ಬುಧವಾರ, ಆಗಸ್ಟ್ 5, 2020
21 °C

ಕೆಪಿಎಸ್‌ಸಿ ಅಕ್ರಮ ಕಠಿಣ ಕ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿ ಅಕ್ರಮ ಕಠಿಣ ಕ್ರಮ ಅಗತ್ಯ

ಕರ್ನಾಟಕ ಲೋಕಸೇವಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆ. ಇತ್ತೀಚಿನ ದಿನಗಳಲ್ಲಿ ಇದು ಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಸ್ವಜನ ಪಕ್ಷಪಾತ, ವಂಚನೆ, ಭ್ರಷ್ಟಾಚಾರ ಇಲ್ಲಿ ಮಾಮೂಲು ಎನ್ನುವಂತಾಗಿದೆ. ಈಗಲೂ ಇದು ಕೆಟ್ಟ ನಡವಳಿಕೆಗಳಿಂದಲೇ ಸುದ್ದಿಯಲ್ಲಿದೆ. 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯನ್ನು ರದ್ದು ಮಾಡಿದ ರಾಜ್ಯ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಹಾಗೆಯೇ 1998, 1999, 2004ನೇ ಸಾಲಿನ ನೇಮಕಾತಿ ಪಟ್ಟಿಗಳನ್ನು ಪರಿಷ್ಕರಣೆ ಮಾಡಬೇಕು ಎಂಬಂಥ ಹೈಕೋರ್ಟ್ ಆದೇಶವನ್ನೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಎಲ್ಲಾ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ದೇಶದ ಅತ್ಯುನ್ನತ ನ್ಯಾಯಾಲಯ ಒಪ್ಪಿಕೊಂಡಿದೆ. ಜೊತೆಗೆ ಆಯೋಗ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದೆ. ಕೆಪಿಎಸ್‌ಸಿಗೆ ಸಂಬಂಧಿಸಿದಂತೆ ಇನ್ನೊಂದು ಪ್ರಕರಣ ಕುರಿತೂ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನದಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧವೇ ವಂಚನೆ ಪ್ರಕರಣ ದಾಖಲಾಗಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದೆ.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ಛೀಮಾರಿ ಹಾಕಿದ್ದಕ್ಕೆ ಲೆಕ್ಕವೇ ಇಲ್ಲ. ಆದರೂ ಆಯೋಗದ ಕಾರ್ಯವೈಖರಿಯಲ್ಲಿ ಬದಲಾವಣೆ ಕಾಣಿಸುತ್ತಿಲ್ಲ. ತೀರಾ ಇತ್ತೀಚೆಗೆ ನಡೆದ ಎಫ್‌ಡಿಎ, ಎಸ್‌ಡಿಎ ನೇಮಕಾತಿಗಳಲ್ಲಿಯೂ ಅಕ್ರಮಗಳು ನಡೆದಿವೆ. ಇದಕ್ಕೆ ಸಂಬಂಧಿಸಿದಂತೆ 12ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಮಧ್ಯವರ್ತಿಗಳು ಹಣ ತೆಗೆದುಕೊಂಡು ಕೆಲಸ ಕೊಡಿಸುವ ದಂಧೆಯಲ್ಲಿ ನಿರತವಾಗಿರುವುದು ಪತ್ತೆಯಾಗಿದೆ. ರಾಜ್ಯದ ಆಡಳಿತಕ್ಕೆ ಬೇಕಾಗುವ ದಕ್ಷರನ್ನು ಆಯ್ಕೆ ಮಾಡುವ ಕರ್ನಾಟಕ ಲೋಕಸೇವಾ ಆಯೋಗವು ಭ್ರಷ್ಟಾಚಾರದ ಕೂಪವಾಗಿದೆ ಎನ್ನುವುದು ಕಣ್ಣಿಗೆ ರಾಚುವಂತಿದೆ. 1998ರ ನೇಮಕಾತಿಯ ಬಗ್ಗೆ ಈಗ ನ್ಯಾಯಾಲಯದ ತೀರ್ಪು ಬಂದು ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕಾದ ಸ್ಥಿತಿ ಬಂದಿರುವುದು ಅತ್ಯಂತ ಶೋಚನೀಯ ವಿಚಾರ. ಅನ್ಯ ಮಾರ್ಗದಿಂದ ನೇಮಕಾತಿ ಹೊಂದಿದವರಲ್ಲಿ ಕೆಲವರು ಈಗಾಗಲೇ ಐಎಎಸ್ ಹುದ್ದೆಗೂ ಏರಿದ್ದಾರೆ. ಅವರನ್ನು ಈಗ ಕೆಳಕ್ಕೆ ಇಳಿಸುವ ಕಾಲ ಬಂದಿದೆ. ಆಯೋಗ ಕೊಳೆತು ನಾರುತ್ತಿದ್ದರೂ ಅದರ ರಿಪೇರಿಗೆ ಯಾರೂ ಮುಂದಾಗದೇ ಇರುವುದು ಅಕ್ಷಮ್ಯ.

2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಾಗ ರಾಜ್ಯ ಸರ್ಕಾರ ಕೆಪಿಎಸ್‌ಸಿಗೆ ಕಾಯಕಲ್ಪ ಕಲ್ಪಿಸಲು ಮುಂದಾಯಿತು. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಪಿ.ಸಿ.ಹೋಟಾ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಹೋಟಾ ಸಮಿತಿ 2013ರ ಆಗಸ್ಟ್‌ನಲ್ಲಿಯೇ ವರದಿಯೊಂದನ್ನು ನೀಡಿತು. 67 ಶಿಫಾರಸುಗಳನ್ನು ಮಾಡಿತ್ತು. ಆದರೆ ರಾಜ್ಯ ಸರ್ಕಾರ ಈ ಎಲ್ಲ ಶಿಫಾರಸುಗಳನ್ನು ಒಪ್ಪಿಕೊಳ್ಳಲಿಲ್ಲ. ತನಗೆ ಅನುಕೂಲವಾಗುವ ಶಿಫಾರಸು

ಗಳನ್ನು ಮಾತ್ರ ಒಪ್ಪಿಕೊಂಡಿತು. ಆ ಮೂಲಕ ಆಯೋಗಕ್ಕೆ ಕಾಯಕಲ್ಪ ನೀಡುವ ಉತ್ತಮ ಅವಕಾಶದಿಂದ ವಂಚಿತವಾಯಿತು. ಆಯೋಗದಲ್ಲಿ ಬೇರುಬಿಟ್ಟಿರುವ ನೌಕರರನ್ನು ವರ್ಗಾಯಿಸಬೇಕು. ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕಕ್ಕೆ ಶೋಧನಾ ಸಮಿತಿ ರಚಿಸಬೇಕು. ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ಸಂದರ್ಶನ ಪ್ರಕ್ರಿಯೆಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರ ಜೊತೆಗೆ ವಿಷಯ ತಜ್ಞರೂ ಇರಬೇಕು ಎಂಬಂಥ ಹೋಟಾ ಸಮಿತಿಯ ಅನೇಕ ಶಿಫಾರಸುಗಳನ್ನು ಸರ್ಕಾರ ಪರಿಗಣಿಸಲೇ ಇಲ್ಲ. ಇದರಿಂದ ಆಯೋಗದ ಮೇಲಿನ ವಿಶ್ವಾಸ ಇನ್ನಷ್ಟು ಕುಸಿಯಿತು. ರಾಜ್ಯದಲ್ಲಿ ಸುಮಾರು 2.75 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಜವಾಬ್ದಾರಿಯೂ ಆಯೋಗದ ಮೇಲಿದೆ. ಆದರೆ ಆಯೋಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸದೇ ಹೋದರೆ ಉದ್ಯೋಗಾಕಾಂಕ್ಷಿಗಳಾಗಿರುವ ರಾಜ್ಯದ ಲಕ್ಷಾಂತರ ಯುವಕರ ಕನಸಿಗೆ ಕೊಳ್ಳಿ ಇಟ್ಟಂತೆ ಆಗುತ್ತದೆ. ಕೆಪಿಎಸ್‌ಸಿ ನೇಮಕಾತಿ ಎಂದರೆ ಹಣ ಇದ್ದವರಿಗೆ ಮಾತ್ರ ಎನ್ನುವ ಸ್ಥಿತಿ ಈಗ ನಿರ್ಮಾಣ ಆಗಿದೆ. ಇದನ್ನು ತೊಡೆದು ಹಾಕದಿದ್ದರೆ ಅದು ರಾಜ್ಯಕ್ಕೆ ಮಾರಕ. ಮುಂದಿನ ಪೀಳಿಗೆಗೂ ಒಳ್ಳೆಯದಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.