ಮಂಗಳವಾರ, ಜೂಲೈ 7, 2020
27 °C

ಪುಲಿಟ್ಜರ್‌ ಪ್ರಶಸ್ತಿ 2018

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪುಲಿಟ್ಜರ್‌ ಪ್ರಶಸ್ತಿ 2018

ನ್ಯೂಯಾರ್ಕ್: 2018ನೇ ಸಾಲಿನ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಸಾರ್ವಜನಿಕ ಸೇವಾ ವಿಭಾಗದ ಪ್ರಶಸ್ತಿಗೆ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆ ಮತ್ತು ದಿ ನ್ಯೂ ಯಾರ್ಕರ್‌ ಮ್ಯಾಗಜೀನ್‌ ಆಯ್ಕೆಯಾಗಿವೆ.

ಇಲ್ಲಿನ ಕೊಲಂಬಿಯಾ ವಿ.ವಿ.ಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಪತ್ರಿಕೋದ್ಯಮದ ವರದಿಗಾರಿಕೆ, ಛಾಯಾಚಿತ್ರ, ವಿಮರ್ಶೆ, ವಿಶ್ಲೇಷಣೆ ಸೇರಿ 14 ವಿಭಾಗಗಳಲ್ಲಿ ಹಾಗೂ ಕಾದಂಬರಿ, ನಾಟಕ, ಸಂಗೀತ ಸೇರಿ ಕಲೆಗೆ ಸಂಬಂಧಿಸಿದ 7 ವಿಭಾಗಗಳಲ್ಲಿ ಪುಲಿಟ್ಜರ್‌ ಪ್ರಶಸ್ತಿ ನೀಡಲಾಗುತ್ತಿದೆ.

2016ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರಚಾರ ಕಾರ್ಯಕ್ಕೂ ರಷ್ಯಾ ಅಧಿಕಾರಗಳಿಗೂ ಇರುವ ನಂಟಿನ ಗುಟ್ಟಿನ ಮೇಲೆ ವರದಿಗಳ ಮೂಲಕ ಬೆಳಕು ಹರಿಸಿದ ದಿ ನ್ಯೂ ಯಾರ್ಕ್‌ ಟೈಮ್ಸ್‌ ಮತ್ತು ದಿ ವಾಷಿಂಗ್ಟನ್‌ ಪೋಸ್ಟ್‌ ರಾಷ್ಟ್ರೀಯ ವರದಿ ಪ್ರಶಸ್ತಿಗೆ ಪಾತ್ರವಾಗಿವೆ.

ವರ್ಜಿನಿಯಾದ ಚಾರ್ಲೊಟ್ಟೆಸ್ವಿಲ್ಲೆಯಲ್ಲಿ ಬಿಳಿಯರ ಪಾರಮ್ಯ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಮೇಲೆ ಕಾರೊಂದು ಹರಿದ ಚಿತ್ರವನ್ನು ರ್‍ಯಾನ್ ಕೆಲ್ಲಿ ಸೆರೆಹಿಡಿದಿದ್ದರು. ಈ ಚಿತ್ರವನ್ನು ಸ್ಫೋಟಕ ಸುದ್ದಿಯ ಫೋಟೋಗ್ರಫಿ ವಿಭಾಗದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಘಟನೆಯಲ್ಲಿ ಒಬ್ಬ ಮಹಿಳೆ ಸಾವಿಗೀಡಾಗಿದ್ದರು ಹಾಗೂ 19 ಮಂದಿ ಗಾಯಗೊಂಡಿದ್ದರು.

ಮುದ್ರಣ ಪತ್ರಿಕೋದ್ಯಮದ ಸ್ವರೂಪವನ್ನೇ ಬದಲಿಸಿದ ದೂರದೃಷ್ಟಿಯ ಪ್ರಕಾಶಕ ಎನಿಸಿದ ಹಾಗೂ ಸೇಂಟ್ ಲೂಯಿಸ್ ಪೋಸ್ಟ್ ಡಿಸ್‌ಪ್ಯಾಚ್ ಮತ್ತು ನ್ಯೂಯಾರ್ಕ್ ವರ್ಲ್ಡ್ ಪ್ರತಿಕೆಗಳನ್ನು ಪ್ರಕಟಿಸಿದ ಜೋಸೆಫ್ ಪುಲಿಟ್ಜರ್‌ ನೆನಪಿಗೆ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿಗಳನ್ನು 1917 ರಿಂದ ನೀಡಲಾಗುತ್ತಿದೆ.

ಪ್ರಶಸ್ತಿ ಪಟ್ಟಿಯಲ್ಲಿ ಕೆಲವು:
* ಬ್ರೇಕಿಂಗ್‌ ನ್ಯೂಸ್‌- ಪ್ರೆಸ್‌ ಡೆಮೋಕ್ರಾಟ್‌ (ಸಾಂತಾ ರೋಸಾದಲ್ಲಿನ ಕಾಳ್ಗಿಚ್ಚು ಕುರಿತ ವರದಿ)‌
* ವ್ಯಾಖ್ಯಾನ/ವಿವರಣೆ– ಜಾನ್‌ ಆರ್ಕಿಬಾಲ್ಡ್‌ (ಅಲಬಾಮಾ ಅಂಕಣಕಾರ)
* ಸ್ಥಳೀಯ ವರದಿಗಾರಿಕೆ– ಸಿನ್ಸಿನ್ನಾಟಿ ಎನ್‌ಕ್ವೈರರ್‌ ಪತ್ರಿಕೆ

(2017ರಲ್ಲಿ ಮ್ಯಾನ್ಮಾರ್‌ ಗಡಿ ದಾಟುವ ಸಮಯದಲ್ಲಿ ಮೊಹಮ್ಮದ್‌ ಶೋಯಬ್‌(7) ಎದೆಯ ಭಾಗ ಸೀಳಿದ್ದ ಗುಂಡು. ಬಾಂಗ್ಲಾದೇಶದ ಆಸ್ಪತ್ರೆಯ ಹೊರಭಾಗದಲ್ಲಿ ಮೊಹಮ್ಮದ್‌ನ ತಂದೆ ಎದೆಯ ಮೇಲೆ ಕೈ ಇಟ್ಟಿರುವುದು– ಚಿತ್ರ: ರಾಯ್‌ಟರ್ಸ್‌ )
* ಅಂತರರಾಷ್ಟ್ರೀಯ ವರದಿಗಾರಿಕೆ– ರಾಯ್‌ಟರ್ಸ್‌
* ಫೋಟೋಗ್ರಫಿ– ರಾಯ್‌ಟರ್ಸ್‌
* ಸಂಗೀತ– ರ್‍ಯಾಪ್‌ ಸಂಗೀತಗಾರ ಕೆಂಡ್ರಿಕ್‌ ಲ್ಯಾಮರ್‌ (ಡ್ಯಾಮ್‌ ಆಲ್ಬಮ್‌)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.