ಭಾನುವಾರ, ಡಿಸೆಂಬರ್ 15, 2019
19 °C

ಯಂತ್ರಗಳು ಹಾಗೂ ಮಾನವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಂತ್ರಗಳು ಹಾಗೂ ಮಾನವ

ಜಿ. ಕೃಷ್ಣ ಕುಮಾರ್‌

ಆರ್ಥಿಕ ತಜ್ಞರಾದ ಪಾಲ್‌ ಕ್ರುಗ್‌ಮನ್‌ ಹಾಗೂ ರಘುರಾಮ ರಾಜನ್ ಅವರು ಇತ್ತೀಚೆಗೆ ನೀಡಿರುವ ಹೇಳಿಕೆಗಳು ದೇಶಿ ಐ.ಟಿ. ಉದ್ಯಮದ ಭವಿಷ್ಯದ ಬಗ್ಗೆ ಕಳವಳ ಸೃಷ್ಟಿಸಿದೆ. ಸಾಫ್ಟ್‌ವೇರ್‌ ಸೇವೆಗಳ ರಫ್ತಿನಲ್ಲಿ ಮುಂಚೂಣಿಯಲ್ಲಿ ಇರುವ ಭಾರತ, ಕೃತಕ ಬುದ್ಧಿಮತ್ತೆಯ (Artificial Intelligence–AI) ಬೆದರಿಕೆಯಿಂದಾಗಿ ಮಹತ್ವ ಕಳೆದುಕೊಳ್ಳಬಹುದು. ಇದರಿಂದ ನಿರುದ್ಯೋಗವು ಗಮನಾರ್ಹವಾಗಿ ಹೆಚ್ಚಲಿದೆ ಎಂದಿರುವುದು ಐ.ಟಿ. ವಲಯದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ.

ಕೃತಕ ಬುದ್ಧಿಮತ್ತೆ (ಎ.ಐ) ತಂದೊಡ್ಡಲಿರುವ ಅಡಚಣೆಯ ಕಾರಣಕ್ಕೆ ಐ.ಟಿ. ಉದ್ಯಮ ಮತ್ತು ಇಲ್ಲಿ ದುಡಿಯುತ್ತಿರುವ ತಂತ್ರಜ್ಞರು ಪ್ರಸ್ತುತವಾಗಿರಲು ಏನು ಮಾಡಬೇಕು ಎನ್ನುವ ಪ್ರಶ್ನೆ ಇಲ್ಲಿ ಸಹಜವಾಗಿ ಉದ್ಭವಿಸುತ್ತದೆ. ಯಂತ್ರಗಳು ಪ್ರದರ್ಶಿಸುವ ಜಾಣತನವೇ ಎ.ಐ ಆಗಿದೆ. ಕಂಪ್ಯೂಟರ್‌ಗಳು ನಿರಂತರವಾಗಿ ಕಲಿಯುತ್ತಿರುತ್ತವೆ. ಮನುಷ್ಯರಂತೆ ಅರಿವಿನ ಅನುಕರಣೆ ಮಾಡುತ್ತಿರುತ್ತವೆ. ಎ.ಐ ಈಗಾಗಲೇ ನಮ್ಮ ಬದುಕನ್ನು ಗಮನಾರ್ಹವಾಗಿ ಆವರಿಸಿಕೊಂಡಿದೆ. ಧ್ವನಿ ಆಧಾರಿತ ಮಾಹಿತಿ ಶೋಧ ಮತ್ತು ಸ್ವಯಂ ಚಲಿಸುವ ಕಾರ್‌ಗಳು ಎ.ಐಗೆ ಅತ್ಯುತ್ತಮ ನಿದರ್ಶನವಾಗಿವೆ.

ಗಾರ್ಟ್ನರ್‌ನ ಇತ್ತೀಚಿನ ತಂತ್ರಜ್ಞಾನ ವರದಿ ಪ್ರಕಾರ, ಎ.ಐ, ಮುಂದಿನ 2 ರಿಂದ 5 ವರ್ಷಗಳಲ್ಲಿ ತಯಾರಿಕಾ ಚಟುವಟಿಕೆಗಳಿಗೆ ನೆರವಾಗಲಿದೆ. ಇದರ ಪರಿಣಾಮಗಳನ್ನು ಅರ್ಥೈಸಿಕೊಳ್ಳುವ ಮುನ್ನ, ಐ.ಟಿ. ಉದ್ದಿಮೆಯು ಈ ತಂತ್ರಜ್ಞಾನ ಕ್ರಾಂತಿಯಿಂದ ಹೇಗೆ ವ್ಯವಹರಿಸುತ್ತಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ತಂತ್ರಜ್ಞಾನ ವಿಕಸನವು ಕೈಗಾರಿಕೆ, ವಾಹನ ತಯಾರಿಕೆ, ಆರೋಗ್ಯ ಮತ್ತು ಬ್ಯಾಂಕಿಂಗ್‌ ಕ್ಷೇತ್ರಗಳ ಮೇಲೆ ವಿಭಿನ್ನ ನೆಲೆಗಳಲ್ಲಿ ಪರಿಣಾಮ ಬೀರಿದೆ. ಕೆಲ ತಂತ್ರಜ್ಞಾನಗಳು 50 ವರ್ಷಗಳ ಕಾಲ ಯಾವುದೇ ಬದಲಾವಣೆ ಕಂಡಿಲ್ಲ. ಇನ್ನೊಂದೆಡೆ, ಪ್ರತಿ ವರ್ಷವೂ ಕೆಲವು ತಂತ್ರಜ್ಞಾನಗಳು ಬದಲಾಗುತ್ತಲೇ ಇರುತ್ತವೆ.

ಹಳೆಯ ತಂತ್ರಜ್ಞಾನವನ್ನು ಮುಂದುವರೆಸಿಕೊಂಡು ಹೋಗುವಂತೆ ಒಂದೆಡೆ ಎಂಜಿನಿಯರುಗಳಿಗೆ ಉತ್ತೇಜನ ನೀಡುವುದು, ಇನ್ನೊಂದೆಡೆ, ಹೊಸ ಹೊಸ ತಂತ್ರಜ್ಞಾನದ ಜತೆ ಒಟ್ಟೊಟ್ಟಿಗೆ ಸಾಗಲು ಇನ್ನೊಂದಿಷ್ಟು ಎಂಜಿನಿಯರುಗಳನ್ನು ಮನವೊಲಿಸುವುದು ಐ.ಟಿ. ಉದ್ಯಮವು ಸದ್ಯಕ್ಕೆ ಎದುರಿಸುತ್ತಿರುವ ಅತಿದೊಡ್ಡ ಸವಾಲಾಗಿದೆ.

ಯಂತ್ರಗಳು ಮಾನವನನ್ನು ಮೀರಿಸಲಿವೆಯೇ?: ಕೃತಕ ಬುದ್ಧಿಮತ್ತೆಯು ಸದ್ಯದ ಮತ್ತು ಭವಿಷ್ಯದ ಐ.ಟಿ. ಉದ್ಯೋಗಗಳಿಗೆ ಮಾರಕವಾಗಲಿದೆ, ಐ.ಟಿ. ಉದ್ಯಮವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಿದೆ ಎಂದು ಆತಂಕ ಪಡಬೇಕಾಗಿಲ್ಲ. ಸ್ವಯಂಚಾಲಿತ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ತಂತ್ರಜ್ಞರು ಬೇಕಾಗುತ್ತಾರೆ. ತಂತ್ರಜ್ಞಾನ ಯುಗವು 50 ವರ್ಷಗಳಷ್ಟು ಮಾತ್ರ ಹಳೆಯದಾಗಿದೆ. ತಂತ್ರಜ್ಞಾನ ಕ್ರಾಂತಿಯು ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಲೇ ಬಂದಿರುವುದನ್ನು ಐತಿಹಾಸಿಕ ಅಂಕಿ ಅಂಶಗಳು ದೃಢಪಡಿಸುತ್ತವೆ.

ಇತ್ತೀಚಿನ ಕೆಲ ವರ್ಷಗಳಿಂದ ಐ.ಟಿ. ಕ್ಷೇತ್ರದಲ್ಲಿ ಸಂವಹನಕ್ಕೆ ಸಂಬಂಧಿಸಿದ ಕೆಲ ಉದ್ಯೋಗ ಅವಕಾಶಗಳನ್ನು ಕೃತಕ ಬುದ್ಧಿಮತ್ತೆಯು ಕಸಿದುಕೊಂಡಿದೆ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿದಾಗ ನೆರವಿಗೆ ಮುಂದಾಗುವ ಕಿಂಡಿಯೊಂದು ಅಲ್ಲಿ ತೆರೆದುಕೊಳ್ಳುತ್ತದೆ. ಆ ಸ್ವಯಂಚಾಲಿತ ಸಂವಹನಾ ವ್ಯವಸ್ಥೆಯು (chatbot) ಬಳಕೆದಾರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಮಾಡುತ್ತದೆ. ಹೀಗೆ, ಸ್ವಯಂಚಾಲಿತ ವ್ಯವಸ್ಥೆಯು ಅನೇಕ ಉದ್ಯೋಗಗಳನ್ನು ಕಬಳಿಸುತ್ತಿದೆ ಮತ್ತು ಕೆಳಹಂತದಲ್ಲಿನ ಕೆಲಸಗಳನ್ನು ಮಾನವನ ಪಾಲಿಗೆ ಇಲ್ಲದಂತೆ ಮಾಡುತ್ತಿದೆ. ಹೀಗಾಗಿ ಕಾಲಕ್ರಮೇಣ ನಾವು ಯಂತ್ರಗಳ ಕಾರ್ಯಪಡೆ ಜತೆಗೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಆದರೆ, ಸಮರ್ಪಕವಾದ ಸಂಶೋಧನಾ ಮಾದರಿಯೊಂದನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಯಶಸ್ವಿಯಾದರೆ, ಎ.ಐ ಕಬಳಿಸುವ ಉದ್ಯೋಗಗಳಿಗಿಂತ ಹೊಸದಾಗಿ ಸೃಷ್ಟಿಸುವ ಉದ್ಯೋಗಗಳ ಸಂಖ್ಯೆ ಹೆಚ್ಚಿಗೆ ಇರಲಿದೆ.

ಸದ್ಯಕ್ಕೆ ಅಸ್ತಿತ್ವದಲ್ಲಿ ಇರುವ ಅನೇಕ ಉದ್ಯೋಗಗಳು 20 ರಿಂದ 30 ವರ್ಷಗಳ ಹಿಂದೆ ಇದ್ದಿರಲಿಲ್ಲ. ಉದ್ಯೋಗ ಸುರಕ್ಷತೆ ಬಗ್ಗೆ ಈಗ ವ್ಯಕ್ತವಾಗುತ್ತಿರುವ ಕಳವಳ ಆ ದಿನಗಳಲ್ಲೂ ಕಂಡು ಬರುತ್ತಿತ್ತು. ಮಾನವ ಮತ್ತು ಯಂತ್ರಗಳು ಜತೆ ಜತೆಯಾಗಿ ಇರಬೇಕಾಗಿದೆ ಎನ್ನುವುದು ಇದರ ಒಟ್ಟಾರೆ ತಾತ್ಪರ್ಯವಾಗಿದೆ.

ಪೂರ್ಣಾವಧಿ ಕೆಲಸಗಳಿಗೆ ವಿದಾಯ: ಉದ್ಯೋಗ ಕ್ಷೇತ್ರದಲ್ಲಿ ಎದುರಾಗುತ್ತಿರುವ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಐ.ಟಿ. ಉದ್ಯೋಗಿಗಳು ಹೊಸ ವಿಷಯಗಳನ್ನು ಕಲಿಯುವ, ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚೆಚ್ಚು ಪರಿಣತಿ ಸಾಧಿಸುವ ಕಡೆಗೆ ಗಮನ ನೀಡಬೇಕಾಗಿದೆ. ವೈಯಕ್ತಿಕ ಆಸಕ್ತಿ ಮತ್ತು ಉದ್ಯೋಗದಾತ ಸಂಸ್ಥೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ನೆಲೆಯಲ್ಲಿ ತಮ್ಮ ವೃತ್ತಿ ಪರಿಣತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಹೊಸ ವಿಷಯಗಳನ್ನು ಕಲಿತು, ಅಳವಡಿಸಿಕೊಳ್ಳಲು ವ್ಯಕ್ತಿಗಳಲ್ಲಿ ಶಿಸ್ತು ಮತ್ತು ಸ್ವಇಚ್ಛೆ ಮುಖ್ಯವಾಗಿರುತ್ತದೆ. ಈ ವಿಷಯದಲ್ಲಿ ಐ.ಟಿ. ಉದ್ಯೋಗಿಗಳು ಸರಿಯಾದ ಧೋರಣೆ, ವಿಶ್ಲೇಷಣಾತ್ಮಕ ಕೌಶಲ, ಕಾರ್ಯಕ್ಷೇತ್ರದ ಸಮಗ್ರ ತಿಳಿವಳಿಕೆ ಮತ್ತು ಹೊಸ ಚಿಂತನೆಗಳನ್ನು ಕಾರ್ಯಗತಗೊಳಿಸುವ ಪರಿಣತಿ ರೂಢಿಸಿಕೊಂಡರೆ ಮಾತ್ರ ಪ್ರಸ್ತುತರಾಗಲು ಸಾಧ್ಯವಾಗಲಿದೆ.

ಐ.ಟಿ ಸಂಸ್ಥೆಗಳೂ ಉದ್ದಿಮೆಯಲ್ಲಿ ತಮ್ಮ ಪ್ರಸ್ತುತತೆ ಕಾಯ್ದುಕೊಳ್ಳಲು ಚುರುಕುತನ ತೋರಬೇಕಾಗಿದೆ. ಕಾಯಂ ಉದ್ಯೋಗ ಬದಲಿಗೆ ಸ್ವತಂತ್ರವಾಗಿ ಕೆಲಸ ಮಾಡುವುದು ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಈ ಸ್ವತಂತ್ರ ಕೆಲಸಗಾರರು ತಂತ್ರಜ್ಞಾನ ಬದಲಾವಣೆಗೆ ಹೆಚ್ಚು ಸುಲಭವಾಗಿ ಒಡ್ಡಿಕೊಳ್ಳುತ್ತಿದ್ದಾರೆ. ಕೆಲಸಗಾರ ದೂರದಲ್ಲಿ ಇದ್ದುಕೊಂಡೇ ತನ್ನ ಪಾಲಿನ ಹೊಣೆ ನಿರ್ವಹಿಸುವ ಹೊಸ ತಲೆಮಾರಿನ ಕೆಲಸದ ವೈಖರಿಯನ್ನು ಕಂಪನಿಗಳು ಒಪ್ಪಿಕೊಳ್ಳಬೇಕಾಗಿದೆ.

ಭಾರತದಲ್ಲಿನ ಎಂಜಿನಿಯರಿಂಗ್‌ ಕಾಲೇಜ್‌ಗಳು ಉದ್ಯೋಗ ಅವಕಾಶಗಳಿಗಾಗಿ ಐ.ಟಿ. ಉದ್ದಿಮೆಯನ್ನೇ ಹೆಚ್ಚಾಗಿ ಅವಲಂಬಿಸಿವೆ. ಉದ್ಯಮದ ಅಗತ್ಯಗಳನ್ನು ಪೂರೈಸುವ ಸಿದ್ಧ ತಂತ್ರಜ್ಞರನ್ನು ಪೂರೈಸುವುದು ಇವುಗಳಿಗೆ ಸವಾಲಿನ ಕೆಲಸವಾಗಿದೆ. ಪ್ರತಿ ವರ್ಷ 8 ಲಕ್ಷ ವಿದ್ಯಾರ್ಥಿಗಳು ಹೊರ ಬರುತ್ತಾರೆ. ಇವರಲ್ಲಿ ಶೇ 55ರಷ್ಟು ವಿದ್ಯಾರ್ಥಿಗಳು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಉದ್ಯೋಗ ಬಯಸುತ್ತಾರೆ. ಆದರೆ, ಅವರಲ್ಲಿ ಕೇವಲ ಶೇ 3 ರಷ್ಟು ವಿದ್ಯಾರ್ಥಿಗಳು ಇಂತಹ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ.

ಎಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶದ ಮೇಲೆ ಕೆಲ ನಿಬಂಧನೆ ವಿಧಿಸುವ ಅಗತ್ಯ ಇದೆ. ತನ್ನ ಅಗತ್ಯಗಳನ್ನು ಈಡೇರಿಸಲು ಸನ್ನದ್ಧರಾಗಿರುವ ಸಾಫ್ಟ್‌ವೇರ್‌ ಎಂಜಿನಿಯರುಗಳನ್ನು ರೂಪಿಸಲು ಉದ್ಯಮ ವಲಯವೂ ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸಬೇಕಾಗಿದೆ.

ಮಾನವ ಮತ್ತು ಯಂತ್ರಗಳು ಜತೆ ಜತೆಯಾಗಿಯೇ ಅಸ್ತಿತ್ವದಲ್ಲಿ ಇರುವಂತಹ ಪರಿಸ್ಥಿತಿಗೆ ಹೊಂದಿಕೊಳ್ಳುವ ಹೊಸ ತಲೆಮಾರಿನ ಎಂಜಿನಿಯರುಗಳನ್ನು ಸನ್ನದ್ಧಗೊಳಿಸುವ ಸವಾಲು ನಮ್ಮ ಮುಂದೆ ಇದೆ. ಇದನ್ನು ಸಮರ್ಥವಾಗಿ ಎದುರಿಸದಿದ್ದರೆ ಕ್ರುಗ್‌ಮನ್ ಅವರ ಭವಿಷ್ಯವಾಣಿ ನಿಜವಾಗಲೂಬಹುದು.

ಲೇಖಕ ಐ.ಟಿ. ಉದ್ಯೋಗಿ

ಪ್ರತಿಕ್ರಿಯಿಸಿ (+)