ಮಂಗಳವಾರ, ಆಗಸ್ಟ್ 11, 2020
26 °C

ಗದುಗಿನ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದುಗಿನ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಗದಗ: ಹಿಂದೆ ಬೇಸಿಗೆ ರಜೆ ಬಂತೆಂದರೆ ಮಕ್ಕಳು ಅಜ್ಜಿ ಮನೆಯತ್ತ ಧಾವಿಸುತ್ತಿದ್ದ ಕಾಲವಿತ್ತು. ಈಗ ಕಾಲ ಬದಲಾಗಿದ್ದು, ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಮಕ್ಕಳಿಗೆ ಬೇಸಿಗೆ ಶಿಬಿರದ ಸಿದ್ಧತೆ ಜೋರಾಗಿ ನಡೆಯುತ್ತಿದೆ. ನಗರದ ಕೆಲವು ಕಡೆಗಳಲ್ಲಿ ಈಗಾಗಲೇ ಶಿಬಿರಗಳು ಆರಂಭವಾಗಿವೆ.

ನಗರದಲ್ಲಿರುವ ಹತ್ತಾರು ಬೇಸಿಗೆ ಶಿಬಿರಗಳು ಚಿಣ್ಣರನ್ನು ಕೈಬೀಸಿ ಕರೆಯುತ್ತಿವೆ. ಸಂಗೀತ, ನೃತ್ಯ, ಚಿತ್ರಕಲೆ, ನಟನೆ, ಸುಂದರ ಕೈಬರಹ, ಯೋಗ, ಕಾಗದದಲ್ಲಿ ವಸ್ತುಗಳನ್ನು ತಯಾರಿಸುವುದು, ಕ್ರಿಕೆಟ್, ಈಜು, ಸ್ಕೇಟಿಂಗ್, ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡಲು ಹಲವು ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. 15 ದಿನಗಳು ಹಾಗೂ ಒಂದರಿಂದ ಎರಡು ತಿಂಗಳುಗಳ ಕಾಲ ನಡೆಯುವ ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಮನರಂಜನೆಯ ಜತೆಗೆ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.

ವರ್ಷವಿಡೀ ತರಗತಿಯ ಪಾಠ ಓದಿ ಬೇಸತ್ತ ಮಕ್ಕಳಿಗೆ ಪೋಷಕರು ಬೇಸಿಗೆಯಲ್ಲಿ ಆಟ-ಪಾಠಗಳಲ್ಲಿ ತೊಡಗಿಸಲು ವಿಶೇಷ ಗಮನಹರಿಸುತ್ತಾರೆ. ಅವರ ಮೆಚ್ಚಿನ ಕ್ರೀಡೆಗಳಲ್ಲಿ ತೊಡಗಿಸಲು ಪ್ರೇರೇಪಿಸುತ್ತಾರೆ. ಮನದಣಿಯುವಷ್ಟು ಆಡುವ ತವಕ ಮಕ್ಕಳಿಗೆ. ಇಂಥ ಮಕ್ಕಳ ಮನತಣಿಸಲು ನಗರದೆಲ್ಲೆಡೆ ಬೇಸಿಗೆ ಶಿಬಿರ ಕಾರುಬಾರು ಜೋರಾಗಿದೆ.

ಬೇಸಿಗೆ ಶಿಬಿರದ ಮಹತ್ವ ಅರಿತುಕೊಂಡು ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿ ತರಬೇತಿ ನೀಡಲಾಗುತ್ತಿದೆ. ಕಲಾ ಕುಟೀರದಿಂದ ಮಕ್ಕಳಿಗೆ ಭರತ ನಾಟ್ಯ ತರಬೇತಿ ನೀಡಲಾಗುತ್ತಿದೆ. ಅತ್ಯಂತ ಜನಪ್ರಿಯವಾಗಿರುವ ಕ್ರಿಕೆಟ್‌ ಆಟಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಇಲ್ಲಿನ ಶಿವಾನಂದ ಮಠದ ಸಮೀಪದಲ್ಲಿ ಮೈದಾನದಲ್ಲಿ ಕ್ರಿಕೆಟ್‌ ತರಬೇತಿ ಶಿಬಿರ ನಡೆಯುತ್ತಿದ್ದು, ವಿದ್ಯಾರ್ಥಿಗಳು ತುಂಬಿ ತುಳುಕುತ್ತಿರುವುದು ಸಾಮಾನ್ಯವಾಗಿದೆ.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಕ್ಕಳ ಬಹುಮುಖ ವ್ಯಕ್ತಿತ್ವ ವಿಕಸನ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಮರಾಠ ವಿದ್ಯಾವರ್ಧಕ ಸಂಘ, ಬಿಎನ್‍ಎಸ್ ಕಲಾ ಅಕಾಡೆಮಿ ಆಶ್ರಯದಲ್ಲಿ ಚಿಣ್ಣರ ಚಿತ್ರ ಅಂಗಳ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದೆ. ‘ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ’ ಎಂದು ಹೇಳುತ್ತಾರೆ ಸಂಸ್ಥಾಪಕ ಅಧ್ಯಕ್ಷ ಬಾಬು ಶಿದ್ಲಿಂಗ.

ಬಸವ ಬೇಸಿಗೆ ಶಿಬಿರ: ಬಿಸಿಲಿನ ತಾಪವನ್ನೂ ಲೆಕ್ಕಿಸದೇ ಕಂಬವನ್ನು ಹಿಡಿದು ಕಸರತ್ತು ಮಾಡುತ್ತಿದ್ದ ಮಕ್ಕಳ ತಂಡ ಒಂದು ಕಡೆಯಾದರೆ, ಮತ್ತೊಂದೆಡೆ ಹೆಣ್ಣು ಮಕ್ಕಳು ಜನಪದ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಹೌದು, ಮಕ್ಕಳಲ್ಲಿ ಸಕಾರಾತ್ಮಕ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಸ್ಥಳೀಯ ತೋಂಟದಾರ್ಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಸವ ಕೇಂದ್ರದಿಂದ 3 ವರ್ಷಗಳಿಂದ ಬಸವ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ.

ಶಿಬಿರದಲ್ಲಿ ನಗರದ ವಿವಿಧ ಶಾಲೆಗಳ 80 ಶಿಬಿರಾರ್ಥಿಗಳಿಗೆ ಯೋಗ, ಕರಾಟೆ, ಮಲ್ಲಕಂಬ, ವಚನ ಚಿಂತನೆ, ರಂಗ ತರಬೇತಿ, ಸಂಗೀತ, ಸ್ಫೋಕನ್ ಇಂಗ್ಲಿಷ್, ಕಂಪ್ಯೂಟರ್ ಸೇರಿದಂತೆ ಹಲವು ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಊಟ, ಉಪಾಹಾರದ ಜತೆಗೆ ಸಮವಸ್ತ್ರ ನೀಡಲಾಗಿದೆ’ ಎಂದು ಬಸವ ಕೇಂದ್ರದ ಕಾರ್ಯಾಧ್ಯಕ್ಷ ಜಿ.ಬಿ.ಹಳ್ಯಾಳ ಹೇಳಿದರು.

‘ಮಕ್ಕಳಲ್ಲಿನ ಆಸಕ್ತಿ, ಪ್ರತಿಭೆಯನ್ನು ಪತ್ತೆ ಹಚ್ಚುವುದೇ ಬೇಸಿಗೆ ಶಿಬಿರಗಳ ಮುಖ್ಯ ಉದ್ದೇಶ. ಮುಂದೆ ತಮ್ಮ ಮಕ್ಕಳ ಪ್ರತಿಭೆಗೆ ಸರಿಯಾದ ಮಾರ್ಗದರ್ಶನ, ತರಬೇತಿ ನೀಡಿ ಪ್ರತಿಭೆಯನ್ನು ಪೋಷಿಸುವುದು ಪಾಲಕರ ಕೆಲಸವಾಗಿದೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಕೊಟ್ರೇಶ ಮೆಣಸಿನಕಾಯಿ.

**

ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಊಟ, ಆಟ, ಪಾಠದ ಜತೆಗೆ ಶಿಸ್ತು, ಸಂಸ್ಕೃತಿ, ಸಂಸ್ಕಾರ ಕಲಿಸುವುದು. ಅವರ ದೈಹಿಕ, ಮಾನಸಿಕ ಸದೃಢತೆಗೆ ಶಿಬಿರ ಅವಶ್ಯ – ಕೊಟ್ರೇಶ ಮೆಣಸಿನಕಾಯಿ, ಮುಖ್ಯ ಶಿಕ್ಷಕ.

**

–ಹುಚ್ಚೇಶ್ವರ ಅಣ್ಣಿಗೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.