ಸೋಮವಾರ, ಜುಲೈ 13, 2020
25 °C

ಗೋಲ್ಡ್‌ ಕೋಸ್ಟ್‌ ಸಾಧನೆ ಹೊಸ ಭವಿಷ್ಯಕ್ಕೆ ಚಿಮ್ಮುಹಲಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಲ್ಡ್‌ ಕೋಸ್ಟ್‌ ಸಾಧನೆ ಹೊಸ ಭವಿಷ್ಯಕ್ಕೆ ಚಿಮ್ಮುಹಲಗೆ

ಬಂಗಾರ ಬಣ್ಣದ ಮರಳಿನ ಕಡಲ ಕಿನಾರೆಗಳ ಗೋಲ್ಡ್‌ ಕೋಸ್ಟ್‌ಗೆ ಯಶಸ್ಸಿನ ಕನಸು ಕಾಣುತ್ತ ಹೋಗಿದ್ದ ಭಾರತದ ಕ್ರೀಡಾಪಟುಗಳು ಬೊಗಸೆ ತುಂಬ ಪದಕಗಳನ್ನು ಮೊಗೆದು ತಂದಿದ್ದಾರೆ. ಭಾನುವಾರ ಮುಕ್ತಾಯವಾದ 21ನೇ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 2014ರಲ್ಲಿ ಗ್ಲಾಸ್ಗೊದಲ್ಲಿ ನಡೆದಿದ್ದ ಕೂಟದಲ್ಲಿ ಗೆದ್ದಿದ್ದ 64 ಪದಕಗಳಿಗಿಂತ ಈ ಬಾರಿ ಎರಡು ಹೆಚ್ಚು ಬಂದಿವೆ. ಆದರೆ ಅಲ್ಲಿ ಕೇವಲ 15 ಚಿನ್ನದ ಪದಕಗಳು ಬಂದಿದ್ದವು. ಆಗ ಐದನೇ ಸ್ಥಾನದಲ್ಲಿದ್ದ ಭಾರತ ಈಗ ಮೂರನೇ ಸ್ಥಾನಕ್ಕೇರಿರುವುದು ಶುಭಸುದ್ದಿ. 2010ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಕೂಟದಲ್ಲಿ 101 ಪದಕ ಜಯಿಸಿದ್ದ ಸಾಧನೆ ಮುಂದೆ ಇದು ಕಡಿಮೆ ಎನಿಸಬಹುದು. ಆದರೆ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ವಿಭಿನ್ನ ಪರಿಸರ ಮತ್ತು ತೀವ್ರ ಪೈಪೋಟಿಯಲ್ಲಿ ಸಾಧನೆ ಮಾಡಿರುವುದು ಕಮ್ಮಿಯೇನಲ್ಲ. ಅದಲ್ಲದೇ ಹಲವು ಆಯಾಮಗಳಲ್ಲಿ ಈ ಕೂಟವು ಮಹತ್ವದ್ದೆನಿಸಿದೆ. ಕ್ರಿಕೆಟ್‌ ಆರಾಧನೆ ನಡೆಯುವ ಈ ದೇಶದಲ್ಲಿ ಉಳಿದ ಕ್ರೀಡೆಗಳಿಗೂ ಭವಿಷ್ಯ ಇದೆ ಎಂಬ ದಿಕ್ಸೂಚಿಯೂ ಇದಾಗಿದೆ. ಭಾರತದ ಪದಕಗಳ ಖಾತೆ ತೆರೆದಿದ್ದು ಕುಂದಾಪುರದ ವೇಟ್‌ಲಿಫ್ಟರ್ ಗುರುರಾಜ್ ಅವರು ಬೆಳ್ಳಿ ಗೆಲ್ಲುವ ಮೂಲಕ. ಅದಾದ ನಂತರ ಉಳಿದವರ ಯಶಸ್ಸಿನ ಪಯಣ ಶುರುವಾಯಿತು. ಇದೇ ಮೊದಲ ಬಾರಿಗೆ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಮಹಿಳೆಯರು ತಂಡ ವಿಭಾಗದ ಚಿನ್ನ ಜಯಿಸಿದರು. 22ರ ಹರೆಯದ ಮಣಿಕಾ ಬಾತ್ರಾ, ಟೇಬಲ್ ಟೆನಿಸ್ ಪ್ರಿಯರ ಕಣ್ಮಣಿಯಾದರು. ಸಿಂಗಲ್ಸ್‌ನಲ್ಲಿಯೂ ಪ್ರಥಮ ಸ್ಥಾನ ಪಡೆದ ಅವರು, ಡಬಲ್ಸ್‌ನಲ್ಲಿ ಮೌಮಾ ದಾಸ್ ಜೊತೆಗೆ ಬೆಳ್ಳಿ ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ಕಂಚಿಗೆ ಕೊರಳೊಡ್ಡಿದರು. ಪುರುಷರ ತಂಡವೂ ಚಿನ್ನದ ಸಾಧನೆ ಮಾಡಿತು. ಬ್ಯಾಡ್ಮಿಂಟನ್‌ ಮಿಶ್ರ ತಂಡವೂ ಇತಿಹಾಸ ಬರೆಯಿತು. ಮಹಿಳೆಯರ ಸಿಂಗಲ್ಸ್‌ನ ಮೊದಲೆರಡು ಸ್ಥಾನಗಳ ಮೇಲೆ ಸೈನಾ ನೆಹ್ವಾಲ್ ಮತ್ತು ಪಿ.ವಿ. ಸಿಂಧು ಪ್ರಾಬಲ್ಯ ಸಾಧಿಸಿದರು. ಹೋದ ವರ್ಷ ಗಂಭೀರವಾಗಿ ಗಾಯಗೊಂಡು ಚೇತರಿಸಿಕೊಂಡಿರುವ ಸೈನಾ, ತಂಡ ವಿಭಾಗ ಮತ್ತು ಸಿಂಗಲ್ಸ್‌ನಲ್ಲಿ ಆಡಿದ ರೀತಿ ಬೆರಗಾಗಿಸಿತ್ತು. ಡಬಲ್ಸ್‌ನಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ, ಸಿಕ್ಕಿ ರೆಡ್ಡಿ, ಪುರುಷರ ವಿಭಾಗದಲ್ಲಿ ಕೆ.ಶ್ರೀಕಾಂತ್, ಚಿರಾಗ್ ಶೆಟ್ಟಿ, ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರೂ ಹೆಜ್ಜೆಗುರುತು ಮೂಡಿಸಿದರು.

ವೈಯಕ್ತಿಕ ಕ್ರೀಡೆಗಳ ವಿಜೇತರ ಪಟ್ಟಿಯನ್ನು ಒಮ್ಮೆ ನೋಡಿದರೆ ಯುವಪಡೆಯೊಂದು ಸಿದ್ಧವಾಗಿರುವುದನ್ನು ಕಾಣಬಹುದು. ಶೂಟಿಂಗ್‌ನಲ್ಲಿ 15ರ ಪೋರ ಅನೀಶ್ ಭಾನವಾಲಾ, 16ರ ಬಾಲೆ ಮನು ಭಾಕರ್, 17 ವರ್ಷದ ಮೆಹುಲಿ ಘೋಷ್; ವೇಟ್‌ಲಿಫ್ಟಿಂಗ್‌ನಲ್ಲಿ ವೆಂಕಟ್ ರಾಹುಲ್ ರಾಗಲಾ, ವಿಕಾಸ್ ಠಾಕೂರ್, ಪೂನಂ ಯಾದವ್, ಸಾಯಿಕೋಮ್ ಮೀರಾಬಾಯಿ ಚಾನು; ಕುಸ್ತಿಯಲ್ಲಿ ರಾಹುಲ್ ಅವಾರೆ ತ್ರಿವರ್ಣ ಧ್ವಜವನ್ನು ಮೆರೆಸಿ ಬಂದಿದ್ದಾರೆ. ಅನುಭವಿ ಆಟಗಾರರೂ ಹಿಂದೆ ಬಿದ್ದಿಲ್ಲ. ಕುಸ್ತಿಯಲ್ಲಿ ಸುಶೀಲ್ ಕುಮಾರ್‌, ಬಾಕ್ಸಿಂಗ್‌ನಲ್ಲಿ ಮೂರು ಮಕ್ಕಳ ತಾಯಿ, 35ರ ಹರೆಯದ ಮೇರಿ ಕೋಮ್, ಶೂಟಿಂಗ್‌ನಲ್ಲಿ ಹೀನಾ ಸಿಧು, ಟಿ.ಟಿ.ಯಲ್ಲಿ ಶರತ್ ಕಮಲ್ ಮಿಂಚಿದರು. ಈ ಕೂಟದಲ್ಲಿ ಮಹಿಳೆಯರ ಸಾಧನೆ ಗಮನಾರ್ಹ. ಒಟ್ಟು ಮೂವತ್ತು ಪದಕಗಳು ನಾರಿಶಕ್ತಿಗೆ ಒಲಿದಿವೆ. ಮೀರಾಬಾಯಿ ಅವರು ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ ಗಳಿಸಿ ಕೊಟ್ಟರೆ, ಕೊನೆಯ ಚಿನ್ನದ ಕಾಣಿಕೆ ಸೈನಾ ನೆಹ್ವಾಲ್ ಅವರಿಂದ ಬಂದಿದ್ದು ವಿಶೇಷ. ಅಥ್ಲೆಟಿಕ್ಸ್‌ನಲ್ಲಿ ನೀರಜ್ ಚೋಪ್ರಾ, ಹಿಮಾ ದಾಸ್ ಮತ್ತು ಮಹಮ್ಮದ್ ಅನಾಸ್ ಅವರ ಸಾಧನೆಯೂ ಸಣ್ಣದಲ್ಲ. ಆದರೆ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ನಿರಾಸೆ ಮೂಡಿಸಿದವು. ಆರಂಭದಲ್ಲಿ ನಡೆದ ಸಿರಿಂಜ್ ಪ್ರಕರಣ ಮತ್ತು ಸಿರಿಂಜ್ ಬಳಕೆಮುಕ್ತ ನಿಯಮ ಉಲ್ಲಂಘನೆಗಾಗಿ ಭಾರತದ ಇಬ್ಬರು ಅಥ್ಲೀಟ್‌ಗಳನ್ನು ಹೊರಹಾಕಿದ್ದನ್ನು ಬಿಟ್ಟರೆ ದೊಡ್ಡ ಪ್ರಮಾದಗಳು ವರದಿಯಾಗಿಲ್ಲ. ಸೆಪ್ಟೆಂಬರ್‌ 2ರಿಂದ ಜಕಾರ್ತಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವು ಹೆಚ್ಚು ಪದಕಗಳನ್ನು ಗೆಲ್ಲುವ ಕನಸು ಬಿತ್ತುವಲ್ಲಿ ಕಾಮನ್‌ವೆಲ್ತ್ ಕೂಟ ಸಫಲವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.