4
ನಾಯಕನಹಟ್ಟಿ ದೇವಾಲಯದ ಎದುರು ಗುಂಪುಗಳ ಮಾರಾಮಾರಿ, ಲಾಠಿ ಪ್ರಹಾರ

ಶ್ರೀರಾಮುಲು- ತಿಪ್ಪೇಸ್ವಾಮಿ ಬೆಂಬಲಿಗರ ಘರ್ಷಣೆ

Published:
Updated:
ಶ್ರೀರಾಮುಲು- ತಿಪ್ಪೇಸ್ವಾಮಿ ಬೆಂಬಲಿಗರ ಘರ್ಷಣೆ

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಮೊಳಕಾಲ್ಮುರು ಕ್ಷೇತ್ರದಿಂದ ಬಿಜೆಪಿ ಶಾಸಕ ಎಸ್.ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ಕೈತಪ್ಪಿರುವುದರ ವಿರುದ್ಧ ಅವರ ಬೆಂಬಲಿಗರು, ತಿಪ್ಪೇರುದ್ರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ದೇವಾಲಯದಲ್ಲಿ ಪೂಜೆ ಸಲ್ಲಿಸಿ ಶ್ರೀರಾಮುಲು ಚುನಾವಣಾ ಪ್ರಚಾರ ಆರಂಭಿಸಬೇಕಿತ್ತು. ಅದನ್ನು ತಡೆಯಲು ಬೆಳಿಗ್ಗೆ 7 ಗಂಟೆಯಿಂದಲೇ ಪ್ರತಿಭಟನೆ ನಡೆಸಿದರು. ಆರಂಭದಲ್ಲಿ ಮಹಿಳೆಯರು ಪೊರಕೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಕೆಲವು ಬೆಂಬಲಿಗರು, ರಸ್ತೆ ಮೇಲೆ ಉರುಳಾಡಿದರು.

'ಅಣ್ಣಾ ನಿನಗೇ ಟಿಕೆಟ್‌ ಎಂದು ತಿಪ್ಪೇಸ್ವಾಮಿ ಅವರಿಗೆ ಕೊಟ್ಟಿದ್ದ ಮಾತನ್ನು ಶ್ರೀರಾಮುಲು ತಪ್ಪಿದ್ದಾರೆ. ಅವರು ವಚನಭ್ರಷ್ಟರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ ಮತ್ತು ಶ್ರೀರಾಮುಲು ಅವರ ಬೆಂಬಲಿಗರ ನಡುವೆ ಮಾರಾಮಾರಿ ಶುರುವಾಯಿತು. ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ವೆಂಕಟಸ್ವಾಮಿ ಅವರ ಮೇಲೆ ಹಲ್ಲೆ ನಡೆಯಿತು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೂ ಪ್ರತಿಭಟನೆ, ಕೂಗಾಟ ಮುಂದುವರಿದಿತ್ತು. ಬೆಳಿಗ್ಗೆ 9 ಗಂಟೆಗೆ ನಾಯಕನಹಟ್ಟಿ ದೇವಸ್ಥಾನಕ್ಕೆ ಬರಬೇಕಿದ್ದ ಶ್ರೀರಾಮುಲು, ಗಲಾಟೆ ಹಿನ್ನೆಲೆಯಲ್ಲಿ 11 ಗಂಟೆ ಮೇಲೆ ಪತ್ನಿ ಸಹಿತ ದೇವಾಲಯಕ್ಕೆ ಬಂದರು.

ಪೊಲೀಸ್ ರಕ್ಷಣೆಯಲ್ಲಿ ಅವರು ಪೂಜೆ ಮುಗಿಸಿ, ಹೊರಬರುತ್ತಿದ್ದಂತೆ ಪ್ರತಿಭಟನೆ ತೀವ್ರವಾಯಿತು. ಪ್ರತಿಭಟನಾಕಾರರು ಚಪ್ಪಲಿ, ಕಲ್ಲು ತೂರಾಟ ನಡೆಸಿದರು. ಈ ವೇಳೆ ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಗಾಯಗೊಂಡರು. ಶ್ರೀರಾಮುಲು ಕಾರು ಹತ್ತಿ ಹೊರಡುತ್ತಿದ್ದಂತೆ, ಕಾರಿನ ಮೇಲೂ ಕಲ್ಲು, ಚಪ್ಪಲಿ ತೂರಾಟ ನಡೆಯಿತು.

ವಿಕೋಪಕ್ಕೆ ತಿರುಗುತ್ತಿದ್ದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈ ವೇಳೆ ದೇವಾಲಯದ ಆವರಣ ಅಕ್ಷರಶಃ ರಣಾಂಗಣವಾಯಿತು.

ನಾಯಕನಹಟ್ಟಿಯಿಂದ ದೊಡ್ಡ ಉಳ್ಳಾರ್ತಿ, ಘಟಪರ್ತಿ, ಗೌರಸಮುದ್ರ ದೇವಸ್ಥಾನಗಳಿಗೆ ಭೇಟಿ ನೀಡಲು ಹೊರಟ ಶ್ರೀರಾಮುಲು ದಾರಿಯುದ್ದಕ್ಕೂ ತಿಪ್ಪೇಸ್ವಾಮಿ ಬೆಂಬಲಿಗರ ಪ್ರತಿಭಟನೆ ಎದುರಿಸಬೇಕಾಯಿತು.

**

ಇಂಥ ಪ್ರತಿಭಟನೆಗೆ ಜಗ್ಗುವವನಲ್ಲ. ಪಕ್ಷವು ನಾನಾ ಲೆಕ್ಕಾಚಾರಗಳೊಂದಿಗೆ ಟಿಕೆಟ್ ಘೋಷಣೆ ಮಾಡಿದೆ. ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಮೊಳಕಾಲ್ಮುರು ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ.

-ಶ್ರೀರಾಮುಲು, ಸಂಸದ (ಮಾಧ್ಯಮದವರೊಂದಿಗೆ ಮಾತನಾಡುತ್ತಾ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry