೆಯ ತಾಣವಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.

’ನಮ್ಮ ದೇಶಗಳಿಗೆ ಹೋಲಿಸಿಕೊಂಡರೆ ಭಾರತ ಕೃಷಿ ಕ್ಷೇತ್ರದಲ್ಲಿ ತುಂಬಾ ಮುಂದುವರೆದಿದೆ. ಇಲ್ಲಿಯ ಕೃಷಿ ಪದ್ಧತಿ ಖುಷಿ ತಂದಿದೆ’ ಎಂದರು.

‘ನಮ್ಮ ದೇಶಗಳಲ್ಲಿ ಹಲಸಿನ ಬೆಳೆಯನ್ನು ಬೆಳೆಯಲು ಭಾರತ ಸರ್ಕಾರದ ಸಹಕಾರ ಕೋರಲಾಗುವುದು. ಇಲ್ಲಿನ ಪ್ರಾಯೋಗಿಕತೆ ಇಷ್ಟವಾಯಿತು’ ಎಂದು ಮೆಚ್ಚುಗೆ ಸೂಚಿಸಿದರು. ಮಾವಿನ ಸಸಿಗೆ ಕಸಿ ಕಟ್ಟುವುದನ್ನು ತಂಡಕ್ಕೆ ತಿಳಿಸಿಕೊಡಲಾಯಿತು. ಒಬ್ಬರಿಗೆ ತರಬೇತಿ ಸಹ ನೀಡಲಾಯಿತು.

’ಬಿಸಿಲು ಪ್ರದೇಶಗಳಲ್ಲಿ ಡ್ರ್ಯಾಗನ್‌ ಹಣ್ಣು ಬೆಳೆಯ ಬಹುದೇ ಎಂಬ ಪ್ರಯೋಗ ನಡೆಸಲಾಗುತ್ತಿದೆ. ಪ್ರಯೋಗ ಯಶಸ್ವಿಯಾಗಿದೆ. ಕಳೆದ ವರ್ಷ ಹಣ್ಣು ಬಿಟ್ಟಿತ್ತು. ಕಡಿಮೆ ನೀರು, ಕಡಿಮೆ ವೆಚ್ಚದಲ್ಲಿ ಈ ಹಣ್ಣಿನ ಗಿಡಗಳನ್ನು ಬೆಳೆಯಬಹುದು. ಒಮ್ಮೆ ನೆಟ್ಟರೆ 50 ವರ್ಷ ಕಾಲ ಬಾಳಿಕೆ ಬರಲಿವೆ. ಹಣ್ಣಿಗೆ ಉತ್ತಮ ಬೇಡಿಕೆ ಇದೆ. ರಫ್ತು ಸಹ ಮಾಡಬಹುದು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಲಾಭದಾಯಕ ಬೆಳೆಯಾಗಿದೆ’ ಎಂದು ಡಾ.ಕರುಣಾಕರನ್‌ ವಿವರಿಸಿದರು.ಕೇಂದ್ರದಲ್ಲಿ ಬೆಳೆದಿರುವ ಬೆಣ್ಣೆಹಣ್ಣು, ಪರಂಗಿ ಹಣ್ಣು, ವಿವಿಧ ಬಗೆಯ ನಿಂಬೆ ತಳಿಗಳನ್ನು ತಂಡಕ್ಕೆ ಪರಿಚಯಿಸಲಾಯಿತು.

**

ಬಯಲು ಸೀಮೆಯಲ್ಲಿ ಯಾವೆಲ್ಲ ಹಣ್ಣಿನ ತಳಿಗಳನ್ನು ಬೆಳೆಯಬಹುದು ಎಂಬ ಬಗ್ಗೆ ಪ್ರಯೋಗ ಮಾಡಲಾಗುತ್ತಿದೆ. ಹಲಸು ತಳಿ ಸಂಗ್ರಹ ಮುಂದುವರೆದಿದೆ –  ಡಾ.ಕರುಣಾಕರನ್‌,ಮುಖ್ಯಸ್ಥರು, ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ. 

**

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.