ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎದುರಾಳಿ ಪಕ್ಷದ ಅಭ್ಯರ್ಥಿ ನಿರ್ಲಕ್ಷ್ಯ ಸಲ್ಲದು’

ಕನಕಪುರ: ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರ ಸಭೆಯಲ್ಲಿ ಡಿ.ಕೆ.ಸುರೇಶ್ ಕಿವಿಮಾತು
Last Updated 16 ಏಪ್ರಿಲ್ 2018, 11:09 IST
ಅಕ್ಷರ ಗಾತ್ರ

ಕನಕಪುರ: ಚುನಾವಣೆ ಎನ್ನುವುದು ಮಹಾಯುದ್ಧ. ಎದುರಾಳಿ ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರನ್ನು ಅಲಕ್ಷ್ಯ ಮಾಡದೆ ಹೋರಾಟ ಮಾಡಬೇಕೆಂದು ಸಂಸದ ಡಿ.ಕೆ.ಸುರೇಶ್‌ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರು, ಮುಖಂಡರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ‘ಇಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಯಾರೆಂಬುದು ಮುಖ್ಯವಲ್ಲ. ನಮ್ಮ ಪಕ್ಷದಿಂದ ಶಿವಕುಮಾರ್‌ ಅಭ್ಯರ್ಥಿ. ಪ್ರತಿಯೊಂದು ಮತವೂ ನಮಗೆ ಪ್ರಮುಖ. ಆ ಕಾರಣದಿಂದ ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರತಿ ಮನೆಗಳಿಗೂ ಭೇಟಿ ನೀಡಿ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ತಿಳಿಸಿಕೊಡಬೇಕು’ ಎಂದು ಸಲಹೆ ನೀಡಿದರು.

‘ಶಿವಕುಮಾರ್‌ ಅವರು ಮತ್ತೊಮ್ಮೆ ಶಾಸಕರಾಗಲು ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ. ಇಲ್ಲಿ ಜೆ.ಡಿ.ಎಸ್‌ ಮತ್ತು ಬಿ.ಜೆ.ಪಿ. ಯನ್ನು ನಿರ್ಲಕ್ಷ್ಯಬೇಡಿ. ಅವರ ಅಭ್ಯರ್ಥಿಗಳನ್ನು ದುರ್ಬಲರೆಂದು ತಿಳಿಯಬೇಡಿ. ಚುನಾವಣೆಯನ್ನು ಚುನಾವಣೆಯಾಗಿಯೇ ಎದುರಿಸಬೇಕು’ ಎಂದು ಹೇಳಿದರು.

ಏ.17 ನಂತರ ನಾಮಪತ್ರ ಸಲ್ಲಿಸುವ ದಿನಾಂಕವನ್ನು ಶಿವಕುಮಾರ್‌ ತಿಳಿಸಲಿದ್ದಾರೆ. ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿದೆ. ಕಾರ್ಯಕರ್ತರು, ಮುಖಂಡರು ಚುನಾವಣೆ ಆಯೋಗದ ನೀತಿ ನಿಯಮ ಪಾಲಿಸಿ ಚುನಾವಣೆ ಕೆಲಸ ಮಾಡಬೇಕೆಂದು ಸೂಚಿಸಿದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಒಂದು ಹಬ್ಬ. ಗ್ರಾಮದಲ್ಲಿ ನಡೆಯುವ ಹಬ್ಬದಲ್ಲಿ ಎಲ್ಲರೂ ಯಾವ ರೀತಿ ಒಂದಾಗಿ ಕೆಲಸ ಮಾಡಿ ಜಾತ್ರೆ ಮತ್ತು ಹಬ್ಬ ಯಶಸ್ವಿಗೊಳಿಸುತ್ತಿರೋ ಅದೇ ರೀತಿ ಪಕ್ಷದ ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗೊತ್ತಿ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಪಕ್ಷದ ಹಿರಿಯ ಮುಖಂಡರಾದ ಹೊನ್ನಿಗನಹಳ್ಳಿ ಶ್ರೀಕಂಠು, ಸೂರ್ನಳ್ಳಿ ಜೈರಾಮೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್‌, ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಸದಸ್ಯ ಆರ್‌.ಕೃಷ್ಣಮೂರ್ತಿ, ಸಾತನೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು, ಮುಖಂಡರಾದ ಕೆ.ಎಂ.ರಾಜೇಂದ್ರ, ವೆಂಕಟರಾಯನದೊಡ್ಡಿ ರಾಮಣ್ಣ, ರಾಜ್ಯ ಯೂತ್‌ ಕಾಂಗ್ರೆಸ್‌ ಉಪಾಧ್ಯಕ್ಷ ಕೆಂಪರಾಜು, ಎ.ಪಿ.ಎಂ.ಸಿ. ಅಧ್ಯಕ್ಷ ಟಿ.ಸಿ.ರವಿ ಸೇರಿದಂತೆ ನಗರಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು, ಪಕ್ಷದ ಕಾರ್ಯಕರ್ತರು ಇದ್ದರು.

ವಿರೋಧಿಗಳ ಕೃತ್ಯ: ಅಸಮಾಧಾನ

ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬಂದಂತ ಬೋನಸ್‌ನ್ನು ಸಾಮಗ್ರಿಗಳ ರೂಪದಲ್ಲಿ ನೀಡಲಾಗಿದೆ. ಅದನ್ನು ಸಹಿಸದ ಜೆ.ಡಿ.ಎಸ್‌ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಸೇರ್ಪಡೆ: ಕಾರ್ಯಕರ್ತ ಮುಖಂಡರ ಸಭೆಯಲ್ಲಿ ಸಾತನೂರು, ಕೋಡಿಹಳ್ಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ ಜೆ.ಡಿ.ಎಸ್‌ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT