ಬುಧವಾರ, ಡಿಸೆಂಬರ್ 11, 2019
26 °C

‘ಉಳ್ಳವರ ವಿದ್ಯಾಲಯ’ ಆಗಬಾರದು ಖಾಸಗಿ ವಿಶ್ವವಿದ್ಯಾಲಯ!

Published:
Updated:
‘ಉಳ್ಳವರ ವಿದ್ಯಾಲಯ’ ಆಗಬಾರದು ಖಾಸಗಿ ವಿಶ್ವವಿದ್ಯಾಲಯ!

ಒಂದು ಕಾಲವಿತ್ತು. ಮೈಸೂರು, ಬೆಂಗಳೂರು, ಧಾರವಾಡ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆಯಲು ವಿದ್ಯಾರ್ಥಿಗಳಲ್ಲಿ ಭಾರಿ ಪೈಪೋಟಿ ನಡೆಯುತ್ತಿತ್ತು. ಅದೇ ರೀತಿ ದೇಶದ ವಿವಿಧ ರಾಜ್ಯಗಳ ಸರ್ಕಾರಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆಯುವುದೆಂದರೆ ವಿದ್ಯಾರ್ಥಿಗಳಿಗೆ ಹೆಮ್ಮೆಯ ಸಂಗತಿ. ಆದರೆ, ಕಾಲ ಬದಲಾಗಿದೆ. ಪದವಿ ಪಡೆದು ಉನ್ನತ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದಕ್ಕೆ ತಕ್ಕಷ್ಟು ಗುಣಮಟ್ಟದ ಉನ್ನತ ಶಿಕ್ಷಣ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಕೊರತೆಯೂ ಇದೆ.

ಎಲ್ಲರಿಗೂ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಸಿಗುವುದೂ ಕಷ್ಟ. ಆದ ಕಾರಣ ಖಾಸಗಿ ವಿಶ್ವವಿದ್ಯಾಲಯಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯುವ ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್‌ ವಿಶ್ವವಿದ್ಯಾಲಯ ಸ್ಥಾನಮಾನ ಸಿಗುತ್ತದೆ. ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುವ ಸಂಸ್ಥೆಗಳಿಗೆ ಖಾಸಗಿ ವಿಶ್ವವಿದ್ಯಾಲಯ ಸ್ಥಾನಮಾನ ನೀಡಲಾಗುತ್ತದೆ. ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಇದ್ದರಷ್ಟೇ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಲು ಸಾಧ್ಯ.

ದೇಶದಲ್ಲಿ ಆರ್ಥಿಕ ಉದಾರೀಕರಣ ನೀತಿ ಜಾರಿಯಾದ ಬಳಿಕ ಉನ್ನತ ಶಿಕ್ಷಣದಲ್ಲಿ ಖಾಸಗೀಕರಣಕ್ಕೆ ದೊಡ್ಡ ಪ್ರಮಾಣದಲ್ಲಿ ಚಾಲನೆ ಸಿಕ್ಕಿತು. 1980ರವರೆಗೆ ಉನ್ನತ ಶಿಕ್ಷಣವು ಸಂಪೂರ್ಣವಾಗಿ ಸರ್ಕಾರದ ಹಿಡಿತದಲ್ಲಿಯೇ ಇತ್ತು. ಆ ಬಳಿಕ ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಖಾಸಗೀಕರಣದ ಗಾಳಿ ಬೀಸಲಾರಂಭಿಸಿತು. ಈಗಂತೂ ರಾಜ್ಯ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಯಡಿ, ದೇಶದ ಬಹುತೇಕ ರಾಜ್ಯಗಳಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆ ಆಗುತ್ತಿವೆ. ಕರ್ನಾಟಕದಲ್ಲೂ ಬದಲಾವಣೆಯ ಗಾಳಿ ಇತರ ರಾಜ್ಯಗಳಿಗಿಂತ ಬಹಳ ಜೋರಾಗಿಯೇ ಬೀಸುತ್ತಿದೆ.

ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಲು ಪೈಪೋಟಿ ನಡೆಸಿವೆ. ಈಗಾಗಲೇ 10ಕ್ಕೂ ಹೆಚ್ಚು ಡೀಮ್ಡ್‌ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ಒಪ್ಪಿಗೆ ಪಡೆಯುವುದಕ್ಕೆ ತಯಾರಿ ನಡೆಸಿಕೊಂಡಿವೆ. ‘ರಾಷ್ಟ್ರೀಯ ವಿಶ್ವವಿದ್ಯಾಲಯ ಶಿಕ್ಷಣ ಯೋಜನೆ ಮತ್ತು ಆಡಳಿತ ಸಂಸ್ಥೆ’ ನಡೆಸಿರುವ ಅಧ್ಯಯನವೊಂದರ ಪ್ರಕಾರ, ಖಾಸಗಿ ವಿಶ್ವವಿದ್ಯಾಲಯಗಳು ತ್ವರಿತಗತಿಯಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತರಿಸುತ್ತಿವೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ನುರಿತ ಬೋಧಕರನ್ನು ನೇಮಿಸಿಕೊಳ್ಳುವುದರ ಜೊತೆಗೆ ಸಂಶೋಧನೆಗೆ ಆದ್ಯತೆ ನೀಡಿವೆ. ಸಂಶೋಧನಾ ಚಟುವಟಿಕೆಗಳಿಗೆ ದೇಶ– ವಿದೇಶಗಳಿಂದ ಧಾರಾಳವಾಗಿ ಹಣ ಪಡೆಯುತ್ತಿವೆ. ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳೂ ಇದೇ ರೀತಿ ಇವೆ ಎಂದು ಹೇಳಲು ಸಾಧ್ಯವಿಲ್ಲ. ಒಂದಷ್ಟು ಶಿಕ್ಷಣ ಸಂಸ್ಥೆಗಳು ವಿಶ್ವವಿದ್ಯಾಲಯಗಳ ಸ್ಥಾನಮಾನ ಪಡೆದಿದ್ದರೂ ಅಗತ್ಯವಿರುವಷ್ಟು ಕಲಿಕಾ ಸಾಧನ, ಮೂಲ ಸೌಕರ್ಯ ಮತ್ತು ಗುಣಮಟ್ಟದ ಬೋಧಕರನ್ನು ಒಳಗೊಂಡಿಲ್ಲ ಎಂಬ ಆರೋಪವೂ ಇದೆ.

ಉತ್ತಮ ವಿಶ್ವವಿದ್ಯಾಲಯಗಳೂ ಬರುತ್ತಿವೆ. ಕಳಪೆ ವಿಶ್ವವಿದ್ಯಾಲಯಗಳೂ ಬರುತ್ತಿವೆ. ಕಳಪೆ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು. ಕೆಲವು ನಿಯಂತ್ರಣಗಳನ್ನು ವಿಧಿಸಿ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅವಕಾಶ ಕೊಡಬೇಕು. ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗಬೇಕಾದರೆ ಖಾಸಗಿ ವಿಶ್ವವಿದ್ಯಾಲಯಗಳ ಅಗತ್ಯವಿದೆ. ಸರ್ಕಾರಗಳು ನಡೆಸುವ ವಿಶ್ವವಿದ್ಯಾಲಯಗಳಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಗುಣಮಟ್ಟ, ಬೋಧನೆ ಮತ್ತು ಉತ್ತಮ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವುದರಿಂದ ವಿದ್ಯಾರ್ಥಿಗಳು ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ ಎಂಬ ವಾದ ಖಾಸಗಿ ವಿಶ್ವವಿದ್ಯಾಲಯ ಪ್ರತಿಪಾದಕರದು. ಆದರೆ, ಖಾಸಗಿ ವಿಶ್ವವಿದ್ಯಾಲಯಗಳಿಂದ ಕೇವಲ ಶ್ರೀಮಂತ ವಿದ್ಯಾರ್ಥಿಗಳಿಗಷ್ಟೇ ಅನುಕೂಲ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಅಲ್ಲಿ ವಸೂಲಿ ಮಾಡುವ ಶುಲ್ಕವನ್ನು ಭರಿಸುವ ಸಾಮರ್ಥ್ಯವಿಲ್ಲ ಎಂಬುದು ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸುವ ಬಣದ ತರ್ಕ.

‘ಶ್ರೇಷ್ಠ ಗುಣಮಟ್ಟದ ಶಿಕ್ಷಣ ಇಂದಿನ ಅಗತ್ಯ. ಕಳಪೆ ಶಿಕ್ಷಣ ನೀಡುವುದಕ್ಕಿಂತ ಸುಮ್ಮನಿರುವುದೇ ಒಳಿತು. ಇದರ ಅರ್ಥ, ಖಾಸಗಿ ಮಾತ್ರವಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳೂ ಉತ್ತಮ ಗುಣಮಟ್ಟದ ಶಿಕ್ಷಣದತ್ತ ಗಮನ ಹರಿಸಬೇಕು. ಕೆಲವು ಖಾಸಗಿ ವಿಶ್ವವಿದ್ಯಾಲಯಗಳು ಉತ್ತಮ ಶಿಕ್ಷಣ ನೀಡುತ್ತಿವೆ. ಇಲ್ಲಿರುವ ಗುಣಮಟ್ಟವನ್ನು ಸರ್ಕಾರ ನಡೆಸುವ ವಿಶ್ವವಿದ್ಯಾಲಯಗಳಲ್ಲಿ ತರಲು ಸಾಧ್ಯವಿಲ್ಲ’ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್‌.ತಿಮ್ಮಪ್ಪ.

‘ಖಾಸಗಿ ವಲಯದಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲೂ ಬೇಡಿಕೆ ಇದೆ. ಶ್ರೇಷ್ಠ ಶಿಕ್ಷಣ ನೀಡುವುದು ಯಾವುದೇ ಶಿಕ್ಷಣ ಸಂಸ್ಥೆಯ ಆದ್ಯ ಕರ್ತವ್ಯ. ಶೇ 10ರಷ್ಟು ಸರ್ಕಾರಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದಿಂದ ಕೂಡಿವೆ. ಉಳಿದ ಶೇ 90ರಷ್ಟು ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅತ್ಯಂತ ಕಳಪೆಯಾಗಿವೆ. ಒಳ್ಳೆಯ ಶಿಕ್ಷಣ ಹೆಚ್ಚು ಜನರಿಗೆ ಸಿಗಬೇಕು. ಬಡ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಹೋಗುತ್ತಾರೆ. ಆದ್ದರಿಂದ ಅಲ್ಲಿ ವ್ಯವಸ್ಥೆಯನ್ನು ಉನ್ನತೀಕರಿಸಬೇಕು. ಆದರೆ, ಶ್ರೇಷ್ಠತೆ ತರಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ರಾಜಕೀಯದ ಹಸ್ತಕ್ಷೇಪವೇ ಕಾರಣ’ ಎಂಬ ಅಭಿಪ್ರಾಯ ತಿಮ್ಮಪ್ಪ ಅವರದು.

ಖಾಸಗಿ ವಿಶ್ವವಿದ್ಯಾಲಯಗಳ ಮೇಲೆ ಒಂದು ಹಂತದ ನಿಯಂತ್ರಣವಿರಬೇಕು. ಯಾವುದೇ ಕೋರ್ಸ್‌ಗಳ ಪ್ರವೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಶೇ 10 ಮತ್ತು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಬೇಕು. ಅದು ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಯೂ ಹೌದು ಎನ್ನುತ್ತಾರೆ ಅವರು.

‘ಖಾಸಗಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ತರಲು ರಾಜಕಾರಣಿಗಳು ಬಿಡುವುದಿಲ್ಲ. ಇದಕ್ಕೆ ಮುಖ್ಯ ಕಾರಣ, ಸಾಕಷ್ಟು ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಸಾಮಾಜಿಕ ನ್ಯಾಯಕ್ಕೆ ಅವಕಾಶ ಕೊಡುವುದಕ್ಕೆ ಅವರಿಗೆ ಮನಸ್ಸಿಲ್ಲ. ಎದೆಗಾರಿಕೆ ಇರುವ ಮುಖ್ಯಮಂತ್ರಿ ಮಾತ್ರ ಇಂತಹ ನಿಯಮತರಲು ಸಾಧ್ಯ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಶುಲ್ಕ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕಂತೆ ಗುಣಮಟ್ಟ ಇರಬೇಕು. ಕೆಲವು ಕಡೆಗಳಲ್ಲಿ ಹಣ ತೆಗೆದುಕೊಳ್ಳುತ್ತಾರೆ. ಆದರೆ, ಅದಕ್ಕೆ ತಕ್ಕಂತೆ ಗುಣಮಟ್ಟದ ಶಿಕ್ಷಣ ಇರುವುದಿಲ್ಲ. ಇದು ನಿಜಕ್ಕೂ ಕಳವಳಕಾರಿ ಸಂಗತಿ’ ಎಂಬ ಅಭಿಪ್ರಾಯ ಅವರದು.

‘ಖಾಸಗಿ ವಿಶ್ವವಿದ್ಯಾಲಯಗಳನ್ನು ಬೇಡ ಎನ್ನಲಾಗದು. ಸಾಕಷ್ಟು ವರ್ಷಗಳಿಂದ ಇರುವ ಶಿಕ್ಷಣ ಸಂಸ್ಥೆಗಳೇ ಈಗ ಖಾಸಗಿ ವಿಶ್ವವಿದ್ಯಾಲಯಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅವುಗಳಿಗೆ ಅನುಭವ ಇರುತ್ತದೆ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶವಿರುತ್ತದೆ. ಹೊಸ ಕೋರ್ಸ್‌ಗಳನ್ನು ಆರಂಭಿಸುತ್ತವೆ. ಅಷ್ಟರ ಮಟ್ಟಿಗೆ ಸ್ವಾಗತಾರ್ಹ’ ಎನ್ನುತ್ತಾರೆ ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯದ ಕುಲಪತಿ ‍ಪ್ರೊ. ಎಸ್‌. ಜಾಫೆಟ್‌.

ಆದರೆ, ಕೆಲವು ವಿಷಯಗಳ ಬಗ್ಗೆ ಜಾಗ್ರತೆ ವಹಿಸಲೇಬೇಕು. ಅದರಲ್ಲೂ ಮುಖ್ಯವಾಗಿ ಶುಲ್ಕ ರಚನೆ ಬಗ್ಗೆ.  ಖಾಸಗಿ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳ ಶುಲ್ಕ ರಚನೆಯಲ್ಲಿ ಅಜಗಜಾಂತರ ಇರುತ್ತದೆ. ಸಾಮಾನ್ಯ ಕುಟುಂಬಗಳ ವಿದ್ಯಾರ್ಥಿಗಳು ಖಾಸಗಿ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತುವುದಕ್ಕೆ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ದುಬಾರಿ ಶುಲ್ಕವಿರುತ್ತದೆ. ಬಡ ಮತ್ತು ಶೋಷಿತ ವರ್ಗಗಳ ವಿದ್ಯಾರ್ಥಿಗಳು ಸರ್ಕಾರಿ ವಿಶ್ವವಿದ್ಯಾಲಯಗಳಿಗೇ ಹೋಗಬೇಕು. ಅಲ್ಲಿ ಉತ್ತಮ ಪ್ರಾಧ್ಯಾಪಕರು ಇರುತ್ತಾರೆ. ಆದರೆ, ಸರ್ಕಾರಗಳ ಅನಗತ್ಯ ಹಸ್ತಕ್ಷೇಪ ಮತ್ತು ಸಂಕೀರ್ಣ ವ್ಯವಸ್ಥೆಯಿಂದಾಗಿ ಪ್ರಾಧ್ಯಾಪಕರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ತೊಡಗಿಸಲು ಆಗುವುದಿಲ್ಲ ಎಂದು ಅವರು ಹೇಳಿದರು.

ಖಾಸಗಿ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಓದಿ ಬಂದವರೆಂಬ ತಾರತಮ್ಯ ಸಮಾಜದಲ್ಲಿ ಸೃಷ್ಟಿ ಆಗುತ್ತದೆ. ಹಲವು ದೇಶಗಳಲ್ಲಿ ಉನ್ನತ ಶಿಕ್ಷಣಕ್ಕೆ ಅಲ್ಲಿನ ಸರ್ಕಾರಗಳು ಸಹಾಯಧನ ನೀಡುತ್ತವೆ. ನಮ್ಮಲ್ಲಿ ಆ ವ್ಯವಸ್ಥೆಯೇ ಇಲ್ಲ. ವಿದ್ಯಾರ್ಥಿಗಳು ಶಿಕ್ಷಣ ಸಾಲವನ್ನು ಪಡೆಯಬೇಕಾಗುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಆದ್ಯತೆ ನೀಡಲಾಗುತ್ತಿದೆ. ‌ಕಲೆ ಮತ್ತು ಮೂಲ ವಿಜ್ಞಾನದ ಕಲಿಕೆಗೆ ಒತ್ತು ನೀಡುತ್ತಿಲ್ಲ. ಇದು ಅಪಾಯಕಾರಿ ಬೆಳವಣಿಗೆ ಎನ್ನುತ್ತಾರೆ ಜಾಫೆಟ್‌ .

ಹೀಗೆನ್ನುತ್ತಾರೆ ಶಿಕ್ಷಣ ತಜ್ಞರು...

ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯ ಅವಶ್ಯಕತೆ ಇದೆ. ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಏರಿಕೆ ಆಗಿದೆ. ನಮ್ಮ ರಾಜ್ಯದಲ್ಲಿ ಪದವಿ ಪಡೆಯುವವರ ಪ್ರಮಾಣ ಶೇ 28ರಷ್ಟು ಇದೆ. ಅದನ್ನು ಶೇ 40ಕ್ಕೆ ಏರಿಸಬೇಕು ಎಂಬುದು ಸರ್ಕಾರದ ಉದ್ದೇಶ.

ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣ ಶೇ 26 ಇದೆ. ವಿದೇಶಗಳಲ್ಲಿ ಮುಖ್ಯವಾಗಿ ಈ ಪ್ರಮಾಣ ಯುರೋಪ್‌ ಶೇ 80, ಅಮೆರಿಕ ಶೇ 70 ಮತ್ತು ಚೀನಾದಲ್ಲಿ ಶೇ 40ರಷ್ಟು ಇದೆ. ನಮ್ಮ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಶೇ 47, ಕೇರಳ, ಆಂಧ್ರ ಪ್ರದೇಶದಲ್ಲಿ ಶೇ 35ರಷ್ಟು ಇದೆ. ರಾಜ್ಯದಲ್ಲಿ 2013ರಲ್ಲಿ ಶೇ 24ರಷ್ಟು ಇತ್ತು. ಕಳೆದ ಐದು ವರ್ಷಗಳಲ್ಲಿ ಶೇ 5ರಷ್ಟು ಹೆಚ್ಚಾಗಿದೆ. ಮುಖ್ಯವಾಗಿ ಈ ಕಾರಣದಿಂದ ಖಾಸಗಿ ವಿಶ್ವವಿದ್ಯಾಲಯಗಳ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚು.

ನಿಯಮ ಉಲ್ಲಂಘಿಸಬಾರದು

ಶೈಕ್ಷಣಿಕ ಗುಣಮಟ್ಟದ ವಿಚಾರದಲ್ಲಿ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಮಧ್ಯೆ ಆರೋಗ್ಯಕರ ಪೈಪೋಟಿ ಸಾಧ್ಯ. ಇದರಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟವೂ ಹೆಚ್ಚಾಗುತ್ತದೆ. ಖಾಸಗಿಯವರು ಬೇಡ ಸರ್ಕಾರವೇ ನಡೆಸಬೇಕು ಎಂದಾದರೆ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿಯೇ ₹ 1 ಲಕ್ಷ ಕೋಟಿ ತೆಗೆದಿಡಬೇಕಾಗುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳು ಸರ್ಕಾರದ ನಿಯಾಮವಳಿಗಳನ್ನು ಉಲ್ಲಂಘಿಸದಂತೆ ಕಟ್ಟೆಚ್ಚರ ವಹಿಸಬೇಕು. ಇದಕ್ಕಾಗಿ ಪರಿಶೀಲನಾ ಸಮಿತಿ ರಚಿಸಬೇಕು.

– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ, ಕಾಂಗ್ರೆಸ್‌ ಮುಖಂಡ

ಖಾಸಗಿ ವಿ.ವಿ. ಬೇಕು

ಜ್ಞಾನ ಆಯೋಗ ತನ್ನ ವರದಿಯಲ್ಲಿ ಹೊಸ ಖಾಸಗಿ ವಿಶ್ವವಿದ್ಯಾಲಯಗಳಿಗೆ ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಆರಂಭಗೊಂಡಿವೆ. ಖಾಸಗಿ ವಿ‌ಶ್ವವಿದ್ಯಾಲಯ ಆರಂಭಿಸಲು ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ. ಅವನ್ನು ಪಾಲಿಸಲಾಗುತ್ತಿದೆಯೇ ಇಲ್ಲವೇ ಎಂಬುದರ ಪರಿಶೀಲನೆ ಕಾಲಕಾಲಕ್ಕೆ ಆಗಬೇಕು. ನಗರ ಪ್ರದೇಶದಲ್ಲಿ 40 ಎಕರೆ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 60 ಎಕರೆ ಜಾಗದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಎಲ್ಲವೂ ಮೂಲಸೌಕರ್ಯಗಳನ್ನು ಒಳಗೊಂಡಿರಬೇಕು.

– ಸಿ.ಟಿ. ರವಿ, ಶಾಸಕ, ಬಿಜೆಪಿ

ಅನಾರೋಗ್ಯಕರ ಪೈಪೋಟಿಗೆ ಕಾರಣ

ಖಾಸಗಿ ವಿಶ್ವವಿದ್ಯಾಲಯಗಳಿಗೆ ಅನುಮತಿ ನೀಡುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳಲಿದೆ. ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕೆ ಶೇ 70 ಹೆಚ್ಚು ಅಂಕಗಳನ್ನು ನಿಗದಿ ಮಾಡುತ್ತಾರೆ. ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸಹಜ ವಾತಾವರಣವಿರುತ್ತದೆ. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ಸಿಗುತ್ತದೆ. ಖಾಸಗಿ ವಿಶ್ವವಿದ್ಯಾಲಯಗಳಿಗೆ ಹೆಚ್ಚು ಹೆಚ್ಚು ಅವಕಾಶ ನೀಡಿದಷ್ಟೂ ಶೈಕ್ಷಣಿಕ ಕ್ಷೇತ್ರ ಗಂಡಾಂತರಕ್ಕೆ ಸಿಲುಕುತ್ತದೆ. ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳ ಹತೋಟಿಗೆ ರಾಜ್ಯ ಸರ್ಕಾರ ಸಮಗ್ರ ಕಾಯ್ದೆಯನ್ನು ತಂದಿತು. ಆದರೆ, ಅದರ ವ್ಯಾಪ್ತಿಗೆ ಖಾಸಗಿ ವಿಶ್ವವಿದ್ಯಾಲಯಗಳನ್ನು ಸೇರಿಸಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ಖಾಸಗಿ ವಿಶ್ವವಿದ್ಯಾಲಯಗಳಿಗೆ ಕಡಿವಾಣ ಹಾಕುತ್ತೇವೆ.

– ಕೆ.ಟಿ.ಶ್ರೀಕಂಠೇಗೌಡ, ವಿಧಾನಪರಿಷತ್‌ ಸದಸ್ಯ, ಜೆಡಿಎಸ್‌

ಹಲವು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಇವುಗಳ ಪ್ರವೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಬೇಕು.

– ಪ್ರೊ. ಎಂ.ಎಸ್‌.ತಿಮ್ಮಪ್ಪ, ವಿಶ್ರಾಂತ ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)